ಮಕ್ಕಳಿಗೆ ಶಿಸ್ತು ಬೆಳೆಸುವಲ್ಲಿ ಸ್ಕೌಟ್ಸ್ ಗೈಡ್ಸ್ ಕಾರ್ಯಪ್ರವೃತ್ತವಾಗಿದೆ: ನಡಗಡ್ಡಿ
ಇಂಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಸುಮಾರು 100 ವರ್ಷದ ಇತಿಹಾಸವಿದ್ದು, ವಿಶ್ವದಾದ್ಯಂತ 216 ರಾಷ್ಟ್ರಗಳಲ್ಲಿ ಶಾಖೆ ಹೊಂದಿದ್ದು,ಪರಿಸರ ಸಂರಕ್ಷಣೆ ಸೇರಿದಂತೆ ಮಕ್ಕಳಿಗೆ ಶಿಸ್ತು, ಸಂಯಮ, ದೇಶಭಕ್ತಿ, ಉದಾರ ಮನೋಭಾವಗಳನ್ನು ಬೆಳೆಸುವಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್. ನಡಗಡ್ಡಿ ಹೇಳಿದರು.
ಬುಧವಾರ ತಾಲೂಕಿನ ಹಳಗುಣಕಿ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ಭಾರತ್ ಸ್ಕೌಟ್ಸ್, ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ ಇಂಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ಕೆಪಿಎಸ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸಂಸ್ಥಾಪನಾ ದಿನಾಚರಣೆ ಮತ್ತು ದೀಕ್ಷಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂಡಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ.ಮಂಜುನಾಥ ಕೋಟೆಣ್ಣವರ ಮಾತನಾಡಿ,ಮಕ್ಕಳ ಶಕ್ತಿ ಸಾಮಥ್ರ್ಯಗಳಿಗೆ ಶಿಸ್ತು, ಸಂಘಟನೆ ಮತ್ತು ಸೇವೆಯ ಸ್ವರೂಪ ಕೊಡುವುದೇ ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯ ಆಶಯ. ಮಕ್ಕಳಲ್ಲಿ ನಿಸರ್ಗದ ಒಲವು ಮೂಡಿಸಿ, ಸದಾ ಗೆಲುವಿನಿಂದ ಇರುವಂತೆ ಮಾಡುವ ಒಂದು ವಿಶಿಷ್ಟ ಶಿಕ್ಷಣವೇ ಸ್ಕೌಟ್ ಕಾರ್ಯಕ್ರಮ. ಸ್ಕೌಟ್ ಗೈಡ್ ಸ್ವಂತ ಅರಿವನ್ನು ಪರಿಶೋಧಿಸುವ, ಪ್ರಕಾಶಿಸುವ ಮತ್ತು ಅರಿತುಕೊಳ್ಳುವ ಅಗತ್ಯವನ್ನು ವಿಕಾಸಗೊಳಿಸುತ್ತದೆ ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಪಿ ಎಸ್ ಕುಂಬಾರ ಮಾತನಾಡಿ, ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ಸ್ ,ಗೈಡ್ಸ್ನ ಶಿಸ್ತು ಮತ್ತು ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ. ಮಕ್ಕಳು ನಾಲ್ಕು ಗೋಡೆಗಳ ನಡುವೆ ಓದು-ಬರಹ ಕಲಿಯುವುದರ ಜತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು, ಸಮನ್ವಯದಿಂದ ಬದುಕಬೇಕು ಎಂದು ಸಲಹೆ ನೀಡಿದರು.
ಸ್ಕೌಟ್ ಮಾಸ್ಟರ್ ಸಂತೋಷ ಬಂಡೆ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ಗಳು ಸನ್ನಡತೆ, ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವದಂಥ ಶಿಕ್ಷಣ ಪಡೆದು ಭಾರತೀಯ ಸಂಪನ್ಮೂಲ ವ್ಯಕ್ತಿಗಳಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಉಪ ಪ್ರಾಂಶುಪಾಲ ಎಸ್.ಬಿ. ಮಕಾನದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ಪೀಳಿಗೆಗೆ ಉತ್ತಮ ನಾಗರಿಕರನ್ನು ನಿರ್ಮಾಣ ಮಾಡುವ ಕೆಲಸ ಸ್ಕೌಟ್ಸ್ ಮತ್ತು ಗೈಡ್ಸ್ನಿಂದಾಗಬೇಕು. ಮನುಷ್ಯನಿಗೆ ಸಂತೋಷ ಮತ್ತು ಆನಂದ ಸ್ಕೌಟ್ಸ್ ಮತ್ತು ಗೈಡ್ಸ್ನಿಂದ ಸಿಗಲು ಸಾಧ್ಯ ಎಂದರು.
ತಾಲೂಕಾ ಕಾರ್ಯದರ್ಶಿ ಎಸ್.ಬಿ. ಪಾಟೀಲ, ಖಜಾಂಚಿ ಬಸವರಾಜ ಗೊರನಾಳ, ಸ್ಕೌಟ್ ಮಾಸ್ಟರ್ ದತ್ತಾತ್ರೇಯ ಕೋಳಾರಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಸದಸ್ಯರಾದ ಕಾಂತುಗೌಡ ಶಿನಖೇಡ, ಜಯಕೃಷ್ಣ ಶಿನಖೇಡ, ಚಂದ್ರಕಾಂತ ಶಿನಖೇಡ, ಸಿದ್ದು ಮಾಡಗ್ಯಾಳ, ಸಿದ್ಧರಾಮ ಹೆಗಡ್ಯಾಳ, ಸ್ಕೌಟ್ ಮಾಸ್ಟರ್ ಸಂಗಮೇಶ ಬಂಡೆ, ಗೈಡ್ ಕ್ಯಾಪ್ಟನ್ ಸವಿತಾ ಹಾದಿಮನಿ, ಶಿಕ್ಷಕರಾದ ಶ್ರೀಶೈಲ ಕರ್ಜಗಿ, ಎಸ್.ಎಂ. ಕಪನಿಂಬರಗಿ, ಎಂ.ಎಚ್. ಗಲಗಲಿ, ಎಂ.ಸಿ. ಜವಳಗಿ, ಎಸ್.ಯು. ದೊಡಮನಿ, ಎಲ್.ಜಿ.ಲಮಾಣಿ, ಎಸ್.ವೈ. ಕೋಷ್ಠಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಶಾಲೆಯ 64 ವಿದ್ಯಾರ್ಥಿಗಳಿಗೆ ಸ್ಕೌಟ್ಸ್, ಗೈಡ್ಸ್ ದೀಕ್ಷೆ ನೀಡಲಾಯಿತು.