ಮಣ್ಣಿನ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡುವಂತೆ ಉಪವಿಭಾಗಾಧಿಕಾರಿ ಕಾಮಗೌಡ ಕರೆ
ಲೋಕದರ್ಶನ ವರದಿ,
ಜಮಖಂಡಿ 14 : ಗಣೇಶ ಉತ್ಸವದಲ್ಲಿ ತಂತ್ರಜ್ಞಾನಯುತ್ ಧ್ವನಿವರ್ಧಕಗಳನ್ನು ಬಳಸದೇ ನಾಡಿನ ಪಾರಂಪರಿಕ ಸಾರುವ ದೇಶಿಯ ವಾದ್ಯ-ಮೇಳಗಳ ಬಳಕೆ ಮಾಡಿ,ಅಂತಹ ಕಲಾವಿದರಿಗೆ ಬೆಂಬಲಿಸಬೇಕು. ನಾಡಿನ ಪರಿಸರ ಸಂರಕ್ಷಣೆಗೆ ಪ್ರತಿಯೊಂದು ಗಣೇಶ ಮಂಡಳಿಯವರು ಆದಷ್ಟು ಮಣ್ಣಿನ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಮಾಡಿ, ಮಾದರಿಯಗಬೇಕೆಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಕರೆ ನೀಡಿದರು.
ನಗರದ ಶಹರ ಪೋಲೀಸ್ ಠಾಣೆ ಮೈದಾನದಲ್ಲಿ ನಡೆದ ಗಣೇಶ ಉತ್ಸವ ಆಚರಣೆ ಪೂರ್ವಭಾವಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದರು. ಮಣ್ಣಿನ ವಿಗ್ರಹ ಮಾಡುವ ಕಲಾವಿದರನ್ನು ಪ್ರೋತ್ಸಾಹಿಸುವ ಕಾಲ ಇದಾಗಿದೆ. ಪಿಓಪಿ ವಿಗ್ರಹಗಳಿಂದ ನೀರು ಮಲೀನಗೊಂಡು ಸಾಂಕ್ರಾಮಿಕ ರೋಗಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ. ಸಾಮರಸ್ಯ, ಭಾವೈಕತೆ ಮೂಡಿಸುವ ಮಾದರಿ ಗಣೇಶೋತ್ಸವ ಆಚರಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇನ್ನಿತರ ಕೋಮಿನ ಜನರೊಂದಿಗೆ ಸ್ನೇಹ, ಭಾತೃತ್ವದಿಂದ ಹಬ್ಬ -ಹರಿದಿನಗಳನ್ನು ಆಚರಿಸಬೇಕು ಎಂದರು.
ಡಿವೈಎಸ್ಪಿ ಶಾಂತವೀರ ಮಾತನಾಡಿ, ಭಾರತದಲ್ಲಿ ಗಣೇಶ ಹಬ್ಬಕ್ಕೆ ತನ್ನದೇ ಆದ ವಿಶೇಷ ಸ್ಥಾನ ಮಾನವಿದೆ. ಸ್ವಾತಂತ್ಯ ಸಂಗ್ರಾಮದಲ್ಲಿ ಯುವಕರನ್ನು ಹುರುದುಂಬಿಸಲು ಗಣೇಶೋತ್ಸವ ಆಚರಣೆ ಪ್ರಾರಂಭಿಸಲಾಯಿತು. ವಿಘ್ನ ನಿವಾರಕನ ಹಬ್ಬವನ್ನು ಅದ್ದೂರಿಯಿಂದ ಆಚರಣೆ ಮಾಡುವುದು ಹಿಂದುಗಳಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಹಬ್ಬದಲ್ಲಿ ಪ್ರತಿಯೊಬ್ಬರೂ ಶಾಂತಿ-ಸುವ್ಯವಸ್ಥೆಂನ್ನು ಕಾಪಾಡಿಕೊಂಡು ಹಬ್ಬ ಆಚರಿಸಬೇಕು ಎಂದರು.
ತಹಸೀಲ್ದಾರ ಸದಾಶಿವ ಮಕ್ಕೋಜಿ, ಗೃಹ ರಕ್ಷಕದಳದ ರಾಜು ತಳವಾರ, ಹೆಸ್ಕಾಂ ಅಭಿಯಂತರ ದಯಾನಂದ ಮುಳ್ಳೂರ, ಗಣೇಶೋತ್ಸವ ಮಂಡಳದ ಡಾ.ರಾಕೇಶ ಲಾಡ, ಕುಶಾಲ ವಾಘ್ಮೋರೆ, ವಿನೋದ ಬಿರಾದಾರ, ಹಿರಿಯ ಪತ್ರಕರ್ತ ಗುರುರಾಜ ವಾಳ್ವೇಕರ, ಮಲ್ಲೇಶ ಆಳಗಿ, ಮಲ್ಲು ಮಠ, ಪ್ರದೀಪ ಮೆಟಗುಡ್ಡ, ಪ್ರದೀಪ ಕುಮಠೆ, ಗದಿಗೆಪ್ಪ ಧಾರವಾಡ, ಶ್ರೀನಿವಾಸ ಕಟ್ಟಮನಿ ಅನೇಕರು ಮಾತನಾಡಿದರು.
ಸಿಪಿಐ ಮಲ್ಲಪ್ಪ ಮಡ್ಡಿ, ನಗರಸಭೆ ಅಭಿಯಂತರೆ ಕುಸುಮಾ ಸಪ್ಪಲ್ಟ್, ಪಿಡಬ್ಲುಡಿ ಅಭಿಯಂತರ ವೆಂಕಟೇಶ ಆದಾಪೂರ, ಹೆಸ್ಕಾಂ ಎಈಈ ವಿಶಾಲ ಧರೆಪ್ಪಗೋಳ ವೇದಿಕೆಯಲ್ಲಿದ್ದರು. ಎಸೈ ಮಹೇಶ ಸಂಖ ಸ್ವಾಗತಿಸಿದರು. ಶಹರ ಎಸೈ ನಾಗರಾಜ ಕಿಲಾರಿ ವಂದಿಸಿದರು.