ಯುವಕ-ಯುವತಿಯರಲ್ಲಿ ದ್ವಿಧ್ರುವಿ ಮನೋವಿಕಾರ ಹೆಚ್ಚಾಗುತ್ತಿದೆ: ಹಳಿಂಗಳಿ
ಶೇಡಬಾಳ 30 : ದ್ವಿಧ್ರುವಿ ಮನೋವಿಕಾರ(ಬಾಯ್ಪೋಲಾರ ಡಿಸ್ಆರ್ಡರ್) ರೋಗವು ಯುವಕ-ಯುವತಿಯರಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದ್ವಿಧ್ರುವಿ ಮನೋವಿಕಾರ ರೋಗ ಎಂದರೆ ಒಬ್ಬನಲ್ಲಿ ಎರಡು ಬಗೆಯ ಅವಸ್ಥೆಗಳನ್ನು ನಾವು ಕಾಣಬಹುದಾಗಿದೆ. ಒಂದು ಬದಿಗೆ ಜೀವನದಲ್ಲಿ ನಿರುತ್ಸಾಹ, ನಿರಾಸೆ ಉಂಟಾದಂತೆ ವರ್ತಿಸುವುದು, ಇನ್ನೊಂದು ಬದಿಗೆ ಜೀವನದಲ್ಲಿ ಅತಿ ಉತ್ಸಾಹ, ಉನ್ಮಾದದಂತೆ ವರ್ತಿಸುವುದು. ತೀವ್ರ ಸ್ವರೂಪದಲ್ಲಿ ಮಾನಸಿಕ ರೋಗವು ಇದಾಗಿದ್ದು, 18 ರಿಂದ 30 ವರ್ಷ ವಯಸ್ಸಿನ ಯುವಕ ಯುವತಿಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ವಿಶ್ವದಲ್ಲಿ 45 ದಶಲಕ್ಷ ಜನರಲ್ಲಿ ಈ ರೋಗವನ್ನು ಕಾಣಬಹುದಾಗಿದೆಂದು ಮಿರಜದ ವ್ಯಸನಮುಕ್ತಿ ಕೇಂದ್ರದ ವೈದ್ಯಾಧಿಕಾರಿ ಹಾಗೂ ಮಾನಸಿಕ ತಜ್ಞ ಡಾ. ಚಂದ್ರಶೇಖರ ಹಳಿಂಗಳಿ ಹೇಳಿದರು.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಜೀವನದಲ್ಲಿ ನಿರಾಸೆ, ನಿರುತ್ಸಾಹದಂತೆ ವರ್ತಿಸಿದರೆ ಮತ್ತೊಂದು ಸಮಯದಲ್ಲಿ ಅತಿ ಉತ್ಸಾಹ, ಉನ್ಮಾದದಿಂದ ವರ್ತಿಸುವುದು. ಅಂದರೆ ಮನುಷ್ಯನಲ್ಲಿ ಮಾನಸಿಕ ಏರುಪೇರಾಗುವುದು.
ಉದಾಸೀನತೆ ಉಂಟಾದಾಗ ಯಾವುದೇ ವಿಷಯಗಳಲ್ಲಿ ನಿರುತ್ಸಾಹ, ಬೇಸರಿಕೆ, ಹಸಿವಾಗದೇ ಇರುವುದು, ನಿದ್ರೆ ಬಾರದೇ ಇರುವುದು, ತೂಕದಲ್ಲಿ ವ್ಯತ್ಯಾಸ, ಶಾರೀರಿಕ ಚಲನ ವಲನ ಮಂದ ಹೊಂದುವುದು, ಮನಸ್ಸಿನಲ್ಲಿ ದುರಾಯೋಚನೆ ಬರುವುದು, ಆತ್ಮವಿಶ್ವಾಸ ಕುಂದು ಹೋಗುವುದು, ಆತ್ಮಹತ್ಯೆಯಂತಹ ವಿಚಾರಗಳು ಹುಟ್ಟಿಕೊಳ್ಳುವವು ಇಂತಹ ಲಕ್ಷಣಗಳು 15 ದಿನಗಳವರೆಗೆ ತಮ್ಮಲ್ಲಿ ಕಂಡು ಬಂದಲ್ಲಿ ಉದಾಸೀನತೆಯ ರೋಗವು ನಿಮ್ಮನ್ನು ಕಾಡುತ್ತಿದೆ ಎಂದು ತಿಳಿದುಕೊಳ್ಳಬೇಕು.
ಉದಾಸೀನತೆಗೆ ವ್ಯತಿರಿಕ್ತವಾಗಿ ಅತಿ ಉತ್ಸಾಹದಿಂದ ಇರುವುದು, ಕಾರಣವಿಲ್ಲದೇ ಹಸನ್ಮುಖಿಯಾಗಿ ವರ್ತಿಸುವುದು, ಅಧ್ಯಾತ್ಮಿಕದಲ್ಲಿ ತಲ್ಲೀನವಾಗುವುದು, ಜಂಬ ಕೊಚ್ಚಿಕೊಳ್ಳುವುದು, ಸಾಧಕ-ಭಾದಕಗಳ ವಿಚಾರ ಮಾಡದೇ ನಿರ್ಣಯಕೈಗೊಳ್ಳುವುದು, ಮನಸ್ಸಿನಲ್ಲಿ ಚಂಚಲತೆ, ಬೇರೆ ಬೇರೆ ವಿಷಯಗಳ ಕುರಿತು ಬಡಬಡಿಸುವುದು, ಪ್ರಮಾಣಕ್ಕಿಂತ ಹೆಚ್ಚಿಗೆ ಹಣವ್ಯಯ ಮಾಡುವುದು, ಅದರಿಂದ ಆರ್ಥಿಕ ತೊಂದರೆ ಅನುಭವಿಸುವುದು, ಒಮ್ಮಿಂದೊಮ್ಮಿಲೆ ಮಾನಸಿಕ ಸೀಮಿತ ಕಳೆದುಕೊಳ್ಳುವುದು, ಸಾಮಾಜಿಕ, ಶೈಕ್ಷಣಿಕ ಹಾನಿ ಉಂಟಾದಲ್ಲಿ ಈ ಅವಸ್ಥೆ 7 ದಿನಗಳವರೆಗೆ ನಿಮ್ಮಲ್ಲಿ ಕಂಡು ಬಂದಲ್ಲಿ ನಿಮಗೆ ಉನ್ಮಾದ, ಅತಿ ಉತ್ಸಾಹ, ಮನೋವಿಕಾರ ರೋಗ ಬಂದಿದೆ ಎಂದರ್ಥ.
ಈ 2 ರೋಗ ಮನುಷ್ಯರಲ್ಲಿ ಬರಲು ಹಲವಾರು ಕಾರಣಗಳು ಇವೆ. ಕುಟುಂಬದಲ್ಲಿ ಯಾರಿಗಾದರೂ ಈ ರೋಗ ಬಂದಲ್ಲಿ ಇತರ ಕುಟುಂಬ ಸದಸ್ಯರಿಗೂ ಬರಬಹುದಾಗಿದೆ. ಕೌಟುಂಬಿಕ ಸಮಸ್ಯೆ, ಸಾಲದ ಸುಳಿಯಲ್ಲಿ ಸಿಲುಕಿ, ನಿರುದ್ಯೋಗ, ಮಾನಸಿಕ ಒತ್ತಡ, ಮೊದಲಾದ ಸಮಸ್ಯೆಗಳಿಂದಲೂ ಈ ರೋಗ ಬರಲು ಸಾಧ್ಯ.
ಇಂತಹ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ತಜ್ಞ ವೈದ್ಯರನ್ನು ಭೇಟಿಯಾಗಿ ಉಪಚಾರ ಪಡೆದುಕೊಳ್ಳಬಹುದಾಗಿದೆ ಎಂದು ಡಾ. ಚಂದ್ರಶೇಖರ ಹಳಿಂಗಳಿ ಹೇಳಿದರು.