"ಆತ್ಮವಿಶ್ವಾಸವೊಂದಿದ್ದರೇ ಜಗತ್ತನ್ನೇ ಗೆಲ್ಲಬಹುದು"
-ಪ್ರವೀಣ ಗಿರಿ, ಚನ್ನಮ್ಮ ಕಿತ್ತೂರ
ಈ ಜೀವನವೇ ವಿಚಿತ್ರ. ಜೀವನದ ಬಗ್ಗೆ ಪರಿಪೂರ್ಣ ಅರ್ಥವಾಗುವುದು ಅದರ ಬಗ್ಗೆ ಜಿಗುಪ್ಸೆ ಉಂಟಾದಾಗ, ಆದರೆ ಅದನ್ನೇ ಒಂದು ದೊಡ್ಡ ವಿಷಯವನ್ನಾಗಿ ಪರಿಗಣಿಸದೆ ಮೊದಲು ಹೀಗಾಗಲೂ ಕಾರಣವೇನು? ಎಂಬುದರ ಬಗ್ಗೆ ಅರಿಯಬೇಕು. ಕಾರಣ ಪ್ರತಿಯೊಂದು ಸಮಸ್ಯೆಗೆ ಅದಕ್ಕೆ ತಕ್ಕಂತ ಉತ್ತರ ಇದ್ದೆ ಇರುತ್ತದೆ. ಇದನ್ನೆಲ್ಲ ಎದುರಿಸಲು ಮೊದಲು 'ಆತ್ಮವಿಶ್ವಾಸ' ಮುಖ್ಯ. ಆತ್ಮವಿಶ್ವಾಸವನ್ನು ಕಳೆದುಕೊಂಡ ಮನುಷ್ಯನು ಇದ್ದು ಸತ್ತಂತೆ, ಅಂತವನಿಗೆ ಒಂದು ಕೂದಲೆಳೆಯೂ ಸಹ ಭಾರವಾಗಿ ತೋರುತ್ತದೆ. ಜೀವನದ ತುಂಬೆಲ್ಲ ಕಷ್ಟ, ನೋವು, ಬಡತನವಿದ್ದರೆ ಮುಂದೊಂದು ದಿನ ಸುಖ, ನಲಿವು, ಸಿರಿತನ ಬರಬಹುದು ಕಾರಣ ರಾತ್ರಿಯಾದ ಮೇಲೆ ಹಗಲು ಬಂದೆ ಬರುವುದು ಇದು ಪ್ರಕೃತಿ ನಿಯಮ ತಾನೇ. ಯಾವುದೇ ಸಮಸ್ಯೆಯಿರಲಿ ಮೊದಲು ಎದುರಾದಂತಹ ಸಮಸ್ಯೆಯ ಮೂಲ ಕಂಡು ಹಿಡಿಯಬೇಕು ಆಗ ತನ್ನಿಂದ ತಾನೆ ಸುಲಭವಾಗಿ ಆ ಸಮಸ್ಯೆಯಿಂದ ಪಾರಾಗಬಹುದು.
ಗುರು-ಹಿರಿಯರು ಹೇಳಿದಂತೆ ದೇವರು ನಿಮಗೆ ಸಾಕಷ್ಟು ಸಮಸ್ಯೆಗಳನ್ನು ಕೊಟ್ಟಿದ್ದಾನೆಯೆಂದರೆ, ಆತ ಕೊಡುತ್ತಿರುವ ಸಮಸ್ಯೆಗಳಿಗೆ ಸರಿಯಾದ ರೀತಿ ಉತ್ತರವನ್ನಿಟ್ಟು ಆ ಸಮಸ್ಯೆಯಿಂದ ಪಾರಾಗಬಹುದಾದ ಯೋಗ್ಯ ವ್ಯಕ್ತಿ ನೀವೇ ಎಂಬುದೇ ಇದರರ್ಥ. ಇದನ್ನರಿಯದೆ ಅದೆಷ್ಟೋ ಜನರು ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದವರಂತೆ ಕಂಗಾಲಾಗಿ ಬಿಡುತ್ತಾರೆ ಇಲ್ಲಿಗೆ ನಮ್ಮ ಜೀವನವೇ ಮುಗಿದು ಹೋಯಿತು ಎಂದು ಭಾವಿಸುತ್ತಾರೆ. ಹಾಗೆಯೇ ಈ ಜೀವನ ಎಂಬ ಮಹಾಸಾಗರದಲ್ಲಿ ಸೋತಾಗ 'ಆತ್ಮಹತ್ಯೆಯೇ ದಾರಿ ಎಂದು ಭಾವಿಸುತ್ತಾರೆ. ತಮ್ಮ ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರ ಎಂದು ತಿಳಿದು ತಮ್ಮ ಅಮೂಲ್ಯವಾದ ಬದುಕಿಗೆ ಇತಿಶ್ರೀ ಹಾಡುತ್ತಾರೆ. ಆದರೆ ಇದರಿಂದ ಏನು ಪ್ರಯೋಜನ? ಎದುರಾದ ಸಮಸ್ಯೆಯನ್ನು ಆತ್ಮವಿಶ್ವಾಸದಿಂದ ಧೈರ್ಯವಾಗಿ ಸ್ವೀಕರಿಸಿ, ಎಲ್ಲವೂ ಐಶಾರಾಮಿಯಾಗಿರಬೇಕೆಂದರೆ ಹೇಗೆ ಸಾಧ್ಯ. 