ಧಾರವಾಡ - ಹುಬ್ಬಳ್ಳಿ

ಯೋಗ ಗುರು ಭವರಲಾಲ ಆರ್ಯರವರಿಗೆ ಸಿದ್ದಾರೂಢ ಮಠ ಹುಬ್ಬಳ್ಳಿಯಿಂದ ವಿಶೇಷ ಗೌರವ ಸನ್ಮಾನ

ಯೋಗ ಗುರು ಭವರಲಾಲ ಆರ್ಯರವರಿಗೆ ಸಿದ್ದಾರೂಢ ಮಠ ಹುಬ್ಬಳ್ಳಿಯಿಂದ ವಿಶೇಷ ಗೌರವ ಸನ್ಮಾನ

ಹುಬ್ಬಳ್ಳಿ 15: ಯೋಗದ ಕ್ಷೇತ್ರದಲ್ಲಿ ಸಲ್ಲಿಸಿದ ನಿಸ್ವಾರ್ಥ ಸೇವೆಗಾಗಿ ಯೋಗ ಗುರು ಭವರಲಾಲ್ ಆರ್ಯ ಅವರನ್ನು ಸಿದ್ಧಾರೂಢ ಮಠ ಹುಬ್ಬಳ್ಳಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ಮಠದ ಕೈಲಾಸಮಂಟಪದಲ್ಲಿ ಸಿದ್ಧಾರೂಡ ಸ್ವಾಮೀಜಿಯವರ ಭವ್ಯವಾದ ಪ್ರತಿಮೆ ಮತ್ತು ವಿಶೇಷ ಪೂಜಾ ಪ್ರಸಾದವನ್ನು ನೀಡಿ ಆರ್ಯ ಅವರನ್ನು ಸತ್ಕರಿಸಲಾಯಿತು.   

ಸಿದ್ಧಾರೂಢ ಮಠದ ಧರ್ಮದರ್ಶಿಗಳು ಹಾಗೂ ವಿಶ್ವ ವೇದಾಂತ್ ಪರಿಷತ್ತಿನ ಅಧ್ಯಕ್ಷರು  ಶಾಮಾನಂದ ಪೂಜೇರಿ ಅವರು ಭವರಲಾಲ ಆರ್ಯ ಅವರ ಯೋಗ ಸೇವೆ ಕುರಿತು ಈ ರೀತಿ ಮಾತನಾಡಿದರು, " ಯೋಗ ಗುರು ಭವರಲಾಲ ಆರ್ಯ ಅವರು ಕಳೆದ 35 ವರ್ಷಗಳಿಂದ ಸತತವಾಗಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಹಳ್ಳಿ ಮತ್ತು ನಗರದ ಪ್ರತಿಯೊಂದು ಕಡೆ ಸಂಚರಿಸಿ, ಲಕ್ಷಾಂತರ ಕಿಲೋಮೀಟರ್ ಗಳ ಪ್ರವಾಸ ಕೈಗೊಂಡು ಲಕ್ಷಾಂತರ ಜನರಿಗೆ ಪ್ರತ್ಯಕ್ಷವಾಗಿ ಉಚಿತವಾಗಿ ಯೋಗ ತರಬೇತಿ ನೀಡಿದ್ದಾರೆ. 10,000 ಕ್ಕಿಂತ ಹೆಚ್ಚು ಯೋಗ ಶಿಕ್ಷಕರನ್ನು ತರಬೇತಿಗೊಳಿಸಿ ಅವರಿಂದ ಇಂದು ಪ್ರತಿದಿನ ಸಾವಿರಾರು ಉಚಿತ ಯೋಗ ಕೇಂದ್ರಗಳು ರಾಜ್ಯದಾದ್ಯಂತ ನಿರಂತರವಾಗಿ ಯೋಗ ಸೇವೆ ಮಾಡುವಂತೆ ಪ್ರೇರೇಪಿಸಿದ್ದಾರೆ.  

ಶ್ರೀ ಸಿದ್ದಾರೂಢ ಮಠ ಹುಬ್ಬಳ್ಳಿಯಲ್ಲೂ, ಜೊತೆಗೆ ರಾಜ್ಯದ ನೂರಾರು ಮಠಗಳಲ್ಲಿ ಬೃಹತ್ ಯೋಗ ಶಿಬಿರಗಳನ್ನು ಆಯೋಜಿಸಿ ಯೋಗ ಮಾರ್ಗದರ್ಶನ ಮಾಡಿದ್ದಾರೆ. ಕೇವಲ ಕರ್ನಾಟಕದಲ್ಲಲ್ಲದೆ, ಭಾರತದಾದ್ಯಂತ ಮತ್ತು ವಿದೇಶಗಳಲ್ಲೂ ಯೋಗದ ಕಂಪನ್ನು ಪಸರಿಸಿದ್ದಾರೆ. ಪ್ರತಿನಿತ್ಯ ಆನ್ಲೈನ್ ಮೂಲಕವೂ ಲಕ್ಷಾಂತರ ಸಾಧಕರಿಗೆ ಉಚಿತವಾಗಿ ಯೋಗ ಕಲಿಸುತ್ತಿದ್ದಾರೆ.   

ಮೂಲತಃ ರಾಜಸ್ಥಾನಿಯಾಗಿದ್ದರು ಕನ್ನಡದ ಭಾಷೆ, ಸಂಸ್ಕೃತಿ, ನೆಲ, ಜಲ, ಕನ್ನಡಿಗರೊಂದಿಗೆ, ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಅಚ್ಚ ಸ್ವಚ್ಛ ಕನ್ನಡದಲ್ಲಿ ಯೋಗ ಮಾರ್ಗದರ್ಶನ ಮಾಡುವುದು ಇವರ ಕನ್ನಡದ ಮತ್ತು ಕನ್ನಡಿಗರ ಮೇಲಿರುವ ಪ್ರೀತಿ ಗೌರವವನ್ನು ತೋರಿಸುತ್ತದೆ" ಎಂದು ತಿಳಿಸಿದರು.  

ಸಿದ್ಧಾರೂಢ ಮಠದ ಚೇರ್ಮನ್ ಬಸವರಾಜ್ ಕಲ್ಯಾಣ್ ಶೆಟ್ಟರ್,  ಬಾಳು ಮಗಚಿಕೊಂಡಿ, ಹಿರಿಯ ಯೋಗ ಶಿಕ್ಷಕರಾದ ರಾಜಶೇಖರ ಕುದುರಿ, ವಿಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