ಚಿತ್ರ ನಿರ್ಮಾಣಕ್ಕೆ ಹಣಕಾಸು, ಬಾಕ್ಸ್ ಆಫೀಸ್ ಗಳಿಕೆ ಮೇಲ್ವಿಚಾರಣೆ: ಚಿತ್ರರಂಗದಿಂದ ಸಲಹೆ ಕೋರಿದ ಕೇಂದ್ರ
ಪ್ರಸಾರ ಭಾರತಿ ಅಧ್ಯಕ್ಷ ಪ್ರಸೂನ್ ಜೋಶಿ ನೇತೃತ್ವದ 14 ಸದಸ್ಯರ ಅಧ್ಯಯನ ಸಮಿತಿ ಈ ಸಲಹೆಗಳನ್ನು ಪರಿಶೀಲಿಸಲಿದೆ. ಚಲನಚಿತ್ರಗಳಿಗೆ ನೆರವು ನೀಡುವ ಪ್ರಸ್ತುತ ನಿಧಿಗಳಲ್ಲಿನ ಲೋಪಗಳನ್ನು ಸಮಿತಿ ಅಧ್ಯಯನ ಮಾಡಲಿದೆ. ನೀತಿ ರೂಪಣೆಗೆ ನೆರವಾಗುವಂತೆ ಬಾಕ್ಸ್ ಆಫೀಸ್ ಗಳಿಕೆಯ ಅಂಕಿಅಂಶಗಳನ್ನು ಸಂಗ್ರಹಿಸುವ ಮತ್ತು ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ರೂಪಿಸಲು ಶಿಫಾರಸು ಮಾಡಲಿದೆ.
ಚಿತ್ರಮಂದಿರಗಳ ಮೂಲಸೌಕರ್ಯ, ಚಿತ್ರ ವಿತರಣೆ, ಚಲನಚಿತ್ರೋತ್ಸವಗಳು, ಪ್ರೋತ್ಸಾಹಧನ, ಅಂತರರಾಷ್ಟ್ರೀಯ ಸಹನಿರ್ಮಾಣ, ಕೌಶಲ ತರಬೇತಿ ಹಾಗೂ ಹೊಸ ತಂತ್ರಜ್ಞಾನಗಳ ಕುರಿತೂ ಸಮಿತಿ ಪರಿಶೀಲನೆ ನಡೆಸಲಿದೆ.
ನಿರ್ದಿಷ್ಟ ಹಾಗೂ ಅನುಷ್ಠಾನಗೊಳಿಸಬಹುದಾದ ಸಲಹೆಗಳನ್ನು ಸಲ್ಲಿಸುವಂತೆ ಮತ್ತು ಲಭ್ಯವಿದ್ದಲ್ಲಿ ಪೂರಕ ಮಾಹಿತಿಯನ್ನು ಒದಗಿಸುವಂತೆ ನ. 4ರ ಪ್ರಕಟಣೆಯಲ್ಲಿ ಸಚಿವಾಲಯ ಕೋರಿದೆ. ಕಲಾವಿದರು, ತಂತ್ರಜ್ಞರು, ವಿತರಕರು, ಚಿತ್ರರಂಗದ ಸಂಘಟನೆಗಳು, ತಜ್ಞರು ಹಾಗೂ ಆಸಕ್ತ ವ್ಯಕ್ತಿಗಳು ಮತ್ತು ಸಂಸ್ಥೆಗಳೂ ಸಲಹೆ ಸಲ್ಲಿಸಬಹುದು.
ಸಚಿವಾಲಯವು 2026ರ ಜುಲೈ 29ರಂದು ಮೂರು ತಿಂಗಳ ಆರಂಭಿಕ ಅವಧಿಗೆ ಅಧ್ಯಯನ ಸಮಿತಿಯನ್ನು ರಚಿಸಿತ್ತು. ಅ. 29ರ ಆದೇಶದ ಮೂಲಕ ಸದಸ್ಯತ್ವವನ್ನು ಪರಿಷ್ಕರಿಸಿ, ಸಮಿತಿ ರಚನೆಯಾದ ದಿನಾಂಕದಿಂದ 12 ತಿಂಗಳೊಳಗೆ ವರದಿ ಸಲ್ಲಿಸಲು ಗಡುವು ನೀಡಲಾಗಿದೆ.
ಚಲನಚಿತ್ರ ನಿರ್ದೇಶಕರಾದ ಅಶುತೋಷ್ ಗೋವಾರಿಕರ್, ವಿವೇಕ್ ಅಗ್ನಿಹೋತ್ರಿ ಮತ್ತು ಸುಭಾಷ್ ಘಾಯ್, ನಟರಾದ ಧನುಷ್ ಮತ್ತು ಕಾರ್ತಿಕ್ ಆರ್ಯನ್, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ. ಕೃಷ್ಣ ಕುಮಾರ್ ಹಾಗೂ ಭಾರತೀಯ ಚಲನಚಿತ್ರ ಒಕ್ಕೂಟದ ಅಧ್ಯಕ್ಷ ಅಭಯ್ ಸಿನ್ಹಾ ಸಮಿತಿಯಲ್ಲಿದ್ದಾರೆ. ರವಿ ಕೊಟ್ಟಾರಕ್ಕರ, ಬಿಮಲ್ ಪಾರೇಖ್, ಅಪರ್ಣಾ ಪುರೋಹಿತ್, ರಿತೇಶ್ ಸಿಧ್ವಾನಿ ಮತ್ತು ಜ್ಯೋತಿ ದೇಶಪಾಂಡೆ ಕೂಡ ಸದಸ್ಯರಾಗಿದ್ದಾರೆ. ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಆಸಕ್ತರು Vaishali.27@pib.gov.in ವಿಳಾಸಕ್ಕೆ “Suggestions for the High-Level Study Group on the Indian Film Industry” ಎಂಬ ವಿಷಯದೊಂದಿಗೆ ಇಮೇಲ್ ಮೂಲಕ ಸಲಹೆಗಳನ್ನು ಕಳುಹಿಸಬಹುದು. ಸಲಹೆ ಸಲ್ಲಿಸಲು ಪ್ರಕಟಣೆಯಲ್ಲಿ ಕೊನೆಯ ದಿನಾಂಕವನ್ನು ನಮೂದಿಸಿಲ್ಲ.