'ಕೈ ಕೆಸರಾದರೆ, ಬಾಯಿ ಮೊಸರು ತಾನೇ' ಒಂದಂತೂ ನಿಜ ಈ ಜಗತ್ತಿನಲ್ಲಿ ಯಾವ ಜನರು ತಮ್ಮ ಛಾಪು ಮೂಡಿಸಿ, ತಮ್ಮದೇ ಆತ ಕ್ಷೇತ್ರಗಳಲ್ಲಿ ಸಾಧಿಸಿ, ದಿಟ್ಟ ಹೆಜ್ಜೆ ಇಟ್ಟಿದ್ದಾರೋ ಅವರು ಸಹ ಜೀವನದಲ್ಲಿ ಸಾಕಷ್ಟು ಕಷ್ಟ, ನೋವು, ಬಡತನದಿಂದ ಕೂಡಿದವರೆ. "ಪ್ರತಿಭೆ ಹುಟ್ಟುವುದು ಗುಡಿಸಿಲಿನಲ್ಲಿ, ಸಾಯುವುದು ಮಹಲಿನಲ್ಲಿ ಎಂಬ ಪಷರ್ಿಯನ್ ಉಕ್ತಿ ಅಕ್ಷರಶಃ ಸತ್ಯವಾದದ್ದು.
ನಮಗೆ ಸಚಿನ್ ತೆಂಡೂಲ್ಕರರವರ, ಡಾ. ರಾಜಕುಮಾರ, ಡಾ. ಅಬ್ದುಲ್ ಕಲಾಂ ಅವರ ಬಾಲ್ಯದ ಜೀವನದ ಬಗ್ಗೆ ತಿಳಿದುಕೊಂಡಾಗ ಆಶ್ಚರ್ಯವೆನಿಸಬಹುದು ಕಾರಣ ಇವರೆಲ್ಲರೂ ಸಾಕಷ್ಟು ಕಷ್ಟಗಳನ್ನು ದಾಟಿ ತಮ್ಮ ಪರಿಶ್ರಮದಿಂದ ಮೇಲೆ ಬಂದವರು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಚಿಕ್ಕ ಬಾಲಕರಾಗಿದ್ದಾಗ ಮುಂದೊಂದು ದಿನ ನಾನು ಭಾರತದ ರಾಷ್ಟ್ರಪತಿಯಾಗುತ್ತೇನೆಂದು ಬಹುಷಃ ಕನಸಿನಲ್ಲಿಯೂ ಯೋಚಿಸಿರಲಿಲ್ಲವೆನೋ? ಆದರೆ ಈಗ ರಾಷ್ಟ್ರಪತಿಯಾಗಿ ಹೋದದ್ದು ಇತಿಹಾಸ. ಆಕಾಶ ನೋಡಿ ಅಲ್ಲಿ ಹಾರಾಡುತ್ತಿರುವ ಪಕ್ಷಿಗಳನ್ನು ಕಂಡು ನಾನು ಈ ರೀತಿಯಾಗು ಹಾರುತ್ತೇನೆ ಎಂದು ಆತ್ಮವಿಶ್ವಾಸದ ಹೆಜ್ಜೆ ಇಟ್ಟಾಗಲೆ ಮುಂದೊಂದು ದಿನ ಡಾ. ಕಲಾಂ ಲೋಹದ ಹಕ್ಕಿಯಲ್ಲಿ (ವಿಮಾನ) ಮನ ತೃಪ್ತಿಯಾಗುವಂತೆ ಹಾರಾಡಿ ತನ್ನ ಕನಸನ್ನು ನನಸಾಗಿಸಿಕೊಂಡರು. ಅಬ್ದುಲ್ ಕಲಾಂ ಅವರು ಈ ರೀತಿ ಹೇಳುತ್ತಾರೆ ಪ್ರತಿಯೊಬ್ಬರು ಕನಸನ್ನು ಕಾಣಬೇಕು, ಅದೇ ರೀತಿ ಆ ಕನಸನ್ನು ನನಸಾಗಿಸಲು ಸತತ ಪ್ರಯತ್ನಿಸಬೇಕು. ನಾವು ಸಹ ನಮ್ಮ ಜೀವನದ ಬಗ್ಗೆ ಸಾಕಷ್ಟು ಕನಸು ಕಂಡಿರುತ್ತೇವೆ, ಆದರೆ ಕನಸು ನನಸಾಗುವ ಮೊದಲೇ ಧಣಿದು ವಿಶ್ರಾಂತಿ ಬಯಸುತ್ತೇವೆ ಇದರಿಂದ ಕನಸು ಕನಸಾಗಿಯೇ ಉಳಿಯುತ್ತದೆ.
