‘ಮಹಾಲೆಯವರೊಬ್ಬ ಬಹುಮುಖ ವ್ಯಕ್ತಿತ್ವದ ಕಲಾವಿದ’
ಧಾರವಾಡ 20: ಗಜಾನನ ಮಹಾಲೆಯವರೊಬ್ಬ ಒಳ್ಳೆಯ ಸಂಸ್ಕಾರವುಳ್ಳ, ಬಹುಮುಖ ವ್ಯಕ್ತಿತ್ವದ ಕಲಾವಿದರಾಗಿದ್ದರು. ಇಂಥ ಸಾತ್ವಿಕ, ಪ್ರಾಮಾಣಿಕ ಮಹನೀಯರನ್ನು ನಾವು ಮತ್ತೆ ಮತ್ತೆ ನೆನೆಯುವ ಕಾರ್ಯವಾಗಬೇಕು. ಅವರ ಹೆಸರಿನಲ್ಲಿ ಸ್ಥಾಪಿಸಿದ ಪ್ರತಿಷ್ಠಾನವು ಬಹು ಎತ್ತರದ ಮಟ್ಟಕ್ಕೆ ಹೋಗಬೇಕೆಂದರೆ ತಾವೆಲ್ಲ ತನು-ಮನ-ಧನದಿಂದ ಸಹಕಾರ ನೀಡಬೇಕೆಂದು ಪದ್ಮಶ್ರೀ ಪಂ.ಎಂ.ವೆಂಕಟೇಶಕುಮಾರ ಕೋರಿದರು.
ದಿ. 18 ರಂದು ಕವಿವ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಗಜಾನನ ಮಹಾಲೆ ಪ್ರತಿಷ್ಠಾನವು ಗಜಾನನ ಮಹಾಲೆ ಅವರ 93ನೇ ಜನ್ಮದಿನದ ಅಂಗವಾಗಿ ಏರಿ್ಡಸಿದ್ದ ಕಲಾ ಉಪಾಸಕ ಪ್ರಶಸ್ತಿಯನ್ನು ಶ್ರೀಧರ ಮಾಂಡ್ರೆಯವರಿಗೆ ಪ್ರದಾನ ಮಾಡಿ ಮಾತನಾಡುತ್ತ ಯಾವುದೇ ಕಲಾವಿದರ ಮನೆತನದಿಂದ ಬರೆದೇ ಸ್ವಂತ ಅಭ್ಯಾಸ ಬಲದಿಂದ, ಗುರುಗಳ ಕೃಪೆಯಿಂದ ಮೇಲೆ ಬಂದಿರುವ ಮಾಂಡ್ರೆಯವರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ 2025ನೇ ಸಾಲಿನ “ಕಲಾ ಉಪಾಸಕ ಪ್ರಶಸ್ತಿ”ಯನ್ನು ಖ್ಯಾತ ತಬಲಾವಾದಕ ಶ್ರೀಧರ ಮಾಂಡ್ರೆ ಅವರಿಗೆ ಪದ್ಮಶ್ರೀ ಪಂ.ಎಮ್.ವೆಂಕಟೇಶಕುಮಾರ ಅವರು ಪ್ರದಾನ ಮಾಡಿದರು.
ಪ್ರತಿಷ್ಠಾನದ ಅಧ್ಯಕ್ಷ ಡಾ.ಬಾಳಣ್ಣ ಶೀಗೀಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಬಹಳ ದೊಡ್ಡ ದೊಡ್ಡ ಕಲಾವಿದರಿಗೆ ಸಾಥ್ ನೀಡಿರುವ ಬಹುದೊಡ್ಡ ಕಲಾವಿದರಾದ ಮಾಂಡ್ರೆಯವರಿಗೆ ಗಜಾನನ ಮಹಾಲೆಯವರ ಹೆಸರಿನಲ್ಲಿ ಕಲಾ ಉಪಾಸಕ ಪ್ರಶಸ್ತಿ ನೀಡಿರುವುದು ಬಹುದೊಡ್ಡ ಸೌಭಾಗ್ಯದ ಸಂಗತಿಯಾಗಿದೆ. ಗಜಾನನ ಮಹಾಲೆಯವರು ಬಹಳ ಮೃದು ಸ್ವಭಾವದ ಬಹುದೊಡ್ಡ ಪ್ರಸಾದನ ಕಲಾವಿದರಾಗಿದ್ದರು, ಅವರ ಮಾತು ಹೇಗಿದ್ದಿತೆಂದರೆ, ಮೌನ ಮಾತಾಡಿದಂತಿರುತ್ತಿತ್ತು. ಅಂತಹ ವ್ಯಕ್ತಿಗೆ ಪ್ರೊ.ಸದಾನಂದ ಕನವಳ್ಳಿಯವರು 1 ಲಕ್ಷ ರೂಪಾಯಿ ಮೊತ್ತದ ಹಮ್ಮಿಣಿಯನ್ನು ಕೊಟ್ಟು ಸನ್ಮಾನಿಸಿದ ಸಂದರ್ಭವನ್ನು ನೆನೆಯಲೇಬೇಕು ಎಂದರು.
ಮಹಾಲೆಯವರ ಪುತ್ರಿ ಅಪೂರ್ವಾ ಮಹಾಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಕೋಶಾಧ್ಯಕ್ಷರಾದ ಕೆ.ಎಚ್.ನಾಯಕ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷರಾದ ಶಂಕರ ಕುಂಬಿ ನಿರೂಪಿಸಿದರು, ಪ್ರಮೀಳಾ ಜಕ್ಕಣ್ಣವರ ಪ್ರಾರ್ಥಿಸಿದರು. ಕಾರ್ಯದರ್ಶಿ ಬಿ.ಐ.ಈಳಗೇರ ವಂದಿಸಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಚಿಕ್ಕಮಠ, ವೀರಣ್ಣ ವಡ್ಡೀನ, ಡಾ.ಶಶಿಧರ ನರೇಂದ್ರ, ಬಿ.ಮಾರುತಿ, ಪಾರ್ವತಿ ಸುರೇಶ ಹಾಲಭಾವಿ, ಸಂತೋಷ ಮಹಾಲೆ, ಪ್ರಕಾಶ ಬಾಳಿಕಾಯಿ, ಡಾ.ಎ.ಎಲ್.ದೇಸಾಯಿ, ಹಫೀಜಖಾನ್, ಡಾ.ಗುರುಬಸವ ಮಹಾಮನೆ, ಡಾ.ಬಸವರಾಜ ಕಲೆಗಾರ, ಡಾ.ಮೃತ್ಯುಂಜಯ ಕುರುಬರ ಮತ್ತಿತರರು ಇದ್ದರು.