ಸಹಕಾರಿ ಸಂಘ ಗ್ರಾಹಕರ ಹಿತ ಕಾಪಾಡುವ ಪ್ರಾಮಾಣಿಕ ಸಂಸ್ಥೆ
ಸಹಕಾರಿ ಸಂಘ ಗ್ರಾಹಕರ ಹಿತ ಕಾಪಾಡುವ ಪ್ರಾಮಾಣಿಕ ಸಂಸ್ಥೆ
ಅಥಣ 21: ಹುಲ್ಲೋಳಿಯ ಅರಿಹಂತ ಸೌಹಾರ್ದ ಸಹಕಾರಿ ಸಂಘ ಗ್ರಾಹಕರ ಹಿತ ಕಾಪಾಡುವ ಮೂಲಕ ಪ್ರಾಮಾಣಿಕ ಸಹಕಾರಿ ಸಂಸ್ಥೆಯಾಗಿ ಬೆಳೆದಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ಅಥಣಿಯಲ್ಲಿ ಅರಿಹಂತ. ಸೌಹಾರ್ದ ಸಹಕಾರಿಯ 11 ಶಾಖೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಳೆದ 25 ವರ್ಷಗಳಿಂದ ಸಹಕಾರಿ ರಂಗದಲ್ಲಿ ಪರಿಣಾಮಕಾರಿಯಾಗಿ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಅರಿಹಂತ ಸೌಹಾರ್ದ ಸಹಕಾರಿ ಸಾಲಗಾರರಿಗೆ ಸಾಲ ನೀಡುವ ಮೂಲಕ ಮತ್ತು ಠೇವಣಿದಾರರ ಹಿತ ಕಾಯುವ ಮೂಲಕ ಆರ್ಥಿಕ ಭದ್ರತೆ ಒದಗಿಸಿದೆ. ಅನೇಕ ಸಹಕಾರ ಸಂಘಗಳ ಮತ್ತು ಸಂಸ್ಥೆಗಳ ಉದ್ಘಾಟನಾ ಸಮಾರಂಭಕ್ಕೆ ನನ್ನನ್ನು ಆವ್ಹಾನಿಸುತ್ತಾರೆ ಆದರೆ ಆ ಕಾರ್ಯಕ್ರಮಗಳಿಗೆ ಹೋಗುವ ಮೊದಲು ಆ ಸಂಸ್ಥೆಗಳ ಪ್ರಾಮಾಣಿಕತೆ ಮತ್ತು ಉದ್ದೇಶ ಗಮನಿಸಿ ಹೋಗುತ್ತೇನೆ ಎಂದ ಅವರು ಅರಿಹಂತ ಸೌಹಾರ್ದ ಸಹಕಾರಿಯ ಪ್ರಾಮಾಣಿಕತೆ ಗಮನಿಸಿ ಕಾರ್ಯಕ್ರಮಕ್ಕೆ ಆಗಮಿಸಿರುವೆ ಎಂದು ಹೇಳಿದರು. ಡಾ.ಮನಮೋಹನ್ ಸಿಂಗ ಕೇಂದ್ರ ಹಣಕಾಸು ಸಚಿವರಿದ್ದ ಸಂದರ್ಭದಲ್ಲಿ ಅರ್ಧನಾರೇಶ್ವರ ನೇತೃತ್ವದಲ್ಲಿ ಜಾರಿಯಾದ ಸೌಹಾರ್ದ ಕಾನೂನು 2001 ರಲ್ಲಿ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಜಾರಿಗೊಂಡಿತು. ಸರಕಾರದ ಹಸ್ತಕ್ಷೇಪ ಮತ್ತು ಅಧಿಕಾರಿಗಳ ಕಿರುಕುಳ ತಪ್ಪಿಸುವ ಉದ್ದೇಶದಿಂದ ಸೌಹಾರ್ದ ಕಾನೂನು ಜಾರಿಗೊಂಡಿತು ಆದರೆ ಇತ್ತೀಚಿಗೆ ಅನೇಕ ಸೌಹಾರ್ದ ಸಹಕಾರಿಗಳು ಗ್ರಾಹಕರಿಗೆ ಪಂಗನಾಮ ಹಾಕಿದ ಪರಿಣಾಮ ಆಡಳಿತ ಮಂಡಳಿಯ ಅನೇಕ ಸದಸ್ಯರು ಜೈಲಿನ ಕಂಬಿ ಎಣಿಸುತ್ತಿದ್ದು, ಸೌಹಾರ್ದ ಸಹಕಾರಿಯನ್ನು ಎಚ್ಚರಿಕೆ ಮತ್ತು ಪ್ರಾಮಾಣಿಕತೆಯಿಂದ ಮುನ್ನಡೆಸಿಕೊಂಡು ಹೋಗಬೇಕಿದೆ ಎಂದರು.
