ಕಸಾಪ ಚುನಾವಣೆಯಲ್ಲಿ : ನಾಡೋಜ ಡಾ, ಮಹೇಶ ಜೋಶಿ ಅವರನ್ನು ಬೆಂಬಲಿಸಲು ಕುಂದರಗಿ ಮನವಿ
ಅಥಣಿ 12: ನಾಡೋಜ ಡಾ. ಮಹೇಶ ಜೋಶಿ ಒಬ್ಬ ಕ್ರಿಯಾಶೀಲ ಸಂಘಟಕ ವ್ಯಕ್ತಿಯಾಗಿ, ಕನ್ನಡದ ಶಕ್ತಿಯಾಗಿ, ಕಾರ್ಯಕರ್ತನಂತೆ ಕೆಲಸ ಮಾಡುತ್ತಿದ್ದಾರೆ. ಅವರು ಈ ಬಾರಿ ಮೇ ತಿಂಗಳಿನಲ್ಲಿ ಜರುಗುವ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿರುವುದು ಸಂತಸ ವಿಚಾರವಾಗಿದೆ ಅಥಣಿ ಕಾಗವಾಡ ಸೇರಿದಂತೆ ಇತರೆ ತಾಲೂಕಿನ ಕಸಾಪ ಸದಸ್ಯರು ನಾಡೋಜ ಡಾ. ಮಹೇಶ್ ಜೋಶಿ ಅವರಿಗೆ ಮತ ನೀಡಿ ಬೆಂಬಲಿಸಬೇಕು ಎಂದು ಕನ್ನಡದ ವಕೀಲರು ಮತ್ತು ಖ್ಯಾತ ರಂಗಭೂಮಿ ಕಲಾವಿದ ಕೆ ಎಲ್ ಕುಂದರಗಿ ಮನವಿ ಮಾಡಿದರು.
ಪಟ್ಟಣದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಕನ್ನಡದ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯು ಬರುವ ಮೇ ತಿಂಗಳಲ್ಲಿ ಜರುಗಲಿದ್ದು, ಕನ್ನಡಿಗರ ಜನಸಾಮಾನ್ಯರ ಧ್ವನಿಯಾಗಿ, ಕನ್ನಡದ ಪ್ರಚಾರಕರಾಗಿ ಸೇವೆ ಮಾಡುತ್ತಿರುವ ನಾಡೋಜ ಡಾ. ಮಹೇಶ್ ಜೋಶಿ ಅವರು ಸಂತ ಶಿಶುನಾಳ ಶರೀಫರ ಗುರುಗಳಾಗಿದ್ದ ಗುರುಗೋವಿಂದ ಭಟ್ಟರ ವಂಶಜರಾಗಿದ್ದು, ಕನ್ನಡಿಗರ ಸೇವೆಯನ್ನು ವಿನೂತನ ಮಾದರಿಯಲ್ಲಿ ಮಾಡುವ ಕನಸು ಹೊಂದಿದ್ದಾರೆ. ಗಡಿನಾಡಿನ ಕನ್ನಡಿಗರ ಅಶೋತ್ತರಗಳ ಅನೇಕ ಕಾರ್ಯಕ್ರಮಗಳನ್ನು ನಡೆಸುವ ಕನಸು ಹೊಂದಿದ್ದಾರೆ. ಅವರನ್ನು ಬೆಂಬಲಿಸಬೇಕು ಎಂದು ಮತಯಾಚಿಸಿದರು.
ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ ಮಾತನಾಡಿದರು. ಈ ವೇಳೆ ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಮಹಾದೇವ ಬಿರಾದಾರ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಬಾಳಾಸಾಹೇಬ ಲೋಕಾಪುರ, ಖ್ಯಾತ ಪ್ರವಚನಕಾರ ಬಾಬುರಾವ್ ಮಹಾರಾಜರು, ಕರವೇ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಸಾಮಾಜಿಕ ಹೋರಾಟಗಾರ ದೀಪಕ್ ಶಿಂದೆ, ಮುರುಗೇಶ್ ಬಾನಿ ಇನ್ನಿತರರು ಉಪಸ್ಥಿತರಿದ್ದರು.