ಅಖಿಲ ಭಾರತ ಯೋಗ ಸ್ಪರ್ಧೆಯಲ್ಲಿ ಭಂಡಾರಿ ಕಾಲೇಜಿನ ವಿದ್ಯಾರ್ಥಿಗಳು ಭಾಗಿ

ಗುಳೇದಗುಡ್ಡ,ಡಿ.31:   ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಇಲ್ಲಿನ ಭಂಡಾರಿ ಮತ್ತು ರಾಠಿ ಮಹಾವಿದ್ಯಾಲಯದ ನಾಲ್ಕು ಜನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು, ಅಖಿಲ ಭಾರತ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರತಿನಿಧಿಸಿ ಕಾಲೇಜಿಗೆ ಕೀರ್ತಿಗೆ ಭಾಜನರಾಗಿದ್ದಾರೆ.  

ಸ್ಥಳೀಯ ಪಿಇ ಟ್ರಸ್ಟಿನ ಭಂಡಾರಿ ಮತ್ತು ರಾಠಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ  ಸಹನಾ ಬಸವರಾಜ ಮಾನುಟಗಿ, ಸುಪ್ರಿತಾ ಸಿದ್ದಪ್ಪಾ ಅರಕಾಲಚಿಟ್ಟಿ ವಿದ್ಯಾರ್ಥಿಗಳಾದ ಮಹಾಂತೇಶ ಬಸವರಾಜ ಸುರಪೂರ, ವಿರೇಶ ಮುತ್ತು ಬಳಿಗಾರ ಈ ನಾಲ್ಕೂ ಜನ ವಿದ್ಯಾರ್ಥಿಗಳು ಡಿ.25 ರಿಂದ 28 ರವರೆಗೆ ಓರಿಸ್ಸಾ ರಾಜ್ಯದ ಭುವನೇಶ್ವರದ ಕಳಿಂಗ ಕೈಗಾರಿಕಾ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಗಳ ಪುರುಷ ಮತ್ತು ಮಹಿಳಾ ಯೋಗ ಚಾಂಪಿಯನ್‌ಶಿಫ್‌ನಲ್ಲಿ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದಿಂದ ಪ್ರತಿನಿಧಿಸಿ, ದೇಶದ ಸುಮಾರು 145 ವಿವಿಗಳ ಸ್ಪರ್ಧಾಳುಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಶ್ವವಿದ್ಯಾಲಯಕ್ಕೆ ಮತ್ತು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.  

ಇದೇ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಚಿದಾನಂದ ನಂದಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ತಂಡದ ಕೋಚ್ ಹಾಗೂ ಮ್ಯಾನೇಜರ್ ಆಗಿ ಹೋಗಿದ್ದರು. ಪಿಇ ಟ್ರಸ್ಟಿನ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ, ನಿರ್ದೇಶಕ ಮಂಡಳಿ, ಪ್ರಾಚಾರ್ಯ ಡಾ.ಎನ್‌.ವೈ. ಭಡನ್ನವರ್ ಹಾಗೂ ಕಾಲೇಜಿನ ಸಿಬ್ಬಂದಿ ಅಭಿನಂದಿಸಿದ್ದಾರೆ.