ಮನರಂಜನೆ

ಗಾನಗಾರುಡಿಗ ಎಸ್ ಬಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಗಣ್ಯರ ಸಂತಾಪ

ಗಾನಗಾರುಡಿಗ ಎಸ್ ಬಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಗಣ್ಯರ ಸಂತಾಪ

ಬೆಂಗಳೂರು, ಸೆ.25 : ಗಾನಗಾರುಡಿಗ ಎಸ್ ಬಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿ, ಹಲವು ಭಾಷೆಗಳ ಚಿತ್ರಗಳಲ್ಲಿ ಹಾಡಿ, ದಶಕಗಳ ಕಾಲ ನಮ್ಮೆಲ್ಲರನ್ನು ರಂಜಿಸಿದ್ದ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆ ಸಾಂಸ್ಕೃತಿಕ ಲೋಕಕ್ಕೆ ತುಂಬಿಬಾರದ ನಷ್ಟ. ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿ, ಸುಪ್ರಸಿದ್ಧ ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನದ ಸುದ್ದಿ ಕೇಳಿ ತೀವ್ರ ನೋವುಂಟಾಗಿದೆ. ಕನ್ನಡ ಸೇರಿದಂತೆ 16ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 40 ಸಾವಿರ ಹಾಡುಗಳನ್ನು ಹಾಡಿದ್ದ ಎಸ್ಪಿಬಿ ಅವರ ಸರಳ ಸಜ್ಜನಿಕೆಯ ವ್ಯಕ್ತಿತ್ವ ಅನುಕರಣೀಯ ಎಂದು ಟ್ವೀಟ್ ಮಾಡಿದ್ದಾರೆ.

ಎಸ್ಪಿಬಿ ಅವರ ನಿಧನದಿಂದ ಸಂಗೀತ ಲೋಕದಲ್ಲಿ ಶೂನ್ಯ ಸೃಷ್ಟಿಯಾಗಿದೆ. ತಮ್ಮ ಮಧುರ ಕಂಠದಿಂದ ಸಂಗೀತ ಪ್ರೇಮಿಗಳ ಮನಸೂರೆಗೊಂಡಿದ್ದ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರು ಮತ್ತು ಅಭಿಮಾನಿಗಳಿಗೆ ಭಗವಂತ ಕರುಣಿಸಲಿ. ಕೊರೋನಾ ಸೋಂಕಿನಿಂದ ಎಸ್ಪಿಬಿ ಅವರು ಚೇತರಿಸಿಕೊಳ್ಳಲಾಗದೆ ಜೀವ ತೆತ್ತಿದ್ದು ಅತ್ಯಂತ ದುರ್ದೈವದ ಸಂಗತಿ. ಬಾಲಸುಬ್ರಹ್ಮಣ್ಯಂ ಗಾನಸುಧೆಯ ಮೋಡಿಗೆ ಒಳಗಾದವರಲ್ಲಿ ನಾನೂ ಒಬ್ಬ. ಮರುಜನ್ಮ ಎಂಬುದಿದ್ದರೆ ಕನ್ನಡನಾಡಿನಲ್ಲಿ ಹುಟ್ಟಲು ಬಯಸುತ್ತೇನೆ ಎಂಬ ಎಸ್ಪಿಬಿಯವರ ಮಾತು ಈಗಲೂ ಕಿವಿಯಲ್ಲಿ ಅನುರಣಿಸುತ್ತಿದೆ ಎಂದು ಕುಮಾರಸ್ವಾಮಿ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.

ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರು ಸಂತಾಪ ಸೂಚಿಸಿದ್ದು, ದೇಶ ಕಂಡ ಶ್ರೇಷ್ಠ ಗಾಯಕ, ಹಲವಾರು ಭಾಷೆಗಳಲ್ಲಿ ಹಾಡಿ ಕೋಟ್ಯಂತರ ಅಭಿಮಾನಿಗಳ ಪ್ರೀತಿ ಸಂಪಾದಿಸಿದ ಹಾಡುಗಾರ, ನಟ, ಸಂಗೀತ ನಿರ್ದೇಶಕ ಶ್ರೀ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಕೊರೊನ ಸೋಂಕಿನೊಂದಿಗೆ ಸತತವಾಗಿ ಹೋರಾಡಿದ ಅವರು ಕೊನೆಗೂ ವಿಧಿಯ ಕರೆಗೆ ಓಗೊಟ್ಟು ಗಾಯನ‌ ನಿಲ್ಲಿಸಿ ಚಿರಮೌನಕ್ಕೆ ಶರಣಾಗಿದ್ದಾರೆ. 