ಎಲ್ಲ ಜನ್ಮಗಳಲ್ಲಿ ಮಾನವ ಜನ್ಮ ಶ್ರೇಷ್ಟವಾದುದು. ಇಂತಹ ಸುವರ್ಣವಕಾಶ ಸಿಕ್ಕಾಗಲೂ ಉಪಯೋಗಿಸಿಕೊಳ್ಳದಿದ್ದರೆ ಅದು ನಮ್ಮ ಮೂರ್ಖತನ. ಹಿರಿಯರು ಹೇಳಿದಂತೆ ಜೀವನ ಎಂಬುದು 'ಚದುರಂಗದಾಟ' ಆಟ ಎಂದ ಮೇಲೆ ಸೋಲು-ಗೆಲುವು ಸಹಜ. ಅಕಸ್ಮಾತ ನೀವು ಸೋತರೆ ಹತಾಷರಿನಾಗದೆ ಮುಂದಿನ ಪಂದ್ಯದ ತಯಾರಿ ನಡೆಸಬೇಕು, ಅದರ ಬದಲಾಗಿ ಸೋತೆ ಎಂದು ಸಪ್ಪೆ ಮೊರೆಯಿಂದ ಕುಳಿತುಕೊಂಡರೆ ಮುಂದಿನ ಪಂದ್ಯವು ಸಹ ಸೋಲೆ. 'ಸೋಲು' ಎಂಬುದು ಬದುಕಿನ ಅಂತ್ಯ ಎಂದು ತಿಳಿಯಬಾರದು, ಸೋಲೆ ಗೆಲುವಿನ ಮೆಟ್ಟಿಲು ಎಂದು ಮುಂದೆ ಹೆಜ್ಜೆ ಇಡಬೇಕು. ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಅಂತಹ ಅಮೋಘವಾದ ಶಕ್ತಿ ಇರುವ ಜೀವಿ ಆತ. ಸೋಲನ್ನೇ ಗೆದ್ದರೆ ನಿಮ್ಮ ಉಜ್ವಲವಾದ ಭವಿಷ್ಯ ಮರಳಿ ಮತ್ತೆ ನಿಮ್ಮ ಮುಂದೆ ಬರುವುದು. ಡಿವ್ಹಿಜಿಯವರು ಹೇಳಿದಂತೆ ಜೀವನ ಸುಖ, ದುಃಖಗಳ ಆಗರ. ಸುಖವನ್ನು ಯಾವ ರೀತಿಯಾಗಿ ಅನುಭವಿಸುತ್ತೆವೆಯೋ, ದುಃಖವನ್ನು ಹಾಗೆಯೇ ಸ್ವೀಕರಿಸಬೇಕು. ಯಾವಾಗಲೂ ಸಕಾರಾತ್ಮವಾಗಿ ಯೋಚಿಸಿ ಮುಂದೆ ಹೆಜ್ಜೆ ಇಡಬೇಕು, ಯಾವುದೇ ರೀತಿಯ ಊಹಾಪೋಹ ನಿಂದನೆಗಳಿಗೆ ಕಿವಿಗೊಡದೆ ಸಾಧನೆ ಶಿಖರದತ್ತ ಹೆಜ್ಜೆ ಇಡಬೇಕು ಕಾರಣ ಒಳ್ಳೆಯ ಕಾರ್ಯಕ್ಕೆ ನೂರೆಂಟು ವಿಘ್ನವಂತೆ.
