ಮಹಿಳೆಯನ್ನು ಗೌರವಿಸಿದರೆ ಮನೆಯಲ್ಲಿ ಸುಖ, ಶಾಂತಿ ನೆಲೆಸಲು ಸಾಧ್ಯ
ಲೋಕದರ್ಶನ ವರದಿ
ಶೇಡಬಾಳ 21: ಯಾವುದೇ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಅದರಂತೆ ನನ್ನ ಯಶಸ್ವಿನಲ್ಲಿ ನನ್ನ ಶ್ರೀಮತಿಯ ಪ್ರಾತ ಬಹಳ ಅಮೂಲ್ಯವಾಗಿದೆ. ಅವಳ ಸಹಕಾರದಿಂದಲೇ ನಾನು ಶಾಸಕನಾಗಿ, ಸಚಿವನಾಗಿ 5 ಸಕ್ಕರೆ ಕಾರ್ಖಾನೆಯ ಮಾಲಿಕನಾಗಿದ್ದೇನೆಂದು ಘಂಟಾಘೋಷವಾಗಿ ಹೇಳುತ್ತೇನೆಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಅವರು ಮಾ.19 ರಂದು ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಲಕ್ಷ್ಮೀ ದೇವಿಯ ಆವರಣದಲ್ಲಿ ದುರ್ಗಾ ಶಕ್ತಿ ಮಹಿಳಾ ಸಂಘ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಉಗಾರ ಗ್ರಾಮೀಣ ಮಹಿಳಾ ಉದ್ಯೋಗ ಮಹೋತ್ಸವ-2023ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು.
ಯಾವ ಮನೆಯಲ್ಲಿ ಮಹಿಳೆಯನ್ನು ಗೌರವಿಸಲಾಗುತ್ತದೆಯೋ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವೆಂದು ಹೇಳಿದರು.
ಶಾಸಕರ ಪತ್ನಿ ಉಜ್ವಲಾತಾಯಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಡಾ. ಶ್ರದ್ಧಾ ವಿನೋದ ಮೂಡಲಗಿ ವಿಶ್ವ ಮಹಿಳಾ ದಿನಾಚರಣೆ ಬಗ್ಗೆ ಉಪನ್ಯಾಸ ನೀಡಿದರು.
ದುರ್ಗಾಶಕ್ತಿ ಮಹಿಳಾ ಸಂಘದ ಅಧ್ಯಕ್ಷೆ ಉಜ್ವಲಾ ಜಯೇಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಉಗಾರ ಖುರ್ದ ಗ್ರಾಮದಲ್ಲಿ ಗ್ರಾಮೀಣ ಮಹಿಳಾ ಉದ್ಯೋಗ ಮಹೋತ್ಸವ 2023 ಕಾರ್ಯಕ್ರಮವನ್ನು ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ದಿನಾಲೂ ಸಾಯಂಕಾಲ ಮಹಿಳೆಯರ ಬಗ್ಗೆ ಉಪನ್ಯಾಸ, ಮಕ್ಕಳ ಡ್ಯಾನ್ಸ್ ಕಾರ್ಯಕ್ರಮ, ಹೋಮ್ ಮಿನಿಸ್ಟರ್, ಗ್ರಾಮೀಣ ಕಲಾವಿದರಿಂದ ಮನೋರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇದಲ್ಲದೇ ಲಕ್ಷ್ಮೀ ದೇವಾಲಯದ ಆವರಣದಲ್ಲಿ ಮಹಿಳೆಯರು ತಯಾರಿಸಿದ ಖಾದ್ಯ ಪದಾರ್ಥಗಳ ಹಾಗೂ ಇನ್ನಿತರ ಸ್ಟಾಲ್ಗಳನ್ನು ತೆರೆಯಲಾಗಿದೆ ಎಂದರು. ಇದರ ಮಹೋತ್ಸವದ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಉಜ್ವಲಾ ಶೆಟ್ಟಿ ಕರೆ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಮಹಿಳೆಯರನ್ನು, ಕೊರೋನಾ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕರ ಪ್ರಾಣ ರಕ್ಷಣೆ ಮಾಡಿದ ಆಶಾಕಾರ್ಯಕರ್ತಿ ಯರನ್ನು, ನಿಸ್ವಾರ್ಥ ಸಮಾಜ ಸೇವೆ ಸಲ್ಲಿಸಿದ ಪತ್ರಕರ್ತರನ್ನು ಸತ್ಕರಿಸಿ, ಗೌರವಿಸಲಾಯಿತು.
ಪದ್ಮಶ್ರೀ ಶೆಟ್ಟಿ, ಗೀತಾಂಜಲಿ ಕಾಕಡೆ, ಸಂಗೀತಾ ದೇಶಿಂಗೆ, ವಿಜಯಾ ಘಾರಗೆ, ಸುಲೋಚನಾ ಮಾಳಿ, ಜಯಂದ್ರ ಶೆಟ್ಟಿ, ಬಿಜೆಪಿ ಬ್ಲಾಕ್ ಉಪಾಧ್ಯಕ್ಷ ರಾಕೇಶ ಪಾಟೀಲ, ಸುಜೀತ ಫರಾಕಾಟೆ, ಪ್ರಫುಲ ಥೋರೂಸೆ, ಪುರಸಭೆ ಸದಸ್ಯರು ಸೇರಿದಂತೆ ಗ್ರಾಮದ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.