ಅವರ ಸಾವು ಇಡೀ ಭಾರತೀಯ ಚಿತ್ರರಂಗದಲ್ಲಿ ಶೂನ್ಯಭಾವ ಸೃಷ್ಟಿಸಿದೆ. ಎಲ್ಲರ ಪ್ರೀತಿಯ 'ಬಾಲು' ಅವರ ಅಗಲಿಕೆ ಎಂದೂ ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಈ ನೋವು ತಡೆದುಕೊಳ್ಳುವ ಶಕ್ತಿ ಭಗವಂತ ನೀಡಲಿ.ನಮ್ಮಂತಹ ಎಷ್ಟೋ ಅಭಿಮಾನಿಗಳ ಹೃದಯದಲ್ಲಿ ಎಸ್ ಪಿ ಬಿ ಎಂದಿಗೂ ಅಜರಾಮರ. #ಸದ್ಗತಿ|| ಎಂದು ಸಚಿವರು ಶೋಕ ವ್ಯಕ್ತಪಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಎಸ್ ಪಿ ಬಿ ಅವರಿಗೆ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಬಾಲು ಅವರಿಗೆ ಕೊರೊನಾ ಸೋಂಕು ಇಲ್ಲದಿರುವುದು ವರದಿಯಾಗಿದೆ.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಂತಾಪ ಸೂಚಿಸಿದ್ದು, ಗಾನಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಇಂದು ಅಸ್ತಂಗತರಾಗುವುದರೊಂದಿಗೆ ಚಲನಚಿತ್ರ ಸಂಗೀತದ ಒಂದು ಯುಗವೇ ಅಂತ್ಯವಾಯಿತು ಎಂದು ಹೇಳಲು ನನಗೆ ತೀವ್ರ ದುಃಖವಾಗುತ್ತಿದೆ. ಎಸ್.ಪಿ.ಬಿ. ಈಗ ನಮ್ಮೊಂದಿಗೆ ಇಲ್ಲದಿರಬಹುದು, ಆದರೆ ಅವರ ಮಾಧುರ್ಯ ಸಿರಿಕಂಠದ ಗೀತ, ಸಂಗೀತಗಳಿಂದ ನಮ್ಮ ಮನಸ್ಸಿನಲ್ಲಿ ಸದಾ ನೆಲೆಸಿರುತ್ತಾರೆ. ಅವರಿಗೆ ಸಂಗೀತವೇ ಸರ್ವಸ್ವವಾಗಿತ್ತು.

