ಬ್ರಾಹ್ಮಣ ಮಹಾಸಭಾದ ಸುವರ್ಣ ಸಂಭ್ರಮದ ಸವಿ ನೆನಪಿನಲ್ಲಿ "ವಿಶ್ವಾಮಿತ್ರ" ಬ್ರಾಹ್ಮಣ ಮಹಾ ಸಮ್ಮೇಳನ
ಬ್ರಾಹ್ಮಣ ಮಹಾಸಭಾದ ಸುವರ್ಣ ಸಂಭ್ರಮದ ಸವಿ ನೆನಪಿನಲ್ಲಿ "ವಿಶ್ವಾಮಿತ್ರ" ಬ್ರಾಹ್ಮಣ ಮಹಾ ಸಮ್ಮೇಳನ
ಅಥಣಿ 08 :ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುವರ್ಣ ಸಂಭ್ರಮದ ಸವಿ ನೆನಪಿನಲ್ಲಿ "ವಿಶ್ವಾಮಿತ್ರ" ಬ್ರಾಹ್ಮಣ ಮಹಾ ಸಮ್ಮೇಳನ ಜನೇವರಿ 18 ಶನಿವಾರ ಮತ್ತು 19 ಭಾನುವಾರದಂದು ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷರಾದ ಅಶೋಕ ಹಾರನಹಳ್ಳಿ ತಿಳಿಸಿದರು. ಅವರು ಬೆಳಗಾವಿ ಸಂಕಮ ಹೊಟೇಲ್ ನ ಸಭಾಂಗಣದಲ್ಲಿ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಂಸ್ಕಾರ, ಸಂಘಟನೆ, ಸ್ವಾವಲಂಬನೆ, ವೇದ, ಧರ್ಮ, ಸಂಸ್ಕೃತಿಗಳ ಸಂರಕ್ಷಣೆ, ಏಕತೆಯ ಅನುಪಾಲನೆ ಹಾಗೂ ಸಧೃಢ ರಾಷ್ಟ್ರ ನಿರ್ಮಾಣವೇ ಈ ಸಮಾವೇದ ಉದ್ದೇಶವಾಗಿದೆ ಎಂದ ಅವರು ಪ್ರಮುಖವಾಗಿ ಈ ಸಮಾವೇಶದಲ್ಲಿ ತ್ರೀಮತಸ್ಥ ಬ್ರಾಹ್ಮಣ ಸಮಾಜದ ಪ್ರಮುಖ ಪೀಠಾಧಿಪತಿಗಳು, ಬಾಂಧವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ರಾಜ್ಯದ ಗಡಿ ಬೆಳಗಾವಿ ಜಿಲ್ಲೆ ಬ್ರಾಹ್ಮಣ ಸಮಾಜ ಸಂಘಟನೆ ಇಡೀ ರಾಜ್ಯದಲ್ಲಿಯೇ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನ ಸಮಾವೇಶಕ್ಕೆ ಇಲ್ಲಿಂದಲೇ ನಮಗೆ ಪ್ರೇರಣೆ ದೊರಕಿದ್ದು, ಬ್ರಾಹ್ಮಣ ಸಮಾಜದ ಬಂಧುಗಳು ಉದ್ಯಮ, ವ್ಯಾಪಾರ-ವಹಿವಾಟು, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮತ್ತು ಕೃಷಿ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಸಮ್ಮೇಳನಕ್ಕೆ ತನು, ಮನ, ಧನದಿಂದ ಸಹಕಾರ ನೀಡಬೇಕು ಎಂದು ಮನವಿ ಮಾಡಿದ ಅವರು ಬೆಳಗಾವಿ ಮಹಾನಗರ ಮತ್ತು ಜಿಲ್ಲೆಯ ವಿವಿಧ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು. ಸಮ್ಮೇಳನದಲ್ಲಿ ಉತ್ತರಾಧಿ ಮಠದ ಶ್ರೀ ಸತ್ಯಾತ್ಮ ತೀರ್ಥ ಮಹಾ ಸ್ವಾಮಿಗಳು, ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರಭಾರತೀ, ಶ್ರೀ ಭಾರತೀತಿರ್ಥ ಮಹಾಸ್ವಾಮಿಗಳು, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ, ಸೋಂದಾ ಸ್ವರ್ಣವಲ್ಲಿ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಶೃಂಗೇರಿ ಶಿವಗಂಗಾ ಮಠದ ಶ್ರೀ ಪುರುಷೋತ್ತಮ ಭಾರತೀ ಸ್ವಾಮಿಗಳು, ಶ್ರೀ ಸಂಸ್ಥಾನ ಗೋಕರ್ಣದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಮನ್ನೆಲೆಮಾವಿನ ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ, ಅವನಿ ಶೃಂಗೇರಿ ಮಠದ ಶ್ರೀ ಅದ್ವೈತಾನಂದ ಭಾರತೀ ಸ್ವಾಮೀಜಿ ಮತ್ತು ಬೆಳಗಾವಿ ಜಿಲ್ಲೆಯ ಮುರುಗೋಡು ಚಿದಂಬರ ಮಠದ ಶ್ರೀ ದಿವಾಕರ ದೀಕ್ಷಿತರು ಸೇರಿದಂತೆ ಇನ್ನೂ ಅನೇಕ ಪ್ರಮುಖ ಪೀಠಾಧಿಪತಿಗಳು ಭಾಗವಹಿಸಿ ಮಾರ್ಗದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು. ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವೇದ ಪಾರಾಯಣ, ಧರ್ಮ ಸಭೆ, ವಿಚಾರ ಗೋಷ್ಠಿಗಳು, ಸಾಧಕರಿಗೆ ಸನ್ಮಾನಿಸಲಾಗುವುದು ಜೊತೆಗೆ ಸಮ್ಮೇಳನದ ಮತ್ತೊಂದು ವೇದಿಕೆಯಲ್ಲಿ ವ್ಯಾಪಾರ, ವಾಣಿಜ್ಯ ಸಮಾವೇಶ, ವಧು-ವರರ ಸಮಾಗಮ, ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ತಮಗಳನ್ನು ಆಯೋಜಿಸಲಾಗುವುದು ಎಂದ ಅವರು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಹಾಗೂ ರಾಜ್ಯ ಸಚಿವ ಸಂಪುಟದ ಸಚಿವರು, ಶಾಸಕರು, ಸಂಸದರು ಮತ್ತು ನಾಡಿನ ಪ್ರಮುಖ ವಿಪ್ರ ಬಂಧುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಉದ್ಯಮಿ ಅನೀಲ ಪೊತದಾರ ಮಾತನಾಡಿ, ಬೆಂಗಳೂರಿನಲ್ಲಿ ನಡೆಯಲಿರುವ ಬ್ರಾಹ್ಮಣ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದರು. ಬ್ರಾಹ್ಮಣ ಸಮಾಜ ಟ್ರಸ್ಟನ ರಾಮ ಭಂಡಾರಿ, ಶೀರೀಶ್ ಕಾನಟ್ಕರ, ಅಥಣಿಯ ಹಿರಿಯ ನ್ಯಾಯವಾದಿ ಎನ್.ಕೆ.ಪಾಟೀಲ ಮಾತನಾಡಿ, ಸಮ್ಮೇಳನದ ಯಶಸ್ಸಿಗೆ ನಾವೆಲ್ಲ ಕೈ ಜೋಡಿಸುತ್ತೇವೆ ಎಂದು ಹೇಳಿದರು. ಪ್ರಸ್ತಾವಿಕವಾಗಿ ಬ್ರಾಹ್ಮಣ ಮಹಾಸಭಾದ ರಾಜ್ಯ ಜಂಟಿ ಕಾರ್ಯದರ್ಶಿ ಕಾರ್ತಿಕ ಬಾಪಟ ಸಮ್ಮೇಳನದ ಕುರಿತು ಮಾತನಾಡಿದರು. ಅಥಣಿಯ ಪತ್ರಕರ್ತ ವೆಂಕಟೇಶ ದೇಶಪಾಂಡೆ ಸರ್ವರನ್ನು ಸ್ವಾಗತಿಸಿ, ವಂದಿಸಿದರು. ಬ್ರಾಹ್ಮಣ ಸಮಾಜದ ಭರತ ದೇಶಪಾಂಡೆ, ವಿಲಾಸ ಜೋಶಿ, ನಗರ ಸೇವಕರಾದ ವಾಣಿ ಜೋಶಿ, ಜಯತೀರ್ಥ ಸೌದತ್ತಿ, ಶ್ರೀಮತಿ ಪ್ರೀಯಾ ಪುರಾಣಿಕ, ಸಂದೀಪ ದೇಶಪಾಂಡೆ, ವಾದಿರಾಜ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.