ನಿರೋಗ ಬದುಕಿಗೆ ಬೇಕು ಯೋಗ : ಗುರೂಜಿ
ಗುಳೇದಗುಡ್ಡ,ಮಾ.5 ರೋಗರಹಿತ ಹಾಗೂ ದೀರ್ಘಾಯುಷಿ ಜೀವನಕ್ಕಾಗಿ ಯೋಗವನ್ನು ಅವಲಂಬಿಸುವುದು ಅನಿವಾರ್ಯವಾಗಿದೆ ಎಂದು ಇಲ್ಲಿನ ಶ್ರೀಕೃಷ್ಣ ಯೋಗಾಶ್ರಮದ ಗುರೂಜಿ ಡಾ. ಬಸವರಾಜ ಹಡಗಲಿ ಹೇಳಿದರು.
ಅವರು ಶುಕ್ರವಾರ ಬೆಳಗಿನಜಾವ ಪಟ್ಟಣದ ಶ್ರೀಕೃಷ್ಣ ಯೋಗಾಶ್ರಮದ ಪಿರಾಮಿಡ್ ಧ್ಯಾನ ಮಂದಿರದಲ್ಲಿ ಮಾರ್ಚ್ 1 ರಿಂದ 15 ದಿನಗಳವರೆಗೆ ಹಮ್ಮಿಕೊಂಡ ಕಾಯಕಲ್ಪ ಯೋಗ ಸಾಧನಾ ಶಿಬಿರದಲ್ಲಿ ಮಾತನಾಡಿ, ಇಂದು ಶಿಬಿರದ ಐದನೇ ದಿನ. ಪಂಚವಟಿಗಳಲ್ಲಿ ಒಂದಾದ ಅಶ್ವಥ ಆಲದ ಮರದ ಕೆಳಗೆ ಬ್ರಾಹ್ಮೀ ಮುಹೂರ್ತದಲ್ಲಿ ಯೋಗ ಸಾಧನೆ ಮಾಡುವುದು ಪ್ರಸಕ್ತ ಸಮಯ. ಈ ವೇಳೆಯಲ್ಲಿ ಮಾಡುವುದರಿಂದ ಪ್ರಾಣಶಕ್ತಿ ನಮ್ಮ ವಾತಾವರಣದಲ್ಲಿ ಇರುತ್ತದೆ. ಆ ಸಮಯದಲ್ಲಿ ಮಾಡುವ ಯೋಗಾಸನಗಳು ದೈವತ್ವ ಹೊಂದಲು ಸಹಕಾರಿಯಾಗುತ್ತವೆ ಎಂದರು.
ಬೆಳಿಗ್ಗೆ 6 ಗಂಟೆಯಿಂದ 7-30 ಗಂಟೆಯವರೆಗೆ ಯೋಗ ಶಿಬಿರ ಜರುಗಿತು. ಹಕ್ಕಿಗಳ ಕಲರವದ ಮಧ್ಯ ಯೋಗಶಿಬಿರ ಸಾಧಕರಲ್ಲಿ ಮನೋಲ್ಹಾಸ ಮೂಡಿಸಿತು. ಸುಮಾರು 40 ಜನ ಯೋಗ ಕಲಿಕಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.