“ರಾಜ್ಯಾಧ್ಯಕ್ಷರ ನಡೆ - ನಿರ್ದೇಶಕರ ಕಡೆ” ಕಾರ್ಯಕ್ರಮಕ್ಕೆ ಚಾಲನೆ
. ವಿಜಯನಗರ 11: ದಿನಾಂಕ:10.11.2025ರಂದು ಸಂಜೆ:07:30ಕ್ಕೆ ವಿಜಯನಗರ ಮಹಾ ವಿದ್ಯಾಲಯದ ಸುವರ್ಣ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ “ರಾಜ್ಯಾಧ್ಯಕ್ಷರ ನಡೆ-ನಿರ್ದೇಶಕರ ಕಡೆ” ಎಂಬ ವಿನೂತನ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲಾ ನೌಕರರ ಸಂಘದ ಕಾರ್ಯಕಾರಣಿ ಸಭೆಯಲ್ಲಿ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಚಾಲನೆ ನೀಡಲಾಯಿತು. ನಂತರ ಸತತ ಎರಡನೇ ಬಾರಿಗೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಸಿ.ಎಸ್.ಷಡಾಕ್ಷರಿಯವರನ್ನ ಜಿಲ್ಲಾ ಶಾಖೆವತಿಯಿಂದ ಅದ್ಧೂರಿ ಅಭಿನಂದನೆ ಸಲ್ಲಿಸಲಾಯಿತು.
ರಾಜ್ಯಾಧ್ಯಕ್ಷರಾದ ಎಸ್.ಷಡಾಕ್ಷರಿಯವರು ಅಭಿನಂದನೆ ಸ್ವೀಕರಿಸಿ ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇಡೀ ದೇಶದಲ್ಲಿಯೇ ಮಾದರಿ ಸಂಘವಾಗಿದೆ ಸರ್ಕಾರದ ಒಡನಾಟದಿಂದ ಇಲ್ಲಿಯವರೆಗೆ ಸರ್ಕಾರಿ ನೌಕರರ ಹಿತಕ್ಕಾಗಿ 40ಕ್ಕೂ ಹೆಚ್ಚು ಆದೇಶಗಳನ್ನು ಮಾಡಿಸಲಾಗಿದೆ. ಅಲ್ಲದೆ ಸಂಘದಿಂದ ಕೇಂದ್ರದ ಮಾದರಿ ವೇತನಕ್ಕಾಗಿ ಒತ್ತಾಯಿಸಿದ್ದು, 2026-27ರ ಅಂತ್ಯದ ವೇಳೆಗೆ ಕೇಂದ್ರ ಮಾದರಿ ವೇತನ ಜಾರಿಯಾಗಲಿದೆ. ಅಲ್ಲದೇ ಶೀಘ್ರದಲ್ಲಿ ಎನ್.ಪಿ.ಎಸ್. ರದ್ದುಪಡಿಸಿ ಓ.ಪಿ.ಎಸ್. ಜಾರಿಗಾಗಿ ಸರ್ಕಾರವನ್ನು ಒತ್ತಾಯಿಸಿದ್ದು, ಶೀಘ್ರದಲ್ಲಿ ಹಳೇ ಪಿಂಚಣಿ ವ್ಯವಸ್ಥೆ ಜಾರಿಯಾಗುವ ಸಾಧ್ಯತೆ ಇದೆ.
ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರಿಗಾಗಿ ಅಕ್ಟೋಬರ್ 01 ರಿಂದ ಆರೋಗ್ಯ ಸಂಜೀವಿನಿ ಜಾರಿಯಾಗಿದ್ದು, ಈ ಯೋಜನೆಯಲ್ಲಿ ಮಹಿಳಾ ನೌಕರರು ತಮ್ಮ ತಂದೆ ತಾಯಿಯವರಿಗೂ ಕೂಡ ಉಚಿತ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಸುಮಾರು 2000 ವಿವಿಧ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ದೊರೆಯಲಿದ್ದು, ಸರ್ಕಾರಿ ನೌಕರರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಅಲ್ಲದೇ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಿಲಿಟರಿ ಕ್ಯಾಂಟಿನ್ ಮಾದರಿಯಲ್ಲಿ ಸರ್ಕಾರಿ ನೌಕರರಿಗೆ ರಿಯಾಯಿತಿ ಧರದಲ್ಲಿ ಗೃಹಪಯೋಗಿ ಹಾಗೂ ವಿದ್ಯುತ್ ಪರಿಕಾರಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು. ಸಂಘಟನೆಯ ಪದಾಧಿಕಾರಿಗಳು ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸದಾ ಸ್ಪಂಧಿಸಬೇಕು ಹಾಗೂ ಅವರ ನೋವು ನಲಿವುಗಳಲ್ಲಿ ಭಾಗಿಯಾಗಬೇಕು ಎಂದು ಕಿವಿಮಾತು ಹೇಳಿದರು. ನಂತರ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನೌಕರರ ಸಂಘದ ನಿರ್ದೇಶಕರೊಂದಿಗೆ ಸಂವಾದ ನಡೆಸಿ ನೌಕರರ ಗೊಂದಲಗಳಿಗೆ ಪರಿಹಾರ ಒದಗಿಸಿದರು.
