ಅಥಣಿ

ದಿ. 1 ರಂದು ಭಾರತ ಟಿಬೇಟ್, ಚೀನಾ, ಹಿಮಾಲಯನ್ ಜೀಯೋ ಪಾಲಿಟಿಕ್ಸ" ವಿಷಯದ ಕುರಿತು ಉಪನ್ಯಾಸ

ದಿ. 1 ರಂದು ಭಾರತ ಟಿಬೇಟ್, ಚೀನಾ, ಹಿಮಾಲಯನ್ ಜೀಯೋ ಪಾಲಿಟಿಕ್ಸ" ವಿಷಯದ ಕುರಿತು ಉಪನ್ಯಾಸ

ಅಥಣಿ 31:ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಲೋಕಮಾನ್ಯ ಬಾಲಗಂಗಾಧರ ಟಿಳಕರಿಗೂ ತಪೋ ಭೂಮಿ, ಆಧ್ಯಾತ್ಮ ಕೇಂದ್ರ ಅಥಣಿಗೂ ಅವಿನಾವ ಭಾವ ಸಂಬಂಧ. ಅಥಣಿಗೆ ಆಗಮಿಸಿದ್ದ ಲೋಕಮಾನ್ಯ ಟಿಳಕರ ನೆನಪಿಗಾಗಿ ಅವರ ಅಮೃತ ಹಸ್ತದಿಂದಲೇ ಆರಂಭಗೊಂಡ ಸಿದ್ಧೇಶ್ವರ ಮೋಫತ್ ವಾಚನಾಲಯ ಇಂದು ಗಡಿ ನಾಡಿನ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದಿದೆ. ಟಿಳಕರು 1917 ರಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಅಥಣಿಗೆ ಭೇಟಿ ನೀಡಿ ಇಲ್ಲಿಯ ಆಧ್ಯಾತ್ಮ ಯೋಗಿ ಮುರುಘೇಂದ್ರ ಶಿವಯೋಗಿಗಳ ಭೇಟಿ ಮಾಡಿ ಅಖಂಡ ಭಾರತ ಮತ್ತು ಸ್ವತಂತ್ರದ ಕುರಿತು ಚರ್ಚಿಸಿದ್ದರು ಈ ಸಮಯದಲ್ಲಿಯೇ ಹೊಮ್ಮಿದುದೇ ಸಿದ್ಧೇಶ್ವರ ಮೋಫತ್ ವಾಚನಾಲಯ.       

ವಾಚನಾಲಯ ಕೇವಲ ಪುಸ್ತಕಗಳ ಕೇಂದ್ರವಾಗದೇ ಇದೊಂದು ಸಾಮಾಜಿಕ ಜಾಗೃತಿಯ ಹಾಗೂ ಸಾಂಸ್ಕೃತಿಕ ಹಿರಿಮೆಗಳನ್ನು ಎತ್ತಿ ಹಿಡಿಯುವ ಕೇಂದ್ರವಾಗಬೇಕೆಂಬ ಟಿಳಕರ ಹಂಬಲಕ್ಕೆ ಅಥಣಿಯ ನಾಗರಿಕರು ಹೆಗಲೊಡ್ಡಿ ನಿಂತರು. ಪ್ರಾರಂಭದಲ್ಲಿ ವಾಚನಾಲಯಕ್ಕೆ ಬೇಕಾದ ಪಿಠೋಪಕರಣ, ಪುಸ್ತಕಗಳನ್ನು ಖರೀದಿಸಲು ಮುಷ್ಠಿ ಫಂಡನ ರೂಪದಲ್ಲಿ ಯಾರಿಗೆ ಎಷ್ಟು ನೀಡಲು ಸಾಧ್ಯವೋ ಅಷ್ಟು ಧನ ಸಂಗ್ರಹಿಸಲಾಯಿತು. ವಾಚನಾಲಯಕ್ಕೆ ಭದ್ರ ಬುನಾದಿ ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ದಿ.ವಿಷ್ಣುಪಂತ ದೇಶಪಾಂಡೆ ಮತ್ತು ದಿ.ನಾರದ ಮಾಸ್ತರರಂತಹ ಅನೇಕರ ಸತತ ಪ್ರಯತ್ನದ ಫಲವಾಗಿ ವಾಚನಾಲಯ ಬೆಳೆಯುತ್ತ ಬಂದಿತು. ಇಂದು  25 ಸಾವಿರಕ್ಕೂ ಹೆಚ್ಚು ಕನ್ನಡ, ಹಿಂದಿ, ಇಂಗ್ಲೀಷ, ಮರಾಠಿ, ತೆಲಗು, ಸಂಸ್ಕೃತ, ತಮಿಳು ಮತ್ತು ಉರ್ದು ಭಾಷೆಗಳ ಪುಸ್ತಕಗಳನ್ನು ಸಂಗ್ರಹಿಸಲಾಗಿದ್ದು, ಓದುಗರಿಗೊಂದು ಸರಸ್ವತಿಯ ಮಂದಿರವಾಗಿದೆ.     

