ಒಬ್ಬ ಆದರ್ಶ ತಾಯಿ ನೂರು ಗುರುಗಳಿಗಿಂತ ಶ್ರೇಷ್ಠ: ಡಾ.ಅರ್ಚನಾ ಅಥಣಿ
ಅಥಣಿ 16: "ಅಮ್ಮಾ" ಎನ್ನುವುದು ಮಕ್ಕಳ ತುಟಿಯ ಮೇಲೆ ಇರುವ ದೇವರ ಹೆಸರು. ಒಬ್ಬ ಆದರ್ಶ ತಾಯಿ ನೂರು ಜನ ಗುರುಗಳಿಗಿಂತಲೂ ಶ್ರೇಷ್ಠಳಾಗಿರುತ್ತಾಳೆ. ಆದ್ದರಿಂದಲೇ ತಾಯಿ ಮಾಡುವುದೆಲ್ಲಾ ಮಕ್ಕಳ ಹಿತಕ್ಕಾಗಿ. ಅವಳು ಮಹಾತ್ಯಾಗಿ. ಮನೆ, ಮಕ್ಕಳು, ಗಂಡ ಎಂಬ ಸಂಸಾರದ ಜಂಜಾಟಗಳನ್ನು ನಿಭಾಯಿಸಿಕೊಂಡು ಕಲೆ, ಸಾಹಿತ್ಯ, ಭಾರತೀಯ ಸಂಸ್ಕೃತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾಳೆ. ವಿಶ್ವದಲ್ಲಿಯೇ ತಾಯಂದಿರ ಸ್ಥಾನ ಹಿರಿದು ಎಂದು ಖ್ಯಾತ ಸಾಹಿತಿ ಡಾ.ಅರ್ಚನಾ ಅಥಣಿ ಹೇಳಿದರು.
ಸರ್ವೋದಯ ಶಿಕ್ಷಣ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಥಣಿ ಹಾಗೂ ಚಿನ್ಮಯ ಪ್ರಕಾಶನ ಅಥಣಿ ಇವುಗಳ ಸಹಯೋಗದಲ್ಲಿ "ಯುಗಾದಿ ಸಂಭ್ರಮ-2021" ನಿಮಿತ್ಯ ಯುಗಾದಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಹಿಳೆಯರಿಗೆ ಮನ್ನಣೆ, ಸ್ವಾತಂತ್ರ್ಯ, ಸಮಾನತೆ ನೀಡಿದ ಬುದ್ಧ, ಬಸವ, ಅಂಬೇಡ್ಕರವರು ಮಹಿಳೆಯರಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಪಾದನೆಯ ತ್ರಿವೇಣಿ ಸಂಗಮ. ಭಾರತೀಯ ಮಹಿಳೆಯರಿಗೆ ಸ್ವಾತಂತ್ರ್ಯವನ್ನು ನೀಡಿದ ಬುದ್ಧ, ಬಸವ, ಡಾ.ಬಾಬಾಸಾಹೇಬ ಅಂಬೇಡ್ಕರವರು ಮಾನವೀಯ ಮೌಲ್ಯಗಳ ಹರಿಕಾರರು. ಸ್ತ್ರೀ ಸಮಾನತೆಗೆ ಶ್ರಮಿಸಿದ ಮಹಾನ್ ಚೇತನರು ಎಂದು ಬಣ್ಣಿಸಿದರು.
ಕಾವ್ಯ, ಮಾನವೀಯ ಸಂವೇದನೆಯನ್ನು ಒಳಗೊಂಡಿರಬೇಕು. ಜನ ಬದುಕುವುದಕ್ಕಾಗಿ ಕವಿತೆ, ಸಾಹಿತ್ಯ ರಚನೆ ಯಾಗಬೇಕೆಂದು ಡಾ.ಅರ್ಚನಾ ಅಥಣಿ ಪ್ರತಿಪಾದಿಸಿದರು.
ಕವಿಗೋಷ್ಠಿಯ ಮುಖ್ಯ ಅತಿಥಿಗಳಾಗಿ ಕರುನಾಡು ಮಹಿಳಾ ಸೊಸೈಟಿಯ ಅಧ್ಯಕ್ಷೆ ಮೀನಾಕ್ಷಿ ತೆಲಸಂಗ ವಹಿಸಿ ಮಾತನಾಡಿದರು. ಆಶಯ ನುಡಿಗಳನ್ನು ಚಿನ್ಮಯ ಪ್ರಕಾಶನದ ಅಧ್ಯಕ್ಷೆ ಶೋಭಾ ದೇಶಿಂಗೆ ಹೇಳಿದರು. ಯುಗಾದಿಯ ಗೀತ ಗಾಯನವನ್ನು ಗೀತಾ ದಶರತ ನೆರವೇರಿಸಿದರು.
ಯುಗಾದಿ ಕವಿಗೋಷ್ಠಿಯಲ್ಲಿ ಕವಿಯತ್ರಿಯರಾದ ಭಾರತಿ ಅಲಿಬಾದಿ, ಗುರುದೇವಿ ಹರ್ತಿ, ಸರೋಜಾ ಕಲ್ಯಾಣಿ, ವಿಶಾಲಾಕ್ಷಿ ತೀರ್ಥ, ಶಕುಂತಲಾ ಅಂಬಿ, ಮೀನಾಕ್ಷಿ ಸಾವಳೆ, ದೀಪಾ ಚೊಳ್ಳಿ, ಯಶೋಧಾ ನಡುವಿನಮನಿ, ಕಾವ್ಯ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಶಶಿಕಲಾ ಹರ್ತಿ, ಗೀತಾ ತೋರಿ, ಸುಜಾತಾ ಪೂಜಾರಿ, ಭಾರತಿ ಪೂಜಾರಿ, ಸೇರಿದಂತೆ ಶಂಕರ ನಗರದ ಮಹಿಳಾ ಸಂಘದ ಸದಸ್ಯೆಯರು ಪಾಲ್ಗೊಂಡಿದ್ದರು.
ನಮ್ಮ ಸಂಸ್ಕೃತಿ ಪರಂಪರೆಯ ವೇಷಭೂಷಣ ಸ್ಪರ್ಧೆಯಲ್ಲಿ ವಿದ್ಯಾ ಹಿರೇಮಠ, ಪ್ರಥಮ, ರಂಜನಾ ಬುರ್ಲಿದ್ವಿತಿಯ, ಹಾಗೂ ಸವಿತಾ ಅವರು ತೃತೀಯ ಬಹುಮಾನ ಪಡೆದರು. ನಂತರ ಪರಸ್ಪರ ಬೇವು ಬೆಲ್ಲ ಹಂಚಿಕೊಳ್ಳಲಾಗುವುದು. ಜಯಶ್ರೀ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಲಿತಾ ಮೇಕನಮರಡಿ ಪ್ರಾರ್ಥಿಸಿದರು, ವಾಣಿಶ್ರೀ ದಾನಗೌಡ್ರ, ಕೀರ್ತಿ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು, ಶಿವಮಂಗಲಾ ಹಳ್ಳೋಳ್ಳಿ ವಂದಿಸಿದರು.