ಗ್ರಾಮದ ಸಮಸ್ಯೆಗೆ ಗ್ರಾಮ ದೇವತೆ ಮೋರೆ ಹೋಗುತ್ತಿದ್ದರು : ಯಲಿಗಾರ
ಲೋಕದರ್ಶನ ವರದಿ
ಶಿಗ್ಗಾವಿ : ಗ್ರಾಮಗಳಲ್ಲಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಮೊದಲಿಗೇ ಊರಿನ ಹಿರಿಯರು ಗ್ರಾಮದ ಗ್ರಾಮದೇವತೆ ಮೋರೆ ಹೋಗುತ್ತಿದ್ದರು ಎಂದು ಸಮಾಜಸೇವಕ ಶಶಿಧರ ಯಲಿಗಾರ ಹೇಳಿದರು.
ಪಟ್ಟಣದ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವದ 8ನೇ ದಿನದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಶಿಗ್ಗಾವಿ ಗಂಜೀಗಟ್ಟಿ ಸಂಯುಕ್ತ ಆಶ್ರಯದಲ್ಲಿ ಮಾಡುತ್ತಿರುವ ಜಾತ್ರೆ ಇಂದು ಬಾವೈಕ್ಯತೆ ಸಂದೇಶ ಸಾರುವ ಮಹೋತ್ಸವವಾಗಿದೆ ಎಂದರು.
ವಿಜಯಪುರ ಕಮಾಂಡೆಂಟ್ ನಾಗನಗೌಡ ಮೆಳ್ಳಾಗಟ್ಟಿ ಮಾತನಾಡಿ ಯಾವ ನಾಡಿನಲ್ಲಿ ಧರ್ಮ ಜಾಗೃತಿ ಆಗುತ್ತದೆಯೋ ಆ ನಾಡು ಶಾಂತವಾಗಿರುತ್ತದೆ, ಧರ್ಮದ ರಕ್ಷಣೆಯಲ್ಲಿ ನಾವೆಲ್ಲಾ ತೊಡಗಿಕೊಂಡಾಗ ಭಾತೃತ್ವ ಬೆಳೆಯುತ್ತದೆ, ಧರ್ಮವನ್ನು ರಕ್ಷಿಸಲು ಮತಾಂಧರಾಗಬೇಕಿಲ್ಲಾ, ಎಲ್ಲಾ ಧರ್ಮಗಳನ್ನು ಒಂದುಗೂಡಿಸಿಕೊಂಡು ಹೋಗುವ ಮನೋಭಾವ ನಮ್ಮ ದೇಶದ ಪರಂಪರೆಯಾಗಿದೆ, ಇದರಿಂದಾಗಿ ನಮ್ಮ ದೇಶದಲ್ಲಿ ಹಲವಾರು ಧರ್ಮಗಳು ಜನ್ಮತಾಳಿ, ಆಶ್ರಯ ತಾಣವಾಗಿ ಇಡಿ ಜಗತ್ತಿಗೆ ವಿಶ್ವಗುರು ಸ್ಥಾನದಲ್ಲಿ ನಿಂತು ಸಂಸ್ಕಾರವನ್ನು ಸಾರುತ್ತಿದೆ, ಧರ್ಮದ ಅಂತಿಮ ತಿರುಳು ಧಯೆ ಮತ್ತು ಕರುಣೆ ಆಗಿರುತ್ತದೆ ಎಂದು ಹೇಳಿದರು.
