ಪಶ್ಚಿಮ ಕಾಲುವೆ ದುರಸ್ತಿ ಕಾಮಗಾರಿಗೆ ಗುದ್ದಲಿ ಪೂಜೆ
ಲೋಕದರ್ಶನ ವರದಿ
ಕಾಗವಾಡ 06: ಐನಾಪುರ ಏತ ನೀರಾವರಿ ಯೋಜನೆಯ ಕಾಲುವೆಗಳು ಬಹುದಿನಗಳಿಂದ ಸೋರಿಕೆಯಾಗುತ್ತಿದ್ದುದರಿಂದ ಪೂರ್ವ ಹಾಗೂ ಪಶ್ಚಿಮ ಕಾಲುವೆ ಭಾಗದ ರೈತರ ಜಮೀನುಗಳಲ್ಲಿ ನೀರು ನುಗ್ಗಿ ತೊಂದರೆಯಾಗಿತ್ತು. ಇದನ್ನು ಗಮನಿಸಿ ಶಾಸಕ ಶ್ರೀಮಂತ ಪಾಟೀಲರು ವಿಶೇಷ ಕಾಳಜಿ ವಹಿಸಿ ರಾಜ್ಯ ಸರ್ಕಾರದ ನೀರಾವರಿ ನಿಗಮದ ವತಿಯಿಂದ 8 ಕೋಟಿ ರೂಪಾಯಿ ಅನುದಾನ ಮಂಜೂರು ಗೊಳಿಸಿದ್ದಾರೆ. ಇಲ್ಲಿಯ ರೈತರ ಸಮಸ್ಯೆಗೆ ಸ್ಪಂದಿಸಿದ ಶಾಸಕರಿಗೆ ಈ ಭಾಗದ ರೈತರು ಧನ್ಯವಾದ ಸಲ್ಲಿಸುತ್ತಿದ್ದಾರೆ ಎಂದು ಐನಾಪುರ್ ಕೆಆರ್ಈಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದಾದಾಗೌಡ ಪಾಟೀಲ ಹೇಳಿದರು.
ಗುರುವಾರ ಸಂಜೆ ಐನಾಪುರ್ -ಮೂಳೆ ಮಧ್ಯದ ಪಶ್ಚಿಮ ಕಾಲುವೆ ದುರಸ್ತಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ಯೋಜನೆ ಪ್ರಾರಂಭಿಸಿ ಸುಮಾರು 12ವರ್ಷ ಗತಿಸಿದೆ ಇದರ ಮಧ್ಯದಲ್ಲಿ ಕಾಲುವೆಗಳ ಸೋರಿಕೆ ಯಾಗುತ್ತಿದೆ. ಇದನ್ನು ಶಾಸಕ ಶ್ರೀಮಂತ ಪಾಟೀಲರು ಗಂಭೀರವಾಗಿ ತೆಗೆದುಕೊಂಡು ರಾಜ್ಯ ಸರ್ಕಾರದ ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು 8 ಕೋಟಿ ರೂಪಾಯಿ ಅನುದಾನ ಮಂಜೂರು ಗೊಳಿಸಿದ್ದಾರೆ. ಈ ಕಾಮಗಾರಿಗೆ ಚಾಲನೆ ನೀಡಿದ್ದು ಬರುವ ಆರು ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ದಾದಾಗೌಡ ಪಾಟೀಲ್ ಹೇಳಿದರು.
ಐನಾಪುರ ನೀರಾವರಿ ಯೋಜನೆಯ ಹಿರಿಯ ಅಭಿಯಂತರರಾದ ಕೆ .ರವಿ ಮಾತನಾಡಿ ಇಲ್ಲಿಯ ರೈತರ ಸಮಸ್ಯೆಗಳು ಬಹಳಷ್ಟಿದ್ದವು. ಈ ಬಗ್ಗೆ ಕೆಲ ರೈತರು ಪ್ರತಿಭಟನೆ ಕೈಗೊಂಡು ತಮ್ಮ ಅಳಲು ತೋಡಿಕೊಂಡಿದ್ದರು. ಮಾಜಿ ಸಚಿವರು ಹಾಗೂ ಶಾಸಕ ಶ್ರೀಮಂತ ಪಾಟೀಲರು ವಿಶೇಷ ಪ್ರಯತ್ನಿಸಿ ಹಿರಿಯ ಅಧಿಕಾರಿಗಳ ಅವರೊಂದಿಗೆ ಸಂಪರ್ಕಿಸಿ 8 ಕೋಟಿ ರೂಪಾಯಿ ಅನುದಾನ ಮಂಜೂರು ಗೊಳಿಸಿದ್ದಾರೆ. ವಿ. ಎನ. ಶೆಟ್ಟಿ ಗುತ್ತಿಗೆದಾರರು ಕಾಲುವೆಯ ಕಾಮಗಾರಿ ಕೈಗೊಂಡಿದ್ದಾರೆ ಬರುವ ಕೆಲದಿನಗಳಲ್ಲಿ ಯೋಜನೆ ಕಾಮಗಾರಿ ಪೂರ್ಣಗೊಂಡು ರೈತರ ಸಮಸ್ಯೆ ಬಗೆಹರಿಯಲಿದೆ ಎಂದರು.
ಪೂಜಾ ಕಾರ್ಯಕ್ರಮದಲ್ಲಿ ಇಲಾಖೆ ಅಭಿಯಂತರರಾದ ಪ್ರಶಾಂತ್ ಪೋದಾರ್, ಸಾಗರ್ ಪವಾರ್, ರೈತ ಮುಖಂಡರಾದ ರಾಜೇಂದ್ರ ಪೋತದಾರ ದಾದಾ ಪಾಟೀಲ್, ಸುನಿಲ್ ಪಾಟೀಲ್, ರತನ ಪಾಟೀಲ್, ಸಿದ್ದು ಜಾದವ್, ಪ್ರವೀಣ ಕೋತ್, ಶಾಸಕರ ಆಪ್ತ ಸಹಾಯಕ ರಾಜು ಮಾನೆ, ರವೀಂದ್ರ ಪೋತದಾರ, ಅಜಿತ ಜಾದವ್ ಸೇರಿದಂತೆ ಅನೇಕರು ಇದ್ದರು.