ನಿನ್ನ ನೀನು ಮರೆತರೇನು ಸುಖವಿದೆ ?...ತನ್ನತನವ ತೊರೆದರೇನು ಸೊಗಸಿದೆ?... ಎಂದು ಅತ್ಯಂತ ಸೊಗಸಾಗಿ ಬದುಕಿನ ಅರ್ಥ ಸ್ಫುರಿಸುವಂತೆ ಹಾಡಿದ  ಎಸ್.ಪಿ.ಬಿ. ಅವರು ನಿಜಕ್ಕೂ  ಅಮರರಾಗಿದ್ದಾರೆ. ಎಸ್.ಪಿ.ಬಿ. ಅವರು ಕನ್ನಡ, ತೆಲುಗು, ತಮಿಳು, ಹಿಂದಿ ಹೀಗೆ ಅನೇಕ ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ ಎಂದರೆ ಅವರ ಸೃಜನಶೀಲತೆಯ ಅಂತಃಸತ್ವ ಎಷ್ಟೊಂದು ಸಮರ್ಥವಾಗಿತ್ತು ಎಂಬುದನ್ನು ಅರ್ಥೈಸಿಕೊಳ್ಳಬಹುದು. ಆದರೆ ಅವರ ಮೊದಲ ಪ್ರೀತಿ ಮತ್ತು ಒಲವು ಕನ್ನಡದ ಬಗ್ಗೆ ಇತ್ತು ಎಂಬುದು ಹೆಮ್ಮೆಯ ಸಂಗತಿ. ಅನೇಕ ಗೌರವ ಡಾಕ್ಟರೇಟ್ ಗಳಿಂದ ಹಿಡಿದು ಪದ್ಮ ಪ್ರಶಸ್ತಿವರೆಗೆ ಅನೇಕ ಪುರಸ್ಕಾರಗಳು ಅವರ ಪ್ರತಿಭೆಗೆ ಸಂದಿದ್ದವು. ಹೀಗೆ ಸರಸ್ವತಿಯ ಪುತ್ರರಾಗಿದ್ದ ಎಸ್.ಪಿ.ಬಿ. ಅವರ ಪ್ರತಿಭೆಗೆ ಅವರೇ ಸಾಟಿ. ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಅಗಲಿದ ಅವರ ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ. ಅವರ ಕುಟುಂಬದವರಿಗೆ ಮತ್ತು ಅಪಾರ ಅಭಿಮಾನಿಗಳಿಗೆ ನನ್ನ ಸಾಂತ್ವನಗಳು. ಕೊರೋನ ಮಹಾಮಾರಿಯಿಂದಾಗಿ ನಮ್ಮ ನಾಡು ಇತ್ತೀಚೆಗೆ ಹಲವು ಗಣ್ಯರನ್ನು ಕಳೆದುಕೊಂಡು ಆತಂಕದಲ್ಲಿದೆ. ಇವರ ಅಗಲಿಕೆಯನ್ನು ನಮಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ದೇವರು ಕೊರೋನಾ ಪಿಡುಗಿಗೆ ಮುಕ್ತಿ ನೀಡಿ ನಾಡಿನ ಜನರಲ್ಲಿ ಸುಖಶಾಂತಿ ಸಮಾಧಾನ ನೆಲೆಸುವಂತೆ ಆಶೀರ್ವದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಲಕ್ಷ್ಮಣ ಸವದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಸಂತಾಪ ಸೂಚಿಸಿ, ತಮ್ಮ ಗಾಯನದಿಂದಲ್ಲೇ ಭಾರತದ ಸಂಗೀತ ರಸಿಕರನ್ನು ಮುಗ್ದಗೊಳಿಸಿದ್ದ ಎಸ್.ಪಿ ಬಾಲಸುಬ್ರಹ್ಮಣ್ಯಂ ಇಂದು ಮಧ್ಯಾಹ್ನ ಚೆನ್ನೈನ ಎಂ ಜಿ ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿರುವುದು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಸ್ವರ ಭಾಸ್ಕರ ಎಂದೇ ಹೆಸರಾಗಿದ್ದ ಬಾಲಸುಬ್ರಹ್ಮಣ್ಯಂ ಅವರ ನಿಧನ ಚಿತ್ರರಂಗಕ್ಕೆ ಹಾಗೂ ಅವರ ಅಪಾರ ಅಭಿಮಾನಿಗಳಿಗೆ ಆಘಾತವಾಗಿದೆ. ಅವರ ಹಾಡುಗಳನ್ನು ಕೇಳುವ ಮೂಲಕ ಅವರ ಬಗ್ಗೆ ಅಭಿಮಾನವನ್ನು ಇಟ್ಟುಕೊಂಡಿದ್ದ ನನಗೆ ನಿಜಕ್ಕೂ ದುಃಖ ಇಮ್ಮಡಿಸಿದೆ. ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರಿಗೆ, ಅಪ್ತ ಬಳಗಕ್ಕೆ, ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬಿ.ಎ.ಬಸವರಾಜ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಡಿ.ಕೆ ಶಿವಕುಮಾರ್ ಸಂತಾಪ; ಖ್ಯಾತ ಬಹುಭಾಷಾ ಗಾಯಕ ಹಾಗೂ ನಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ. 'ಈ ದೇಶ ಕಂಡ ದಿಗ್ಗಜ ಗಾಯಕ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನು ಅಗಲಿರುವ ಸುದ್ದಿ ಕೇಳಿ ಮನಸ್ಸಿಗೆ  ಬೇಸರವಾಗಿದೆ.

