ಜೀರೋ ಬ್ಯಾಲೆನ್ಸ್, ಜೇಂಟಿ ಖಾತೆ ತೆರೆಯುವ ಕಾರ್ಯಕ್ರಮಕ್ಕೆ ಚಾಲನೆ
ರಾಣೇಬೆನ್ನೂರ 10: ಬಡವರು, ರೈತಾಪಿವರ್ಗದವರು, ಕೂಲಿಕಾರ್ಮಿಕರು ಸೇರಿದಂತೆ ಎಲ್ಲವರ್ಗದವರಿಗೂ ಅನುಕೂಲವಾಗಲೆಂಬ ಸದುದ್ದೇಶದಿಂದ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನ್ಧನ್ ಖಾತೆ ತೆರೆಯುವ ವಿನೂತನ ಯೋಜನೆಯನ್ನು ಜಾರಿಗೊಳಿಸಿದರು ಅಷ್ಟೇಯಲ್ಲದೆ ಪಿಎಂಜೆವೈ, ಪಿಎಂಎಸ್ಬಿವೈ, ಅಟಲ್ ಪಿಂಚಣಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಇದರ ಮಾಹಿತಿಯನ್ನು ಪಡೆದು ಅವುಗಳ ಸೌಲಭ್ಯವನ್ನು ಪಡೆಯಬೇಕು ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹೊನ್ನತ್ತಿ ಶಾಖೆಯ ಮ್ಯಾನೇಜರ್ ಸುಧೀರ್ರವರು ಹೇಳಿದರು.
ಬುಧವಾರದಂದು ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳಿಗೆ ಜೀರೋ ಬ್ಯಾಲೆನ್ಸ್ ಮತ್ತು ಜೇಂಟಿ ಖಾತೆ ತೆರೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಸ್ತುತ ದಿನಮಾನಗಳಲ್ಲಿ ಸರ್ವರಿಗೂ ಉಳಿತಾಯ ಖಾತೆ ಅತ್ಯವಶ್ಯಕವಾಗಿದ್ದು, ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹುಟ್ಟಿದ ಮಗುವಿನಿಂದ ಹಿಡಿದು ವಯೋವೃದ್ಧರವರೆಗೂ ಉಳಿತಾಯ ಖಾತೆ ಅತ್ಯವಶ್ಯಕವಾಗಿ ಬೇಕಾಗಿದೆ ಎಂದರು.
ಶಾಲಾ ಮಕ್ಕಳಿಗೂ ಸಹ ವಿದ್ಯಾರ್ಥಿ ವೇತನ ಪಡೆಯಲು, ಮತ್ತು ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಉಳಿತಾಯ ಖಾತೆ ಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಯೋಜನೆಗಳನ್ನು ಬ್ಯಾಂಕ್ಗಳಲ್ಲಿ ರೂಪಿಸಲಾಗಿದೆ ಅವುಗಳ ಸದುಪಯೋಗಪಡೆದುಕೊಳ್ಳಬೇಕೆಂದರು.
ಗ್ರಾಪಂ ಸದಸ್ಯ ಚಂದ್ರ್ಪ ದಳವಾಯಿ, ಎಸ್ಡಿಎಂಸಿ ಅಧ್ಯಕ್ಷ ಜಿ.ವಿ.ದೀಪಾವಳಿ, ಸದಸ್ಯರಾದ ಗಂಗಾಧರಯ್ಯ ಪೂಜಾರ, ಶಂಬುಲಿಂಗಪ್ಪ ಚಕ್ರಸಾಲಿ, ಜಯಪ್ಪ ಹೊನಕುದರಿ, ಮುಖ್ಯೋಪಾಧ್ಯಾಯರಾದ ವಿಜಯ ಪೂಜಾರ, ಐ ಎಚ್ ಮೈದೂರ, ರವಿ ಪಾಟೀಲ, ಸೈಯದ್ ಜುಲ್ಫಿಕರ್, ದಿವ್ಯಾ ಎ ಜಿ, ಪ್ರವೀಣ ಬನ್ನಿಮಟ್ಟಿ, ಹೊನ್ನಪ್ಪ ನುಗ್ಗಿಮರದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.