ಅಥಣಿಯ ಹಿರಿಯ ಚೇತನ ಟಿಳಕರ ಅಭಿಮಾನಿ ದಿ.ಶಿವಪ್ಪ ಜಮಖಂಡಿಯವರು 1920 ರಲ್ಲಿ ಟಿಳಕರು ಸ್ವರ್ಗಸ್ಥರಾದಾಗ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅತ್ಯಂತ ಅಭಿಮಾನದಿಂದ ಲೋಕಮಾನ್ಯ ಟಿಳಕರ ಚಿತಾಭಸ್ಮವನ್ನು ಅಥಣಿಗೆ ತಂದರು. ಚಿತಾಭಸ್ಮವನ್ನು ಶ್ರೀ ಸಿದ್ಧೇಶ್ವರ ಮೋಫತ ವಾಚನಾಲಯದಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಿಸಿ ಇಡಲಾಯಿತು ಅಂದಿನಿಂದ  ವಾಚನಾಲಯದ ಜೊತೆಗೆ ಟಿಳಕ ಸ್ಮಾರಕ ಮಂದಿರದ ನಿರ್ಮಾಣ ಕೂಡ ಆಯಿತು. ದೇಶದಲ್ಲಿ ಕೇವಲ 5 ಸ್ಥಾನಗಳಲ್ಲಿ ಲೋಕಮಾನ್ಯ ಟಿಳಕರ ಚಿತಾ ಭಸ್ಮ ಇರುವ ರಾಷ್ಟ್ರೀಯ ಸ್ಮಾರಕಗಳಿವೆ ಈ ಪೈಕಿ ಅಥಣಿಯೂ ಒಂದು ಎನ್ನುವುದು ಅತ್ಯಂತ ಹೆಮ್ಮೆಯ ಸಂಗತಿ. 1985 ರಲ್ಲಿ ವಾಚನಾಲಯದ ಹಳೆಯ ಕಟ್ಟಡದ ನವೀಕರಣದ ಕಾರ್ಯ ಪ್ರಾರಂಭವಾಯಿತು ಅಥಣಿಯ ನಾಗರಿಕರು ಮತ್ತದೇ ಹುಮ್ಮಸ್ಸಿನಿಂದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಿದರು ಇದರ ಪ್ರತಿಫಲವಾಗಿ ಭವ್ಯ ಟಿಳಕ ಸ್ಮಾರಕ ಮಂದಿರದ ನಿರ್ಮಾಣವಾಯಿತು. ಟಿಳಕರ ಇಚ್ಛೆಯಂತೆ ಸಿದ್ಧೇಶ್ವರ ಮೋಫತ್ ವಾಚನಾಲಯದಲ್ಲಿ ಇಂದಿಗೂ ಸತತವಾಗಿ ವೈಚಾರಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳು, ಚಿಂತನೆ ಗೋಷ್ಟಿಗಳು ನಡೆಯುತ್ತಿವೆ. ಸ್ಮಾರಕ ಭವನ ನಿರ್ಮಾಣವಾದಂದಿನಿಂದಲೂ ಪ್ರತಿ ವರ್ಷ ಲೋಕಮಾನ್ಯ ಟಿಳಕರ ಪುಣ್ಯ ತಿಥಿಯ ನಿಮಿತ್ಯ ರಾಷ್ಟ್ರ ಜಾಗೃತಿಯ ಉಪನ್ಯಾಸ ಆಯೋಜಿಸಲಾಗುತ್ತದೆ         

ಅಗಸ್ಟ 1 ಗುರುವಾರ  ಸಂಜೆ 6 ಗಂಟೆಗೆ ಟಿಳಕ ಪುಣ್ಯ ತಿಥಿ ಅಂಗವಾಗಿ ಜಾಧವಜಿ ಶಿಕ್ಷಣ ಸಂಸ್ಥೆಯ ಕೆ.ಎ.ಲೋಕಾಪುರ ಪದವಿ ಮಹಾ ವಿದ್ಯಾಲಯದಲ್ಲಿ "ಭಾರತ, ಟಿಬೇಟ್, ಚೀನಾ ಮತ್ತು ಹಿಮಾಲಯನ್ ಜೀಯೋ ಪಾಲಿಟಿಕ್ಸ" ವಿಷಯದ ಮೇಲೆ ವಿಶೇಷ ಉಪನ್ಯಾಸ ಆಯೋಜಿಸಲಾಗಿದ್ದು, ಉಪನ್ಯಾಸಕರಾಗಿ ಕೋರ್ ಗ್ರುಪ್ ಫಾರ್ ಟಿಬೇಟಿಯನ್ ಕಾಸ್‌/ಇಂಡಿಯಾ, ನವ ದೇಹಲಿಯ ರಾಷ್ಟ್ರೀಯ ಸಹ ಸಂಯೋಜಕರಾದ ಹುಬ್ಬಳ್ಳಿಯ ಅಮೃತ ಜೋಶಿ  ಆಗಮಿಸುವರು. ಅಥಣಿಯ ವಿವೇಕಾನಂದ ವಿದ್ಯಾ ವಿಕಾಸ ಸಂಸ್ಥೆಯ ಕಾರ್ಯಾಧ್ಯಕ್ಷ ಡಿ.ಡಿ.ಮೇಕನಮರಡಿ ಅಧ್ಯಕ್ಷತೆ ವಹಿಸುವರು, ವಾಚನಾಲಯದ ಉಪಾಧ್ಯಕ್ಷ ನ್ಯಾಯವಾದಿ ಎಸ್‌.ಎಮ್‌.ಪಾಟೀಲ ಉಪಸ್ಥಿತರಿರುವರು. 


ಸುದ್ದಿ ಓದಿ