ಶ್ರೀ ಅಂಬಾಭವಾನಿ ದೇವಿಯ “ಸಿದ್ಧಿದಾತ್ರಿ” ರೂಪದ ವಿಶೇಷ ಪೂಜಾಲಂಕಾರ
ಲೋಕದರ್ಶನ ವರದಿ
ಕಲಕೇರಿ 19: ಗ್ರಾಮದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಶ್ರೀ ದೇವಿಯ ಮೂರ್ತಿಗೆ ಒಂಭತ್ತನೇ ದಿನದ ಅವತಾರವಾದ “ಸಿದ್ಧಿದಾತ್ರಿ” ರೂಪದಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆಯನ್ನು ಹಮ್ಮಿಕೊಳ್ಳಲಾಯಿತು.
ಈ ವೇಳೆ ದೇವಿ ಉಪಾಸಕರಾದ ಮೋತಿಲಾಲ ಕುಲಕರ್ಣಿ ಅವರು ವಿಶೇಷವಾದ ದೇವಿಯ 9ನೇ ಅವತಾರದ ಕುರಿತು ಪ್ರಸ್ಥಾಪಿಸುತ್ತಾ ಸಿದ್ಧಿದಾತ್ರಿಯು ತನ್ನ ಭಕ್ತರ ಪ್ರತಿಯೊಂದು ಆಸೆಯನ್ನು ಪೂರೈಸುವ ದೇವತೆಯಾಗಿದ್ದು, ಸಿದ್ಧಿಯು 'ಬಯಕೆ'ಯನ್ನು ಸೂಚಿಸುತ್ತದೆ ಮತ್ತು ದಾತ್ರಿಯು 'ಒದಗಿಸುವವಳು' ಎಂಬುದನ್ನು ಸೂಚಿಸುತ್ತದೆ. ಈ ಎರಡು ಶಬ್ಧವನ್ನು ಸಂಯೋಜಿಸಿ ಸಿದ್ಧಿದಾತ್ರಿ ಎಂಬ ಪದವು ರೂಪುಗೊಂಡಿದೆ.
ಮಾತೆ ಸಿದ್ಧಿದಾತ್ರಿಯು ತನ್ನ ಆಶೀರ್ವಾದದ ರೂಪವಾಗಿ ಶಿವನಿಗೆ ಎಲ್ಲಾ ಸಿದ್ಧಿಗಳನ್ನು ನೀಡಿದಳು ಎಂದು ಪುರಾಣವು ತಿಳಿಸುತ್ತದೆ. ಭಗವಾನ್ ಶಿವನು ದೇವಿಯನ್ನು ಸಮರೆ್ಣಯೊಂದಿಗೆ ಪೂಜಿಸಿದನು, ಅವನ ದೇಹದ ಅರ್ಧಭಾಗವು ಶಕ್ತಿಯ ರೂಪದೊಂದಿಗೆ ಐಕ್ಯವಾಯಿತು. ಹೀಗಾಗಿ, ಶಿವನನ್ನು ಅರ್ಧನಾರೀಶ್ವರ ಎಂದೂ ಕರೆಯುತ್ತಾರೆ ಎಂದು ಹೇಳಿದ ಅವರು ಶರನ್ನವರಾತ್ರಿಯ ಒಂಭತ್ತು ದಿನಗಳಲ್ಲಿ ಲೋಕನಾಯಕಿ,
ಶಕ್ತಿ ದೇವತೆಯಾದ ಶ್ರೀ ಅಂಬಾಭವಾನಿ ದೇವಿಯ ಆರಾಧನೆ ಪಾರಾಯಣದ ಹಿನ್ನೆಲೆಯಲ್ಲಿ ಒಂಭತ್ತು ವಿಭಿನ್ನ, ವಿಶೇಷ ಶಕ್ತಿ ರೂಪಗಳನ್ನು ಶ್ರದ್ಧಾ ಭಕ್ತಿಯಿಂದ ನಾಡಿನಾದ್ಯಂತ ಪೂಜಿಸುತ್ತಿರುವುದು ಸಂತಸದಾಯಕವಾಗಿದ್ದು, ಇದು ಜನರನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಲೋಕ ಕಲ್ಯಾಣದ ಮಾರ್ಗವಾಗಿದೆ ಎಂದರು.
ಈ ವೇಳೆ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಸುಮಾರು 30 ವರ್ಷಗಳಿಂದ ತಮ್ಮ ಅಮೃತ ಸದೃಶ ವಾಣಿಯ ಮೂಲಕ ದೇವಿಯ ಪುರಾಣವನ್ನು ಪಾರಾಯಣ ಮಾಡುತ್ತಾ ಬಂದಿರುವ ಆ ಮೂಲಕ ದೇವಿಯ ಪುರಾಣದ ಮಹಿಮೆಯನ್ನು ಎಳೆ ಎಳೆಯಾಗಿ ವಿವರಿಸಿ ಜನರ ಮನಸೂರೆಗೊಂಡಿರುವ ಹಿರೂರ ಹಿರೇಮಠದ ಜಯಸಿದ್ದೇಶ್ವರ ಶಿವಾಚಾಯರು ಉಪಸ್ಥಿತರಿದ್ದರು.