ಇಂಡಿ

ಕೃಷಿ ವಿಜ್ಞಾನ ಕೇಂದ್ರಲ್ಲಿ ವಿಶ್ವ ಜಲ ದಿನಾಚರಣೆ

ಕೃಷಿ ವಿಜ್ಞಾನ ಕೇಂದ್ರಲ್ಲಿ ವಿಶ್ವ ಜಲ ದಿನಾಚರಣೆ
ಇಂಡಿ: ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ರೈತರನ್ನು ಉದೇಶಿಸಿ ಡಾ. ಆರ್‌. ಬಿ. ನೆಗಳೂರ ಮಾತನಾಡುತ್ತಿರುವುದು..

ಇಂಡಿ: ಮಾನವ ಹಾಗೂ ಪ್ರಾಣಿ-ಪಕ್ಷಿ ಸಂಕುಲ ಆಹಾರಲ್ಲದೆ ಹಲವಾರು ದಿನಗಳು ಬದುಕಬಹುದು. ಆದರೆ, ನೀರಿಲ್ಲದೆ ಒಂದು ದಿನ ಬದುಕುವುದೂ ಸಹ ಅತೀ ಕಷ್ಟದ ಮಾತು ಎಂದು ರೈತರಿಗೆ ಡಾ. ಆರ್‌. ಬಿ. ನೆಗಳೂರ ತಿಳಿಸಿದರು. 

ಮಂಗಳವಾರ ಪಟ್ಟಣದ ರೈಲು ನಿಲ್ದಾಣ ರಸ್ತೆಯ ಕೃಷಿ ವಿಜ್ಞಾನ ಕೇಂದ್ರಲ್ಲಿ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದರು. 

ರೈತರು ತಮ್ಮ ಜಮೀನಿನಲ್ಲಿ ಸಣ್ಣ ಸಣ್ಣ ಮಡಿಗಳನ್ನಾಗಿ ಮಾಡಿ, ಬದುಗಳನ್ನು ಹಾಕುವ ಮೂಲಕ ಮಳೆ ನೀರು ಜಮೀನಿನಲ್ಲೆ ಇಂಗುವಂತೆ ಮಾಡುವುದು. ಸಾವಯವ ಗೊಬ್ಬರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ, ಭೂಮಿಯ ಫಲವತ್ತತೆಯನ್ನು ಮತ್ತು ಭೌತಿಕ ಗುಣಧರ್ಮಗಳನ್ನು ಸುಧಾರಿಸಬೇಕು ಎಂದರು. 

ಡಾ. ಸವಿತಾ ಬಿ. ಮಾತನಾಡಿ, ಸವಳು ಅಥವಾ ಕ್ಷಾರ ನೀರಿನ ಬಳಕೆ ಮಾಡುವುದಾದರೆ, ಸೂಕ್ತ ಬಸಿಗಾಲುವೆಗಳನ್ನು ಹಾಕಬೇಕು ಅಂದರೆ, ಜಮೀನನ್ನು ಸಮತೋಲನ ಮಾಡಿ. ಸವಳನ್ನು ಬಸಿಯುವಂತೆ ಮಾಡುವುದಲ್ಲದೇ ಮಣ್ಣಿನಲ್ಲಿ ಅವುಗಳ ಸಂಗ್ರಹವನ್ನು ಕಡಿಮೆ ಮಾಡಬೇಕು. ನೀರು ಚೆನ್ನಾಗಿ ಬಸಿಯುವ ಮರಳು ಮಿಶ್ರಿತ ಮಣ್ಣಿನಲ್ಲಿ, ಒಂದು ವೇಳೆ ಕೊಳವೆ ಬಾವಿ ನೀರಿನಲ್ಲಿ ಅಧಿಕ ಸವಳು ಅಥವಾ ಕ್ಷಾರತೆ ಇದ್ದಲ್ಲಿ ಉತ್ತಮ ಗುಣಮಟ್ಟದ ನೀರಿನ ಲಭ್ಯತೆಯೂ ಇದ್ದಲ್ಲಿ ಬೆಳೆಯ ಸಹಿಷ್ಣುತೆ ಮಿತಿ ಮೀರದಂತೆ ಎರಡೂ ನೀರನ್ನು ಬೆರೆಸಿ ಬೆಳೆಗಳಿಗೆ ಉಪಯೋಗಿಸಬಹುದು. ಆಗ ಕೊಳವೆ ಬಾವಿ ನೀರಿನ ಸವಳು ಅಥವಾ ಕ್ಷಾರತೆ ಕಡಿಮೆಯಾಗುತ್ತದೆ. ಸರಿಯಗಿ ನೀರು ಬಳಕೆಯಿಂದ ಆಗಬಹುದಾದ ಮಣ್ಣಿನ ಗುಣಧರ್ಮಗಳ ಹಾನಿಯಾಗುವಿಕೆಯನ್ನು ತಪ್ಪಿಸಬಹುದು ಎಂದರು. 

ಈ ಸಂದರ್ಭದಲ್ಲಿ ಡಾಽ ಸಂತೋಷ ಶಿಂದೆ, ಶಿವಶರಣ ಎಸ್ . ನಾವಿ ಸೇರಿದಂತೆ ಸುಮಾರು 25 ಕ್ಕಿಂತ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ಸುದ್ದಿ ಓದಿ