ರಾಜ್ಯದ ಸೌಹಾರ್ದ ಕಾನೂನಿನಲ್ಲಿ ಕೆಲ ಬದಲಾವಣೆ ತರಬೇಕು ಎನ್ನುವ ಉದ್ದೇಶದಿಂದ ಸಿಎಮ್ ಸಿದ್ಧರಾಮಯ್ಯ ನನ್ನ ಅಧ್ಯಕ್ಷತೆಯಲ್ಲಿಯೇ ಸಮೀತಿ ರಚನೆ ಮಾಡಿದ್ದು, ಈ ಸಮೀತಿ ಮೂಲಕ ಸಮಗ್ರ ಅಧ್ಯಯನ ನಡೆಸಿ ಸಹಾರ್ದ ಕಾನೂನಿಗೆ ಅನೇಕ ತಿದ್ದುಪಡಿ ತರಲಾಗಿದ್ದು, ಈ ಪೈಕಿ ಎಲ್ಲ ಸೌಹಾರ್ದ ಸಹಕಾರಿಗಳು ಮೂರು ವರ್ಷಕ್ಕೆ ಒಂದು ಬಾರಿಯಾದರೂ ಸರಕಾರಿ ಲೆಕ್ಕ ಪರಿಶೋಧಕರಿಂದ ಲೆಕ್ಕ ಪರಿಶೋಧನೆ ಮಾಡಿಸಬೇಕು ಎಂದ ಅವರು ಈ ತಿದ್ದುಪಡಿಗಳಿಗೆ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಗಳಲ್ಲಿ ಅನುಮೋದನೆ ಪಡೆದು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ. ಸೌಹಾರ್ದ ಸಹಕಾರಿ ಸದುಪಯೋಗ ಆಗಬೇಕು ಹೊರತು ದುರುಪಯೋಗ ಆಗಬಾರದು ಎಂದು ಕರೆ ನೀಡಿದರು.
ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ ಮಾತನಾಡಿ, ಅರಿಹಂತ ಸೌಹಾರ್ದ ಸಹಕಾರಿಯನ್ನು 1999 ರಲ್ಲಿ 300 ಜನ ಸದಸ್ಯರೊಂದಿಗೆ ಹುಕ್ಕೇರಿ ತಾಲೂಕಿನ ಹುಲ್ಲೋಳಿ ಗ್ರಾಮದಲ್ಲಿ ಪ್ರಾರಂಭಗೊಂಡ ಅರಿಹಂತ ಸೌಹಾರ್ದ ಸಹಕಾರಿ ಬೃಹದಾಕಾರವಾಗಿ ಬೆಳೆದು ನಿಂತಿದ್ದು, ಪ್ರಸಕ್ತ ಸಾಲಿನಲ್ಲಿ ನಮ್ಮ ಸಹಕಾರಿ ಸಂಘ 6 ಕೋಟಿ 60 ಲಕ್ಷ ರೂ.ಲಾಭ ಗಳಿಕೆ ಮಾಡಿದೆ ಎಂದ ಅವರು ಜಿಲ್ಲೆಯ ವಿವಿಧ ಗ್ರಾಮ ಮತ್ತು ಪಟ್ಟಣಗಳಲ್ಲಿ 10 ಶಾಖೆಗಳನ್ನು ಪ್ರಾರಂಭಿಸಿ ಅಥಣಿಯಲ್ಲಿ 11 ನೇ ಶಾಖೆಗೆ ಚಾಲನೆ ನೀಡಲಾಗಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಾಳಾಸಾಹೇಬ ಲೋಕಾಪುರ ಇವರನ್ನು ಸಹಕಾರಿ ಸಂಘದಿಂದ ಸತ್ಜರಿಸಲಾಯಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಭರಮಪ್ಪ ಚೌಗಲಾ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಥಣಿ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಉದ್ಯಮಿ ಬಾಹುಬಲಿ ಅಸ್ಕಿ, ಪುರಸಭಾ ಸದಸ್ಯ ಸಂತೋಷ ಸಾವಡಕರ, ಉದ್ಯಮಿ ಸಂದೀಪ ತೀರ್ಥ, ವಕೀಲ ಬಾಹುಬಲಿ ಕಡೋಲಿ ಇವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಹಕಾರಿ ಸಂಘದ ನಿರ್ದೇಶಕ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ ಮತ್ತು ಹಿತೈಷಿಗಳು ಪಾಲ್ಗೊಂಡಿದ್ದರು.