ಜಮಖಂಡಿ

ಪ್ರತಿಯೊಬ್ಬ ಯುವಕ ದೇಶದ ಅಭಿವೃದ್ಧಿಗಾಗಿ ಸೈನಿಕನಂತೆ ಶ್ರಮಿಸಿ: ಕೊಣ್ಣೂರೆ

ಪ್ರತಿಯೊಬ್ಬ ಯುವಕ ದೇಶದ ಅಭಿವೃದ್ಧಿಗಾಗಿ ಸೈನಿಕನಂತೆ ಶ್ರಮಿಸಿ: ಕೊಣ್ಣೂರೆ
ಜಮಖಂಡಿ ಶಹರ ಪೊಲೀಸ್ ಠಾಣೆ ಪಿಎಸ್ಐ ಬಸವರಾಜ ಕೊಣ್ಣೂರೆ ಮಾತನಾಡುತ್ತಿರುವುದು

ಲೋಕದರ್ಶನ ವರದಿ,

ಜಮಖಂಡಿ 05: ಈ ದೇಶದ ಪ್ರತಿಯೊಬ್ಬ ಯುವಕ ದೇಶದ ಅಭಿವೃದ್ಧಿಗಾಗಿ ಸೈನಿಕನಂತೆ ಶ್ರಮಿಸಬೇಕು.ಆಗ ಮಾತ್ರ ದೇಶ ಸುಧಾರಣೆಯಾಗಲು ಸಾಧ್ಯ. ಇಂದಿನ ಯುವಕರಿಗೆ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಸಾಕಷ್ಟು ಅವಕಾಶಗಳಿದ್ದು, ಅವನ್ನುಸದುಪಯೋಗ ಪಡೆಸಿಕೊಳ್ಳಬೇಕೆಂದು ಶಹರ ಪೊಲೀಸ್ ಠಾಣೆ ಪಿಎಸ್ಐ ಬಸವರಾಜ ಕೊಣ್ಣೂರೆ ಹೇಳಿದರು.

ನಗರದ ಶಹರ ಪೊಲೀಸ್ ಠಾಣೆ ಸಭಾಭವನದಲ್ಲಿ ನಡೆದ ಮಾಸಿಕ ಯುವಜನ ಸಭೆಯಲ್ಲಿ ಮಾತನಾಡಿದರು.

 ಮುಂಬರುವ ಹಿಂದೂ-ಮುಸ್ಲಿಂ ಸಮೂದಾಯಗಳ ಹಬ್ಬ-ಹರಿದಿನಗಳಲ್ಲಿ ಎರಡು ಸಮೂದಯದ ಯುವಕರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಸಮಾಜದಲ್ಲಿ ಯಾವುದೇ ಗಲಭೆಗಳಾಗದಂತೆ ಎಚ್ಚರಿಕೆ ವಹಿಸಬೇಕು. ಸಮಾಜದಲ್ಲಿನ ದುಷ್ಠಶಕ್ತಿಗಳ ಸದೆಬಡೆಯಲು ಯುವಕರು ಪೋಲಿಸರೊಂದಿಗೆ ಕೈ ಜೋಡಿಸಿ, ಅಂತಹ ಶಕ್ತಿಗಳ ಬಗ್ಗೆ ಸೂಕ್ತ ಮಾಹಿತಿ ನೀಡಿ, ಸಮಾಜದಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಬೇಕು ಎಂದರು.

ಈಚೆಗೆ ತಾಲೂಕಿನಲ್ಲಿ ದ್ವಿಚಕ್ರ ವಾಹನಗಳ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಕುಡಿದ ಅಮಲಿನಲ್ಲಿ ಯಾರೂ ವಾಹನ ಚಾಲನೆ ಮಾಡದಂತೆ ಎಚ್ಚರಿಕೆ ವಹಿಸಿಬೇಕು. ಅಪಘಾತದಿಂದ ಸಂಭವಿಸುವ ಅನೇಕ ಸಂಕಷ್ಟಗಳಲ್ಲಿ ಕುಟುಂಬಗಳು ನಾಶವಾಗುವ ಸಾಧ್ಯತೆಗಳಿದ್ದು, ಹೀಗಾಗಿ ಯುವಕರು ಮತ್ತಿನಲ್ಲಿ ವಾಹನ ಚಾಲನೆ ಮಾಡಬಾರದೆಂದು ಎಂದರು.

ಯುವ ಮುಖಂಡ ಪ್ರದೀಪ ಮೆಟಗುಡ್ಡ, ಮುಸ್ತಫಾ ಕರ್ಜಗಿ ಅನೇಕ ಯುವಕರು ಮಾತನಾಡಿದರು. ಡಿವೈಎಸ್ಪಿ ಶಾಂತವೀರ,ಸಿಪಿಐ ಗುರುನಾಥ ಚವ್ಹಾಣ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಗೂ ವಿವಿಧ ಸಂಘಟನೆಯ ಮುಖಂಡರು, ಯುವಕರು ಇದ್ದರು. 



ಸುದ್ದಿ ಓದಿ