ಸಂಘಟಿತರಾಗಿ ದೇಶ ಕಟ್ಟಲು ಮುಂದಾಗಿ-ಕೃಷ್ಣಾಜಿ
ಲೋಕದರ್ಶನ ವರದಿ
ಕಲಕೇರಿಯಲ್ಲಿ ಗಮನ ಸೆಳೆದ ಆರ್ಎಸ್ಎಸ್ ಪಥಸಂಚಲನ
ಕಲಕೇರಿ: ಹಲವು ವೈವಿಧ್ಯಮಯ ಭಾಷೆ, ನೆಲ, ಜಲ, ನಿಸರ್ಗದಲ್ಲಿ ಬದುಕುತ್ತಿರುವ ನಮ್ಮ ದೇಶವಾಸಿಗಳು ಹಲವು ಮತ ಪಂಥಗಳ ಮಧ್ಯೆಯೂ ಸಾಮರಸ್ಯದ ಬದುಕನ್ನು ರೂಢಿಸಿಕೊಂಡು ಸ್ವದೇಶಿ ಜೀವನಶೈಲಿಯನ್ನು ಅಳವಡಿಸಿಕೊಂಡು ನಮ್ಮ ಸಂಸ್ಕೃತಿ ಪರಂಪರೆಯನ್ನು ಆಚರಿಸುತ್ತಾ ವಿದೇಶಿ ಸಂಸ್ಕೃತಿಗೆ ಮಾರುಹೋಗದೇ ಸ್ವಾವಲಂಬಿಗಳಾಗಿ, ಸಂಘಟಿತರಾಗಿ ದೇಶವನ್ನು ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡು ಸಂಘಕ್ಕೆ ಬಲ ತುಂಬುವ ಮೂಲಕ ಸುಭದ್ರ ದೇಶ ಕಟ್ಟಲು ಮುಂದಾಗಬೇಕಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಲಬುರಗಿಯ ಕರ್ನಾಟಕ ಉತ್ತರ ಪ್ರಾಂತದ ಪ್ರಚಾರ ಪ್ರಮುಖರಾದ ಕೃಷ್ಣಾಜಿ ಜೋಶಿ ಹೇಳಿದರು.
ಗ್ರಾಮದ ರಾಷ್ಟ್ರೀಯ ಸ್ವಯಂಸೇವಕ ಸಂಘದ 101ನೇ ವರ್ಷ ಮತ್ತು ವಿಜಯದಶಮಿ ಉತ್ಸವ ನಿಮಿತ್ಯವಾಗಿ ಶ್ರೀಗುರು ಮಡಿವಾಳೇಶ್ವರ ದೇವಸ್ಥಾನದ ಮುಂಭಾಗ ಮುಖ್ಯ ಆವರಣದಲ್ಲಿ ನಡೆದ ಬೌಧಿಕ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
ನೀತಿ ಮಾರ್ಗದ ಬದುಕೇ ಧರ್ಮ, ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದೇ ಧರ್ಮವಾಗಿದ್ದು, ಹಿಂದು ಎಂದರೆ ಯಾರು ಹಿತವನ್ನು ಬಯಸುತ್ತಾರೋ ಮತ್ತು ದುರ್ಗುಣಗಳನ್ನು, ದುರ್ನೀತಿ, ದುರಾಲೋಚನೆಯನ್ನು ಮಾಡದೇ ಇರುವ ಸರ್ವರಿಗೂ ಒಳಿತನ್ನೇ ಬಯಸುವವರೇ ಹಿಂದೂಗಳಾಗಿದ್ದಾರೆ. ಈ ದಿಸೆಯಲ್ಲಿ ಈ ನಾಡಿನಲ್ಲಿ ಬದುಕುತ್ತಿರುವ ಪ್ರತಿಯೊಬ್ಬರೂ ಪರಸ್ಪರ ಜಾತಿ, ಮತಭೇದಗಳನ್ನು ತೊರೆದು ಭಾತೃತ್ವ, ಸಹಬಾಳ್ವೆಯ ಮೂಲಕ ದ್ವೇಷ ಅಸೂಯೆ ಭಾವನೆಗಳನ್ನು ಬಿಟ್ಟು ದೇಶದ ಒಳಿತಿಗಾಗಿ ಸಂಘಟಿತರಾಗಿ ಮುನ್ನಡೆಯಬೇಕು ಎಂದರು.
ನೂರಾರು ರಾಷ್ಟ್ರೀಯ ಸ್ವಯಂಸೇವಕ ಗಣವೇಷಧಾರಿಗಳು ಪಾಲ್ಗೊಂಡಿದ್ದ ಭವ್ಯ ಪಥಸಂಚಲನವು ಗ್ರಾಮದ ಶ್ರೀ ಯಲ್ಲಾಲಿಂಗ ದೇವಸ್ಥಾನದಿಂದ ಮದ್ಯಾಹ್ನ 4:15ಕ್ಕೆ ಪ್ರಾರಂಭವಾದ ಪಥಸಂಚಲನವು ಬಸ್ನಿಲ್ದಾಣದ ಪಕ್ಕದ ಮಾರ್ಗವಾಗಿ ಸಾಗಿ ಅಗಸಿ ಪರ್ವತ ದೇವರ ದೇವಸ್ಥಾನ, ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದ ರಸ್ತೆಯಿಂದ ರಾಂಪೂರ ರಸ್ತೆ, ಶ್ರೀ ಹನುಮಾನ ದೇವಸ್ಥಾನ, ಶ್ರೀ ಭವಾನಿ ದೇವಸ್ಥಾನದ ಮಾರ್ಗವಾಗಿ ಅಕ್ಕಮಹಾದೇವಿ ದೇವಸ್ಥಾನದಿಂದ ಲಕ್ಷ್ಮೀ ದೇವಸ್ಥಾನ, ಶ್ರೀ ಮಡಿವಾಳೇಶ್ವರ ದೇವಸ್ಥಾನದ ಮುಂಭಾಗದಿಂದ ಶ್ರೀ ಬಸವೇಶ್ವರ ಕಾಲೇಜಿನ ರಸ್ತೆಯ ಮಾರ್ಗವಾಗಿ ಸಂಚರಿಸಿ ಪೋಲಿಸ್ ಠಾಣೆಯ ಮುಂಭಾಗದ ಮುಖ್ಯರಸ್ತೆ ಮೂಲಕ ಶ್ರೀಗುರು ವೀರಘಂಟೈ ಮಡಿವಾಳೇಶ್ವರ ದೇವಸ್ಥಾನದ ಮುಂಭಾಗದ ಆವರಣಕ್ಕೆ ಬಂದು ತಲುಪಿದ ನಂತರ ಸಾರ್ವಜನಿಕ ಸಭೆ ನಡೆಯಿತು.