ವಿಶ್ವಬೆನ್ನುಹುರಿ, ಅಪಘಾತ ಅಂಗವಿಕಲ ದಿನಾಚರಣೆ ಕಾರ್ಯಕ್ರಮ
ರಾಣೆಬೆನ್ನೂರ,5: ನಗರದ ಓಂ ಆಸ್ಪತ್ರೆಯಲ್ಲಿ ಸೆ.5ರಂದು ಮದ್ಯಾಹ್ನ 12 ಘಂಟೆಗೆ ವಿಶ್ವಬೆನ್ನುಹುರಿ, ಅಪಘಾತ ಅಂಗವಿಕಲ ದಿನಾಚರಣೆ ಕಾರ್ಯಕ್ರಮವು ನಿಶಾಡ್9,ಓಂ ಆಸ್ಪತ್ರೆ, ಎಪಿಡಿ ಆಶ್ರಯದಲ್ಲಿ ಜರುಗಲಿದೆ ಎಂದು ಓಂ ಆಸ್ಪತ್ರೆ ಮುಖ್ಯಸ್ಥ ಡಾ. ಮನೋಜ ಸಾವಕಾರ ಹೇಳಿದರು.
ಅವರು,ಬುಧವಾರ ಆಯೋಜಿಸಲಾಗಿದ್ದ ಮಾಧ್ಯಮ ಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಎಲ್ಐಸಿಯ ಸೋಮಶೇಖರ ಮುಂಡರಗಿ, ಶ್ರೀಪಾದ ಸಾವಕಾರ ಅತಿಥಿಗಳಾಗಿ ಆಗಮಿಸುವರು. ಇದೇ ಸಂದರ್ಭದಲ್ಲಿ 40 ರೋಗಿಗಳಿಗೆ ವ್ಹಿಲ್ ಚೇರ ಹಾಗೂ ಓಷಧಿ ಕಿಟ್ ವಿತರಣೆ ಮಾಡಲಾಗುವುದು. ಇದಕ್ಕೂ ಮುನ್ನ ಅಂದು ಮುಂಜಾನೆ 9-30ಕ್ಕೆ ಓಂ ಆಸ್ಪತ್ರೆಯಿಂದ ಜನ ಜಾಗೃತಿ ಜಾಥಾ ನಡೆಯಲಿದ್ದು, ಅಂಚೆ ವೃತ್ತ, ಎಂಜಿ ರಸ್ತೆ, ದುರ್ಗಾ ವೃತ್ತ, ಕುರುಬಗೇರಿ ಕ್ರಾಸ್, ಬಸ್ ನಿಲ್ದಾಣ, ಪಿ.ಬಿ. ರಸ್ತೆ ಮೂಲಕ ಆಸ್ಪತ್ರೆಗೆ ಜಾಥಾವು ಆಗಮಿಸಲಿದೆ ಎಂದರು.
ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ನ 300ಕ್ಕೂ ಅಧಿಕ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸುವರು.ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.2.21 ರಷ್ಟು ಅಂಗವಿಕಲರಿದ್ದು, ಭೌಗೋಳಿಕವಾಗಿ ಹೆಚ್ಚು ಹಳ್ಳಿಗಳಿಂದ ಕೂಡಿದ್ದು, ನಮ್ಮ ನಾಡಿನಲ್ಲಿ ಶೇ. 65ಕ್ಕೂ ಹೆಚ್ಚು ಜನರು ಗ್ರಾಮೀಣ ಪ್ರದೇಶಗಳಲ್ಲಿಯೇ ಇದ್ದಾರೆ. 2011 ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 3.5 ಲಕ್ಷಕ್ಕಿಂತ ಹೆಚ್ಚು ಅಂಗವಿಕಲರಿದ್ದು, ಅದರಲ್ಲಿ ಸುಮಾರು 15,000 ಕ್ಕಿಂತ ಹೆಚ್ಚಿನ ಜನರು ಬೆನ್ನುಹುರಿ ಅಪಘಾತಕ್ಕೆ ಒಳಗಾಗಿರುವ ವ್ಯಕ್ತಿಗಳಿದ್ದಾರೆ ಎಂದರು.
ಬೆನ್ನುಹುರಿ ಅಪಘಾತವು ಎಲ್ಲಾ ಅಂಗವಿಕಲತೆಗಿಂತ ವಿಭಿನ್ನ ಮತ್ತು ಕ್ಲಿಷ್ಟಕರವಾದ ಅಂಗವಿಕಲತೆ ಆಗಿದೆ. ಸರಕಾರವು ಇಂತಹ ರೋಗಿಗಳಿಗೆ ಮುಂದಿನ ಜೀವನಕ್ಕಾಗಿ ಹೆಚ್ಚಿನ ಆದ್ಯತೆ ಹಾಗೂ ಪರಿಹಾರ, ಅನುದಾನ ನೀಡಬೇಕು ಎಂದು ಮನೋಜ ವಿನಂತಿಸಿದರು.
ನಿಂಗಪ್ಪ ದೊಡ್ಡಮನಿ, ಶಿವುಕುಮಾರ ದುಗ್ಗತ್ತಿಮಠ ಮತ್ತು ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು