ಧಾರವಾಡ - ಹುಬ್ಬಳ್ಳಿ

ನವೆಂಬರ್ ಮಹಾಕ್ರಾಂತಿಯ 107ನೇ ವರ್ಷಾಚರಣೆ

ನವೆಂಬರ್ ಮಹಾಕ್ರಾಂತಿಯ 107ನೇ ವರ್ಷಾಚರಣೆ

ಧಾರವಾಡ 07: ಮಾನವನಿಂದ ಮಾನವನ ಶೋಷಣೆಯನ್ನು ಕೊನೆಗಾಣಿಸಿ, ಪ್ರಪಂಚದಲ್ಲೇ ಮೊದಲ ಬಾರಿಗೆ ಕಾರ್ಮಿಕ ವರ್ಗದ ಅಧಿಕಾರ ಸ್ಥಾಪನೆಗೆ ಕಾರಣವಾದ 1917ರಲ್ಲಿ ರಷ್ಯಾದಲ್ಲಿ ಜರುಗಿದ ಮಹಾನ್ ನವೆಂಬರ್ ಸಮಾಜವಾದಿ ಕ್ರಾಂತಿಯ 107ನೇ ವರ್ಷಾಚರಣೆ ಕಾರ್ಯಕ್ರಮವನ್ನು ಸೋಷಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್‌ (ಎಸ್‌.ಯು.ಸಿ.ಐ-ಸಿ) ಪಕ್ಷದ ಧಾರವಾಡ ಜಿಲ್ಲಾ ಸಮಿತಿಯಿಂದ ಸನ್ಮತಿ ರಸ್ತೆಯಲ್ಲಿರುವ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಆಚರಿಸಲಾಯಿತು.  

ಈ ಸಂದರ್ಭದಲ್ಲಿ ನವೆಂಬರ್ ಮಹಾಕ್ರಾಂತಿಯ ಶಿಲ್ಪಿಗಳಾದ ಕಾಮ್ರೇಡ್ ಲೆನಿನ್, ಕಾಮ್ರೆಡ್ ಸ್ಟಾಲಿನ್ ರವರ ಭಾವಚಿತ್ರಕ್ಕೆ ಎಸ್‌.ಯು.ಸಿ.ಐ. ಕಮ್ಯುನಿಸ್ಟ್‌ ಪಕ್ಷದ ರಾಜ್ಯ ನಾಯಕರಾದ ಕಾಮ್ರೇಡ್ ವಿ. ನಾಗಮ್ಮಾಳ್ ಹಾಗೂ ಧಾರವಾಡ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಲಕ್ಷ್ಮಣ ಜಡಗಣ್ಣವರ ಪುಷ್ಪನಮನ ಸಲ್ಲಿಸಿದರು. ನವೆಂಬರ್ ಮಹಾಕ್ರಾಂತಿಯ ನೆನಪಿನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು. ದುಡಿಯುವ ವರ್ಗದ ಸಮಸ್ಯೆಗಳನ್ನು ಕೊನೆಗಾಣಿಸಿ ಎಲ್ಲರಿಗೂ ಆಹಾರ, ವಸತಿ, ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಮೂಲಭೂತ ಅವಶ್ಯಕತೆಗಳನ್ನು ಖಾತ್ರಿಪಡಿಸಿದ ರಷ್ಯಾದ ಮಹಾನ್ ನವೆಂಬರ್ ಸಮಾಜವಾದಿ ಕ್ರಾಂತಿಯಿಂದ ಸ್ಫೂರ್ತಿ ಪಡೆದು ಭಾರತದಲ್ಲಿ ಅಸ್ತಿತ್ವದಲ್ಲಿರುವ ಮರಣಾಸನ್ನ, ಕೊಳೆತ, ಶೋಷಕ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೊಗೆದು, ದೇಶದ ರೈತರು, ಕೂಲಿ-ಕಾರ್ಮಿಕರು, ದುಡಿಯುವ ವರ್ಗ, ಮದ್ಯಮವರ್ಗ ಎದುರಿಸುತ್ತಿರುವ ಸಮಸ್ಯೆಗಳನ್ನು ಕೊನೆಗಾಣಿಸಲು ಸಮಾಜವಾದಿ ಕ್ರಾಂತಿ ನೆರವೇರಿಸಲು ಪಣತೊಡಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಭುವನಾ ಬಳ್ಳಾರಿ, ದೀಪಾ ಧಾರವಾಡ, ಶರಣು ಗೋನವಾರ, ಮಧುಲತಾ ಗೌಡರ್, ಭವಾನಿಶಂಕರ್ ಗೌಡ, ಸದಸ್ಯರಾದ ಹನುಮೇಶ ಹುಡೇದ್, ಗಂಗಾ ಕೋಕರೆ, ರಣಜಿತ್ ದೂಪದ್, ದೇವಮ್ಮ ದೇವತಕಲ್, ಪ್ರೀತಿ ಸಿಂಗಾಡೆ ಮುಂತಾದವರು ಭಾಗವಹಿಸಿದ್ದರು. 


ಸುದ್ದಿ ಓದಿ