ವಿಜಯನಗರ ಜಿಲ್ಲಾಧ್ಯಕ್ಷರಾದ ಜಿ.ಮಲ್ಲಿಕಾರ್ಜುನಗೌಡರವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರಿ ನೌಕರರ ಇತಿಹಾಸದಲ್ಲಿಯೇ ಇಂತಹ ಕ್ರಿಯಾಶೀಲ ರಾಜ್ಯಾಧ್ಯಕ್ಷರನ್ನ ಕಂಡಿರಲಿಲ್ಲ. ಸದಾ ನೌಕರರ ಏಳಿಗೆಗೆ ಶ್ರಮಿಸುತ್ತಿರುವ ಕ್ರಿಯಾಶೀಲ ರಾಜ್ಯಾಧ್ಯಕ್ಷರ ವ್ಯಕ್ತಿತ್ವ ನಮಗೆಲ್ಲಾ ಮಾದರಿಯಾಗಿದೆ. ಸರ್ಕಾರಿ ನೌಕರರಿಗೆ 07ನೇ ವೇತನ ಆಯೋಗ ಜಾರಿ, ಆರೋಗ್ಯ ಸಂಜೀವಿನಿ ಯೋಜನೆ, ವೇತನ ಪ್ಯಾಕೇಜ್, ಶಿಶುಪಾಲನಾ ರಜೆ ಹಾಗೂ ಮುಂತಾದ ಸೌಲಭ್ಯಗಳನ್ನ ದೊರಕಿಸುವಲ್ಲಿ. ರಾಜ್ಯಾಧ್ಯಕ್ಷರ ಪಾತ್ರ ಮಹತ್ತರವಾಗಿದೆ. ಅಲ್ಲದೇ “ರಾಜ್ಯಾಧ್ಯಕ್ಷರ ನಡೆ - ನಿರ್ದೇಶಕರ ನಡೆ” ಎಂಬ ವಿನೂತನ ಕಾರ್ಯಕ್ರಮಕ್ಕೆ ವಿಜಯನಗರ ಜಿಲ್ಲೆಯಲ್ಲಿ ಚಾಲನೆ ನೀಡಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಸರ್ಕಾರಿ ನೌಕರರು ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದರೊಂದಿಗೆ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನಕಾರ್ಯದರ್ಶಿ ಹೆಚ್.ಗಿರಿಗೌಡ, ರಾಜ್ಯಗೌರವಾಧ್ಯಕ್ಷ ಎಸ್.ಬಸವರಾಜ, ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ರಾಜ್ಯ ಉಪಾಧ್ಯಕ್ಷರಾದ ಡಾ. ಸದಾನಂದ ನೆಲಕುದರಿ, ಮತ್ತು ಹರ್ಷ. ತಾಲೂಕು ಅಧ್ಯಕ್ಷರುಗಳಾದ ಎಂ.ಪಿ.ಎಂ.ಮಂಜುನಾಥ, ಕೊಟ್ರಗೌಡ್ರು, ವೆಂಕಟೇಶ್, ಮನೋಹರ, ಯೋಗೇಶ್ವರ ದಿನ್ನಿ, ಎನ್.ಪಿ.ಎಸ್.ರಾಜ್ಯಾಧ್ಯಕ್ಷ ನಾಗನಗೌಡ, ಜಿಲ್ಲಾ ಖಜಾಂಚಿ ಮಲ್ಲೇಶಪ್ಪ, ರಾಜ್ಯ ಪರಿಷತ್ ಸದಸ್ಯ ರಾಘವೇಂದ್ರ ಹೆಗಡಿಯಾಳ್, ಕಾರ್ಯದರ್ಶಿ ಪಂಪಣ್ಣ, ಸಂಘದ ಪದಾಧಿಕಾರಿಗಳಾದ ರಾಜೀವ್, ಮುನಿವಾಸುದೇವ ರೆಡ್ಡಿ, ಕಡ್ಲಿವೀರಭದ್ರೇಶ, ಬಸವರಾಜ.ಕೆ. ಅಂದಾನಗೌಡ, ಸುಧಾದೇವಿ, ಲತಾ, ಕೃಷ್ಣ ದುಂಡಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ನಿರ್ದೇಶಕರು, ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.