ಸಮ್ಮುಖವಹಿಸಿ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು ಮಾತನಾಡಿ, ಭಜಿ ತಿಂದು ಮಜಾ ಮಾಡುವುದು ಜಾತ್ರೆಯಲ್ಲಾ, ಕಿರಿಯರ ಉತ್ಸಾಹದ ನುಡಿಗಳು ಹಿರಿಯರ ಅನುಭಾವದ ಮಾತುಗಳನ್ನು ಕೇಳುತ ಮಾನವಜನ್ಮವನ್ನು ಪಾವನದತ್ತ ಕೊಂಡೊಯ್ಯುವುದೆ ಜಾತ್ರೆ, ಮನುಷ್ಯನ ತೆಲೆ ಕಳಸವಾಗಿದ್ದು ಅದು ಶುದ್ಧವಿದ್ದಾಗ ಮಾತ್ರ ದೇವಾಲಯವೆಂಬ ದೇಹಕ್ಕೆ ಬೆಲೆ ಬರುತ್ತದೆ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಹುಬ್ಬಳಿಯ ಮೂರುಸಾವಿರ ಮಠದ ಶ್ರೀ ಗುರುಶಿದ್ದರಾಜಯೋಗೇಂದ್ರ ಮಹಾಸ್ವಾಮಿಗಳು ಮಾತನಾಡಿ, ಚೇಳಿನ ಧರ್ಮ ಕುಟುಕುವುದು, ಮಾನವನ ಧರ್ಮ ಕುಟುಕಿದ ಚೇಳನ್ನು ರಕ್ಷಿಸಿ ಬದುಕಲು ಅವಕಾಶ ಮಾಡಿಕೊಟ್ಟು, ಅಹಿಂಸೆಯ ಮಾರ್ಗದಲ್ಲಿ ಬಧುಕಿನ ಸೌಧ ಕಟ್ಟಿಕೊಂಡು ಬಾಳುವುದೇ ಶ್ರೇಷ್ಟವಾದ ಮಾನವ ಧರ್ಮವಾಗಿದೆ, ಜಗತ್ತಿಗೆ ಮೊಟ್ಟಮೊದಲಭಾರಿಗೆ ಭಾವೈಕ್ಯತೆಯ ಸಂದೇಶ ಸಾರಿದ ಗುರು ಗೋವಿಂದ ಮತ್ತು ಸಂತ ಶರೀಫರು ಬಾಳಿದ ಪಾವನ ಭೂಮಿ ಶಿಗ್ಗಾವಿಯಾಗಿದೆ ಎಂದು ಹೇಳಿದರು.
ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಜನ್ನನ ಯಶೋಧರ ಚರಿತ್ರೆ ಎಂಬ ದೊಡ್ಡಾಟದ ಸಾಂಸ್ಕೃತಿಕ ಕಾರ್ಯಕ್ರಮ ಅಧ್ಬುತವಾಗಿ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರವಾಯಿತು. ಸಂಜೀವಕುಮಾರ ನೀರಲಗಿ, ಯಾಸಿರಖಾನ ಪಠಾಣ, ಡಾ ಆರ್. ಎಸ್.ಅರಳೆಲೆಮಠ, ಸುಭಾಸ ಚವ್ಹಾಣ ಮಾತನಾಡಿದರು.
ಅಧ್ಯಕ್ಷತೆ ಜಯಣ್ಣಾ ಹೆಸರೂರ, ಸಮಿತಿ ಅಧ್ಯಕ್ಷ ಮಂಜುನಾಥ ಕುನ್ನೂರ, ಪರುಶರಾಮ ಸೊನ್ನದ, ಕರೆಯಪ್ಪ ಕಟ್ಟಿಮನಿ, ಅಶೋಕ ಕಾಳೆ, ಶಿವಾನಂದ ಕುನ್ನೂರ, ಶಂಭಣ್ಣಾ ಆಜೂರ, ಕಲ್ಲಪ್ಪ ಮಾರನಬೀಡ, ಹೆಚ್.ಎಸ್.ಹಲಸೂರ ಸೇರಿದಂತೆ ವರದಿಗಾರರಾದ ಸುರೇಶ ಯಲಿಗಾರ, ಶಿವುಕುಮಾರ ಕೋಟಗಿಮಠ, ಮಹಾಲಿಂಗಸ್ವಾಮಿ ಹಿರೇಮಠ ಉಪಸ್ಥಿತರಿದ್ದರು