ಮಹಾಸರಸ್ವತಿ ಪೂಜಾ ಕಾರ್ಯಕ್ರಮ
ಲೋಕದರ್ಶನ ವರದಿ
ಜಮಖಂಡಿ 22: ವಿದ್ಯೆಯು ಮಾನವನ ಆಭರಣವಾಗಿದ್ದು, ವಿದ್ಯೆಯಿಂದ ಎಲ್ಲವನ್ನೂ ಗಳಿಸಲು ಸಾಧ್ಯವೆಂದು ಮುಖ್ಯಗುರು ನಾರಾಯಣಶಾಸ್ತ್ರಿ ಹೇಳಿದರು.
ತಾಲೂಕಿನ ಕುಂಬಾರಹಳ್ಳ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಮಹಾಸರಸ್ವತಿ ಪೂಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾದೇವತೆ ಸರಸ್ವತಿ ಆಶೀರ್ವಾದ ಎಲ್ಲರುಗೂ ಬೇಕು. ವಿದ್ವಾನ ಸರ್ವತ್ರ ಪೂಜ್ಯತೇ ಎನ್ನುವಂತೆ ವಿದ್ಯಾವಂತ ನನ್ನು ಇಡೀ ಜಗತ್ತೇ ಗೌರವಿಸುತ್ತದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದಿ ಗುರಿ ಮುಟ್ಟಬೇಕು. ಸಮಾಜದ ಋಣ ತೀರಿಸಬೇಕಾಗಿದೆ ಎಂದರು.
ಶಿಕ್ಷಕ ಸಂಗಮೇಶ ಉಟಗಿ ಮಾತನಾಡಿ, ಲಕ್ಷ್ಮಿ ಇರುವಲ್ಲಿ ಸರಸ್ವತಿ ಇರುತ್ತಾಳೆಂದು ಹೇಳಲು ಸಾಧ್ಯವಿಲ್ಲ, ಸರಸ್ವತಿ ಇರುವಲ್ಲಿ ಲಕ್ಷ್ಮಿ ಇದ್ದೇ ಇರುತ್ತಾಳೆ,ಮೊದಲು ನೀವು ವಿದ್ಯೆಯನ್ನು ಗಳಿಸಿ ನಂತರ ಸಂಪತ್ತು ಕೀರ್ತಿ ಬಂದೇ ಬರುತ್ತದೆ. ನಾಗರಪಂಚಮಿಯ ಸಂದರ್ಭದಲ್ಲಿ ಹಾಲನ್ನು ಹುತ್ತಕ್ಕೆ ಎರೆಯುವ ಬದಲು ಬಡಮಕ್ಕಳಿಗೆ, ನಿರ್ಗತಿಕರಿಗೆ ಕುಡಿಯಲು ಕೊಡಿ, ಸಂಸ್ಕೃತಿ ಜೊತೆ ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಬೇಕೆಂದು ಎಂದರು.
ವಿದ್ಯಾರ್ಥಿಗಳಾದ ಸವಿತಾ ಕುರಣಿ, ಸಾವಿತ್ರಿ ಪಕಾಲಿ, ಸಿಂಚನಾ ಪಾಟೀಲ, ಅಶ್ವಿನಿ ನ್ಯಾಮಗೌಡ, ಕನ್ಯಾಕುಮಾರಿ ಕುರುಣಿ ಪ್ರಾರ್ಥಿಸಿದರು. ಸಂಜೀವ ಝಂಬುರೆ, ಆಸೀಫಾಭಾನು ಮೋಮಿನ್, ಶಕುಂತಲಾ ಬಿರಾದಾರ ಅನೇಕರಿದ್ದರು. ದೈಹಿಕ ಶಿಕ್ಷಕ ಬಾಹುಬಲಿ ಮುತ್ತೂರ ಸ್ವಾಗತಿಸಿದರು. ಶಿಕ್ಷಕಿ ಶಾರದಾ ಮಠ ವಂದಿಸಿದರು.