ಇಂದಿನ ಯುವಜನತೆ ತಾನು ಮಾಡಬೇಕಾದ ಕರ್ತವ್ಯವನ್ನು ಮರೆತು, ತಮ್ಮ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗಿ ಹಾದಿ ತಪ್ಪುತ್ತಿದೆ. ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿದೆ. ಸ್ವಾಮಿ ವಿವೇಕಾನಂದರು ಏಕಾಗ್ರತೆಯ ಕುರಿತು ಈ ರೀತಿಯಾಗಿ ಹೇಳಿದ್ದಾರೆ. "ನನ್ನ ದೃಷ್ಠಿಯಲ್ಲಿ ವಿದ್ಯಾಭ್ಯಾಸದ ಸಾರ ಇರುವುದು ಮನಸ್ಸಿನ ಏಕಾಗ್ರತೆಯಲ್ಲಿ. ವಿಷಯ ಸಂಗ್ರಹದಲ್ಲಿ ಅಲ್ಲ. ಮೊದಲು ಏಕಾಗ್ರತೆ ಮತ್ತು ಅನಾಸಕ್ತಿಯ ಶಕ್ತಿಯನ್ನು ರೂಢಿಸಿ ಅನಂತರ ಬೇಕಾದಾಗ ವಿಷಯ ಸಂಗ್ರಹ ಮಾಡಬಹುದು. ಮಗುವಿನಲ್ಲಿ ಏಕಾಗ್ರತೆಯೊಡನೆ ಭೋಗ ವಿಷಯಗಳಲ್ಲಿ ಅನಾಸಕ್ತಿಯನ್ನು ರೂಢಿಸಿಕೊಳ್ಳುವಂತೆ ಮಾಡಬೇಕು. ಒಬ್ಬನು ಕೆಲವು ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮಾತ್ರಕ್ಕೆ ವಿದ್ಯಾವಂತನಲ್ಲ. ಜನ ಸಾಮಾನ್ಯರಿಗೆ ಜೀವನ ಹೋರಾಟಕ್ಕೆ ಸಹಾಯ ಮಾಡದ, ಚಾರಿತ್ರ್ಯ ಶುದ್ಧಿಗೆ ಸಹಾಯ ಮಾಡದ, ಪರೋಪಕಾರ ಬುದ್ಧಿಯನ್ನು ಹುಟ್ಟಿಸದ, ಸಿಂಹ ಸದೃಶ ಧೈರ್ಯವನ್ನು ನೀಡದ ವಿದ್ಯಾಭ್ಯಾಸದಿಂದ ಪ್ರಯೋಜನವೇನು? ನಿಜವಾದ ವಿದ್ಯೆ ಒಬ್ಬನನ್ನು ಸ್ವಾವಲಂಭಿಯಾಗಿ ಮಾಡಬೇಕು." ಇದನ್ನೆಲ್ಲ ಅರಿತುಕೊಂಡು ತಂದೆ-ತಾಯಿಯ ಘನತೆ, ಗೌರವಕ್ಕೆ ಯಾವುದೇ ರೀತಿಯ ಕುಂದು ಕೊರತೆ ಬಾರದಂತೆ ನಡೆದುಕೊಳ್ಳಬೇಕು. ಪ್ರೀಯ ಸ್ನೇಹಿತರೇ, ಮಾನವ ಜನ್ಮ ಎಷ್ಟು ಕೋಟಿ, ಕೋಟಿ ಕೊಟ್ಟರೂ ಮರಳಿ ಸಿಗುವಂತದಲ್ಲ. ಆದ್ದರಿಂದ ಇದ್ದ ಅವಕಾಶವನ್ನು ಬಳಸಿಕೊಂಡು ಈ ಜಗತ್ತಿನಲ್ಲಿ ತಮ್ಮದೇ ಆದ ಇತಿಹಾಸ ನಿಮರ್ಿಸಿ.
"ಆತ್ಮವಿಶ್ವಾಸವೊಂದಿದ್ದರೆ ಜಗತ್ತನ್ನೇ ಗೆಲ್ಲಬಹುದು" ನಿನ್ನ ಈ ಅಮೋಘವಾದ ಸಾಧನೆಗೆ ಅನೇಕ ಮಹಾನ ದಿವ್ಯ ಸಾಧಕರ ಜೀವನ ಆದರ್ಶವಾಗಲಿ. ಸದಾ ಚಟುವಟಿಕೆಯಿಂದ, ಉಲ್ಲಾಸ, ಹುಮಸ್ಸು, ಆತ್ಮವಿಶ್ವಾಸದಿಂದ ಮುನ್ನುಗ್ಗು. ನಿನ್ನ ಇಂತಹ ಆದರ್ಶಪ್ರಾಯ ಜೀವನ, ನಿನ್ನ ಸ್ಪೂತರ್ಿದಾಯಕ ಮಾತುಗಳು ಬೇರೆಯವರಿಗೆ ದಾರಿ ದೀಪವಾಗಲಿ.