ರಾಣೆಬೆನ್ನೂರ

ಮೋಡ ಬಿತ್ತನೆ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡುವಂತೆ ಒತ್ತಾಯ

ಮೋಡ ಬಿತ್ತನೆ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡುವಂತೆ  ಒತ್ತಾಯ

ರಾಣೇಬೆನ್ನೂರು 18 : ರಾಜ್ಯದಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಬೆಳೆದ ಮೆಕ್ಕೆಜೋಳ ಮತ್ತು ಹತ್ತಿ, ಹೆಸರು,  ಈರುಳ್ಳಿ ಬೆಳ್ಳುಳ್ಳಿ ತರಕಾರಿ ಬೆಳೆಗಳನ್ನು ಮಾಡಿದ್ದರು. ಈಗ ಮಳೆ ಇಲ್ಲದೆ ಎಲ್ಲಾ ಬೆಳೆಗಳು ಬತ್ತಿ ಹೋಗುತ್ತಿವೆ ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಮೋಡ ಬಿತ್ತನೆ ಕಾರ್ಯಕ್ಕೆ ಮುಂದಾಗಬೇಕು  ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕ ಅಧ್ಯಕ್ಷ ಸುರೇಶ್ ಹೊನ್ನಪ್ಪನವರ ಹೇಳಿದರು. 

ಬುಧವಾರ  ನಗರದ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ  ತಾಲೂಕ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.ಅಗಸ್ಟ್ ತಿಂಗಳಲ್ಲಿ ಮಳೆ ಬಾರದೆ ಹೋಗಿದ್ದು ರೈತರು ಬೆಳೆದಿರುವ ಬೆಳೆಗಳು ಒಣಗವ ಹಂತದಲ್ಲಿದ್ದು, ಬೆಳೆಗಳು ಹಾಳಾಗಿ ಹೋಗುವ ಮುನ್ನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ರಾಜ್ಯ ಸರ್ಕಾರಕ್ಕೆ ಮೋಡ ಬಿತ್ತನೆ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಬೇಕು ಎಂದು ರೈತರು ಒತ್ತಾಯಿಸಿದರು.  ಪ್ರಸ್ತುತ ರೈತರು ಬೆಳೆದಂತಹ ಬೆಳೆಗಳು ಸಂಪೂರ್ಣ ಒಣಗಿ ಹೋಗುವ ಹಂತಕ್ಕೆ ಬಂದು ನಿಂತಿವೆ. ರಾಜ್ಯ ಸರ್ಕಾರ ಇದರ ಬಗ್ಗೆ ಗಮನಹರಿಸಿ ಹಾವೇರಿ ಜಿಲ್ಲೆಯ ರೈತರಿಗೆ ಅನುಕೂಲವಾಗಲು ಶಾಸಕ ಪ್ರಕಾಶ್ ಕೋಳಿವಾಡ ಅವರಿಗೆ ಮೋಡ ಬಿತ್ತನೆ ಮಾಡಲು ಅವಕಾಶ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು. ಮನವಿ ಸಲ್ಲಿಕೆ ಮುಂಚೂಣಿಯಲ್ಲಿದ್ದ ರೈತ ಸಂಘಟನೆಯ  ಮುಖಂಡ ಕರಬಸಪ್ಪ ಅಗಸಿಬಾಗಿಲ, ಅವರು ಮಾತನಾಡಿ ತಾಲೂಕಿನಲ್ಲಿ ರೈತರು 70, 60, 40 ದಿನಗಳ ಬೆಳೆಗಳನ್ನು ಈಗಾಗಲೇ ಬೆಳೆದಿದ್ದಾರೆ. ಹಾಗಾಗಿ ಅವುಗಳಿಗೆ ಮಳೆ ಇಲ್ಲದೆ ಒಣಗುವ ಹಂತಕ್ಕೆ ಬಂದು ನಿಂತಿವೆ. ಸರ್ಕಾರ ರಾಣೆಬೆನ್ನೂರು ತಾಲೂಕನ್ನು ಹಸಿರು ಬರಗಾಲ ಎಂದು ಘೋಷಣೆ ಮಾಡಬೇಕೆಂದು ಸರ್ಕಾರದ ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ತಹಸಿಲ್ದಾರ್ ಮೂಲಕ ಮನವಿ ನೀಡಿದ್ದೇವೆ ಈ ಕುರಿತು ಕೂಡಲೇ ಕರ್ಮ ಕೈಗೊಳ್ಳಬೇಕು  ಎಂದರು.ತಾಲೂಕ ಸಂಚಾಲಕ ಲೋಕೇಶ್ ಸುತಾರ, ಮಾತನಾಡಿ ತಾಲೂಕಿನಲ್ಲಿ ರೈತರು ಬೆಳೆದಿರುವ ಬೆಳೆಗಳು ಒಣಗುತ್ತಿವೆ ಈ ತಿಂಗಳು ಮಳೆ ಬೀಳದೆ ಇರುವುದೇ ಇದಕ್ಕೆಲ್ಲ ಕಾರಣ ಆದಷ್ಟು ಬೇಗ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮೋಡ ಬಿತ್ತನೆಗೆ  ಅವಕಾಶ ಕೊಡಿಸಬೇಕು. ಕೇಂದ್ರದ ಸಿಪಾರಸ್ಸು ಬಂದ ನಂತರ ಹಾವೇರಿ ಜಿಲ್ಲೆಯ ಶಾಸಕರಾದ ಪ್ರಕಾಶ್ ಕೋಳಿವಾಡ ಅವರಿಗೆ ಮೋಡ ಬಿತ್ತನೆ ಮಾಡಲು ಪರವಾನಿಗೆ ನೀಡಿ ಜಿಲ್ಲೆಗೆ ಆದಷ್ಟು ಬೇಗ ಮಳೆ ಸುರಿಸುವ ಅವಕಾಶ ನೀಡಬೇಕು. ಎಂದರು. ರೈತ ಮುಖಂಡರಾದ ಎಲ್ಲಪ್ಪ ಎಲಿಗಾರ, ರಮೇಶಗೌಡ ಕರಬಸಳ್ಳೇರ, ಸಿದ್ದಪ್ಪ ಕುಪ್ಪೇಲೂರು, ಫಕೀರಗೌಡ ಬೂದಗಟ್ಟಿ, ಹುಚ್ಚಪ್ಪ ಪೂಜಾರ್, ಮಾಲತೇಶ್ ಮಿಳ್ಳಿಕಟ್ಟಿ, ಹನುಮಂತಪ್ಪ ಮಲ್ಲಾಡದ್, ಸುರೇಶಪ್ಪ ಧೂಳೆಹೊಳೆ, ಹುಚ್ಚಪ್ಪ ಮುದ್ದಿ ಸೇರಿದಂತೆ ಮತ್ತಿತರರು  ಪಾಲ್ಗೊಂಡಿದ್ದರು.

ಸುದ್ದಿ ಓದಿ