ಕಳೆದ ಮೂರು ದಿನಗಳಿಂದ ಒಂದಾದ ಮೇಲೊಂದರಂತೆ ಕೆಟ್ಟ ಸುದ್ದಿಗಳೇ ಬರುತ್ತಿರುವುದು ನೋವಿನ ವಿಚಾರ. ಅವರು ಕೊರೋನಾ ಸೋಂಕಿನಿಂದ ಆಸ್ಪತ್ರೆ ಸೇರಿ 51 ದಿನಗಳು ಕಳೆದಿದ್ದು, ನಮ್ಮೆಲ್ಲರಿಗೂ ಅವರ ಆರೋಗ್ಯದ ಬಗ್ಗೆ ಚಿಂತೆ ಇತ್ತು.  ಲಕ್ಷಾಂತರ ಅಭಿಮಾನಿಗಳು ಅವರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ ಆ ಯಮ ನಿಷ್ಕರುಣಿ. ಹೀಗಾಗಿ ನಮ್ಮ ಪ್ರಾರ್ಥನೆ ಫಲಿಸಲಿಲ್ಲ. ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಬಾಲಸುಬ್ರಹ್ಮಣ್ಯಂ ತಮ್ಮ ಕಂಠ ಸಿರಿಯಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರ ಹಾಡುಗಳನ್ನು ಕೇಳಿ ನಾವು ಬೆಳೆದಿದ್ದೇವೆ. ಅವರ ಸಾಧನೆಗೆ ಪದ್ಮ ಶ್ರೀ ಹಾಗೂ ಪದ್ಮ ಭೂಷಣ ಪ್ರಶಸ್ತಿ ಸೇರಿದಂತೆ 6 ಬಾರಿ ರಾಷ್ಟ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ ಎಂದು ಶಿವಕುಮಾರ್ ಅವರು ಸ್ಮರಿಸಿಕೊಂಡಿದ್ದಾರೆ . 

ತಮ್ಮ ಸರಳತೆ, ವಿನಯತೆಯಿಂದಲೂ ಅಭಿಮಾನಿಗಳ ಮನಗೆದ್ದಿದ್ದ ಎಸ್ ಪಿಬಿ ಅವರ ನಿಧನದಿಂದ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಒಂದು ಅದ್ಭುತ ಯುಗವೇ ಅಂತ್ಯವಾದಂತಾಗಿದೆ. ಅವರ ಮುಗಿಲೆತ್ತರದ ಸಾಧನೆ ಹಾಗೂ ಹಾಡುಗಳಿಂದ ಅವರು ನಮ್ಮೊಂದಿಗೆ ಸದಾ ಜೀವಂತವಾಗಿ ಇರುತ್ತಾರೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರು, ಅಭಿಮಾನಿಗಳಿಗೆ ಈ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಡಿ.ಕೆ ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸಂತಾಪ ಸೂಚಿಸಿದ್ದು, ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿಧನ ಭರಿಸಲಾಗದ ದು:ಖ ತಂದಿದೆ. ಎಸ್ಪಿಬಿ ಮಾನವೀಯ ಗುಣ ಮತ್ತು ಮೌಲ್ಯಗಳ ನಿಧಿ. ಕರ್ನಾಟಕ ಸಂಗೀತ ಸಮ್ರಾಟ; ಹಾಡಿನ ಲೋಕದ ಕಣ್ಮಣಿ. ಅವರ ಹಾಡು-ಮಾತು-ವ್ಯವಹಾರ ಎಲ್ಲವೂ ಶ್ರೇಷ್ಠ; ಉದಾತ್ತ. ಬದುಕಿರುವಾಗಲೇ ದಂತಕತೆಯಾದ ಈ ಅಮರ ಗಾಯಕನನ್ನು ನಾಡು ಸದಾ ನೆನಪಿಡುತ್ತದೆ.  ದಿವಂಗತ ಆತ್ಮಕ್ಕೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.



ಸುದ್ದಿ ಓದಿ