ಜಮಖಂಡಿ

ಆಧುನಿಕ ಭಾರತಕ್ಕೆ ಪೆರಿಯಾರ ಅವರ ಚಿಂತನೆ ಸಹಕಾರಿ: ಪರಶುರಾಮ

ಆಧುನಿಕ ಭಾರತಕ್ಕೆ ಪೆರಿಯಾರ ಅವರ ಚಿಂತನೆ ಸಹಕಾರಿ: ಪರಶುರಾಮ

ಲೋಕದರ್ಶನ ವರದಿ,

ಜಮಖಂಡಿ: 26: ಆಧುನಿಕ ಭಾರತಕ್ಕೆ ಪೆರಿಯಾರ ಅವರ ಚಿಂತನೆಗಳು ಸಹಕಾರಿಯಾಗಿವೆ ಎಂದು ಸತ್ಯ ಶೋಧಕ ಸಂಘದ ರಾಜ್ಯಾಧ್ಯಕ್ಷ ಪರಶುರಾಮ ಮಹಾರಾಜನವರ ಹೇಳಿದರು.

ನಗರದ ರೋಟರಿ ಕ್ಲಬ್ ಭವನದಲ್ಲಿ ತಾಲೂಕಾ ಸತ್ಯ ಶೋಧಕ ಸಂಘದ ಆಶ್ರಯದಲ್ಲಿ ನಡೆದ ಸ್ವಾಭಿಮಾನ ಚಳುವಳಿಯ ತಂದೆ ಪೆರಿಯಾರ ರಾಮಸ್ವಾಮಿ ನಾಯ್ಕರ ಅವರ 144ನೇ ಜಯಂತಿ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾನತೆ ತರುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ರ ಅಷ್ಟೆ ಪೆರಿಯಾರ ಅವರು ಮುಖ್ಯವಾಗಿದ್ದಾರೆ. ಅಸ್ಪೃಷ್ಯರಿಗೆ ಶಿಕ್ಷಣ ಮಿಸಲಾತಿ ಕೊಡಿಸುವಲ್ಲಿ ಪೆರಿಯಾರ ಅವರ ಹೋರಾಟದ ಫಲವಾಗಿ ಸಂವಿಧಾನದಲ್ಲಿ ಮೊದಲ ತಿದ್ದುಪಡಿಯಾಗಲಿಕ್ಕೆ ಕಾರಣವಾಗಿದೆ. ಪೆರಿಯಾರ ಹೊರಾಟದ ಮೂಲಕ ವೈಚಾರಿಕ ನೆಲೆಗಟ್ಟಿನ ಮೇಲೆ ಸಮಾನತೆ ತರುವಲ್ಲಿ ಅವರ ಜೀವನ ಎಲ್ಲರಿಗೂ ಪ್ರೇರಣೆ ಎಂದರು.

ಪೆರಿಯಾರ ಅವರು ದೇವಸ್ಥಾನ ಟ್ರಷ್ಟಿಯಾಗಿದ್ದರು, ಆದರೆ ದೇವರ ಹೆಸರಿನಲ್ಲಿ ಮೂಡನಂಬಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದರು, ಅವರು ಯಾವಾಗಲು ಮಾನವೀಯತೆ, ವೈಚಾರಿಕತೆ, ಸ್ವಾಭಿಮಾನ ಬೆಳೆಸಿಕೊಳ್ಳಬೇಕು, ಯಾರೋ ಹೇಳಿದರೆಂದು ಮೂಡನಂಬಿಕೆ ನಂಬಬಾರದು, ಅಸ್ಪೃಷ್ಯತೆಯನ್ನು ವಿರೋಧಿಸಬೇಕು ಎಂದು ಹೇಳಿದ್ದಾರೆ ಎಂದರು.

ಪೆರಿಯಾರ ಮೂಲತಃ ಕರ್ನಾಟಕ ರಾಜ್ಯದವರಾಗಿದ್ದಾರೆ, ದೇಶದ 140 ಕೋಟಿ ಜನರನ್ನು ಜ್ಯೋತಿಷ್ಯರು 12 ಭಾಗಗಳಾಗಿ ರಾಶಿಗಳಾಗಿ ವಿಂಗಡಿಸಿದ್ದಾರೆ. ವೈಜ್ಞಾನಿಕ ತಳಹದಿ ಇಲ್ಲದೆ ಇರುವುದೇ ಮೂಡನಂಬಿಕೆಯಾಗಿದೆ, ಪೂಜಾರಿಕೆ, ಪುರೋಹಿತಶಾಹಿ, ಜ್ಯೋತಿಷಿಯಂತ ಮೂಡನಂಬಿಕೆಯನ್ನು ಬಿತ್ತರಿಸುವ ಕಾರ್ಯ ಮಾಧ್ಯಮಗಳು ಮಾಡುತ್ತಿವೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಮಾತನಾಡಿ, ದೇವರು ಎಂದರೆ ಎಲ್ಲರು ಹೆದರುವಂತ ಕಾಲ ಘಟ್ಟದಲ್ಲಿ ದೇವರು ಇಲ್ಲ ಎಂದು ಹೇಳಿ ವೈಚಾರಿಕ ಚರ್ಚೆಗೆ ಮುನ್ನುಡಿ ಬರೆದಿದ್ದ ಪೆರಿಯಾರ ಸಮಾನತೆಯ ಸಾಕಾರಮೂರ್ತಿಯಾಗಿದ್ದರು ಎಂದರು.

ಬಾಗಲಕೋಟೆಯ ಭೂಸ್ವಾಧಿನ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ವೇದಿಕೆಯಲ್ಲಿ ತಾಲೂಕಾಧ್ಯಕ್ಷ ರಮೇಶ ಹಾದಿಮನಿ, ಬೆಳಗಾವಿ ಎಲ್ಐಸಿ ಎಸ್ಸಿ ಎಸ್ಟಿ ನೌಕರರ ಸಂಘದ ಕಾರ್ಯದರ್ಶಿ ಸಂಜಯ ಕ್ಯಾತನ್, ರಾಜ್ಯಪ್ರಧಾನ ಕಾರ್ಯದರ್ಶಿ ಶಂಕರಾನಂದ ಕುಂಚನೂರ, ಅರುಣ ಗರಸಂಗಿ ಇತರರು ಇದ್ದರು. ಸತ್ಯಪ್ಪ ಕಾಂಬಳೆ ಸ್ವಾಗತಿಸಿದರು. ದಶರಥ ಮಾದರ ಪ್ರಾಸ್ತವಿಕವಾಗಿ ಮಾತನಾಡಿದರು. ಸುಭಾಸ ಹಾದಿಮನಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