24 ಗಂಟೆಯೊಳಗೆ 5 ಕೋಟಿ ವೀಕ್ಷಣೆ ದಾಟಿದ ಸಲ್ಮಾನ್ ಖಾನ್ ಅಭಿನಯದ 'ಮಾತೃಭೂಮಿ' ಚಿತ್ರದ ಟ್ರೇಲರ್
24 ಗಂಟೆಯೊಳಗೆ 5 ಕೋಟಿ ವೀಕ್ಷಣೆ ದಾಟಿದ ಸಲ್ಮಾನ್ ಖಾನ್ ಅಭಿನಯದ 'ಮಾತೃಭೂಮಿ' ಚಿತ್ರದ ಟ್ರೇಲರ್
ಮುಂಬೈ, ನ.12 : ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಚಿತ್ರದ ಟ್ರೇಲರ್ ಬಿಡುಗಡೆಯಾದ 24 ಗಂಟೆಗಳೊಳಗೆ 5 ಕೋಟಿಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.ಚಿತ್ರದ ಟ್ರೇಲರ್ಗೆ ಸಿನಿಪ್ರೇಕ್ಷಕರಿಂದ ಮಾತ್ರವಲ್ಲದೆ, ನಿವೃತ್ತ ಸೇನಾಧಿಕಾರಿಗಳು, ಯೋಧರು ಹಾಗೂ ರಾಜಕೀಯ ಮುಖಂಡರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮೇಜರ್ ಪವನ್ ಕುಮಾರ್ ಹಾಗೂ ಸೇನಾ ಪದಕ ಪುರಸ್ಕೃತ, ಸೇನಾ ಗುಪ್ತಚರ ವಿಭಾಗದ ಮಾಜಿ ಅಧಿಕಾರಿ ಮೇಜರ್ ಎಂ. ಜಾಲಿ ಸೇರಿದಂತೆ ಹಲವು ಗಣ್ಯರು ಟ್ರೇಲರ್ನ್ನು ಪ್ರಶಂಸಿಸಿದ್ದಾರೆ.
ಸೇನಾ ಹಿನ್ನೆಲೆಯುಳ್ಳ ಗಣ್ಯರಿಂದ ವ್ಯಕ್ತವಾಗಿರುವ ಮೆಚ್ಚುಗೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಯುದ್ಧದ ಭೀಕರತೆ, ದೇಶಕ್ಕಾಗಿ ಸೈನಿಕರು ಮಾಡುವ ತ್ಯಾಗ ಹಾಗೂ ಅವರ ಕುಟುಂಬಗಳು ಎದುರಿಸುವ ಭಾವನಾತ್ಮಕ ಸಂಕಷ್ಟಗಳನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ. ರೋಮಾಂಚನಕಾರಿ ಸಾಹಸ ದೃಶ್ಯಗಳು, ಆಕರ್ಷಕ ದೃಶ್ಯ ವೈಭವದ ಜೊತೆಗೆ ದೇಶಪ್ರೇಮ, ಮಾನವೀಯತೆ ಹಾಗೂ ಭಾವನಾತ್ಮಕ ಸನ್ನಿವೇಶಗಳು ಟ್ರೇಲರ್ನ ಪ್ರಮುಖ ಆಕರ್ಷಣೆಯಾಗಿವೆ.
ಸೇನಾ ಕಾರ್ಯಾಚರಣೆಗಳಲ್ಲಿನ ಅನಿಶ್ಚಿತತೆ, ಸೈನಿಕರ ಕುಟುಂಬಗಳ ನೋವು ಹಾಗೂ ಯುದ್ಧದಿಂದ ಉಭಯ ಕಡೆಯ ಜನರು ಅನುಭವಿಸುವ ಸಾವು-ನೋವಿನ ಪರಿಣಾಮಗಳನ್ನು ಚಿತ್ರದಲ್ಲಿ ಮನಮುಟ್ಟುವಂತೆ ಚಿತ್ರಿಸಲಾಗಿದೆ.
ಅಪೂರ್ವ ಲಖಿಯಾ ನಿರ್ದೇಶನದ ಈ ಚಿತ್ರವನ್ನು ಸಲ್ಮಾನ್ ಖಾನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಬಹುನಿರೀಕ್ಷಿತ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಚಿತ್ರವು ಡಿಸೆಂಬರ್ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.