ವಿಶ್ವ ರೇಡಿಯೋ ದಿನಾಚರಣೆ
ಇಂಡಿ: ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆಯಾದ ಸಂವಹನ ಮಾಧ್ಯಮಗಳಲ್ಲಿ ರೇಡಿಯೊ ಸಹ ಒಂದಾಗಿದ್ದು, ಜನರಿಗೆ ಜ್ಞಾನ, ಶಿಕ್ಷಣ ಹಾಗೂ ಮನರಂಜನೆ ನೀಡಲು ವ್ಯಾಪಕವಾಗಿ ಬಳಸಲ್ಪಟ್ಟ ಮಾಧ್ಯಮ ರೇಡಿಯೊ ಆಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಜರುಗಿದ ವಿಶ್ವ ರೇಡಿಯೋ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜನಪ್ರಿಯ ಸಂವಹನ ಮಾಧ್ಯಮ ಎಂದತಕ್ಷಣ ನಮಗೆ ಸಾಮಾಜಿಕ ಮಾಧ್ಯಮ, ಅಂದರೆ ಸೋಶಿಯಲ್ ಮೀಡಿಯಾ ನೆನಪಿಗೆ ಬರುತ್ತೆ. ಅದರ ಜನಪ್ರಿಯತೆ ಅಷ್ಟು ದೊಡ್ಡ ಪ್ರಮಾಣದಲ್ಲಿದೆ. ಆದರೆ, ವಿಶ್ವಸಂಸ್ಥೆ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಜಾಗತಿಕ ಮಟ್ಟದಲ್ಲಿ ಅತ್ಯಂತ ವ್ಯಾಪಕವಾಗಿ ಬಳಕೆಯಾಗುವ ಮಾಧ್ಯಮವೆಂದರೆ ಅದು ರೇಡಿಯೋ.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರೇಡಿಯೊ ಪ್ರಬಲ ಸಂವಹನ ಸಾಧನವಾಗಿದೆ. ನೈಸರ್ಗಿಕ ವಿಕೋಪದಂತಹ ಸಮಯದಲ್ಲಿ ತುರ್ತು ಸಂವಹನಕ್ಕಾಗಿ ರೇಡಿಯೊ ಪಾತ್ರ ಮುಖ್ಯವಾಗಿದ್ದು, ಭಾರತದ ಗ್ರಾಮೀಣ ಜನತೆಯೊಂದಿಗೆ ಭಾವನಾತ್ಮಕ ಅನುಬಂಧವನ್ನು ಹೊಂದಿದೆ ಎಂದು ಹೇಳಿದರು.
ಶಿಕ್ಷಕ ಎಸ್.ಎಸ್. ಅರಬ ಮಾತನಾಡಿ, ರೇಡಿಯೋ ತರಂಗಗಳು ಒಂದು ಬಗೆಯ ವಿದ್ಯುತ್ಕಾಂತ ತರಂಗಗಳು. ಅಂದರೆ, ಇಲೆಕ್ಟ್ರೋಮ್ಯಾಗ್ನೆಟಿಕ್ ವೇವ್ಸ್. ಈ ತರಂಗಗಳನ್ನು ಬಳಸಿ ನಡೆಸುವ ಸಂವಹನವೇ ರೇಡಿಯೋ ಕಮ್ಯೂನಿಕೇಶನ್. ನಾವು ಕೇಳುವ ರೇಡಿಯೋ ಪ್ರಸಾರ ಈ ಬಗೆಯ ಸಂವಹನಕ್ಕೆ ಒಂದು ಉದಾಹರಣೆ. ಕಾರ್ಯಕ್ರಮದ ಧ್ವನಿ ರೇಡಿಯೋ ತರಂಗಗಳ ರೂಪದಲ್ಲಿ ಪ್ರಸಾರ ಕೇಂದ್ರದಲ್ಲಿರುವ ಟ್ರಾನ್ಸ್ಮಿಟರ್ನಿಂದ ಹೊರಡುತ್ತದೆ, ಮನೆಯಲ್ಲೋ ಕಾರಿನಲ್ಲೋ ಮೊಬೈಲಿನಲ್ಲೋ ನಮ್ಮ ಬಳಿ ಇರುವ ರೇಡಿಯೋ ಆ ತರಂಗಗಳನ್ನು ಗುರುತಿಸಿ ಕಾರ್ಯಕ್ರಮದ ಧ್ವನಿಯನ್ನು ನಮಗೆ ಕೇಳಿಸುತ್ತದೆ. ಇಲ್ಲಿ ಬಳಕೆಯಾಗುವ ತರಂಗಗಳ ಹಾಗೂ ತಂತ್ರಜ್ಞಾನದ ಹೆಸರೇ ಈ ವ್ಯವಸ್ಥೆಯ ಹಾಗೂ ಅದರಲ್ಲಿ ಬಳಕೆಯಾಗುವ ಸಾಧನದ ಹೆಸರೂ ಆಗಿಬಿಟ್ಟಿದೆ.
ರೇಡಿಯೋ ತರಂಗ ಅಂತ ಇದ್ದರೂ ನಾವು ದಿನನಿತ್ಯ ಉಪಯೋಗಿಸುವ ಟೀವಿ, ಮೊಬೈಲ್ ಫೋನ್, ಬ್ಲೂಟೂತ್ ಇಯರ್ಫೋನ್, ವೈಫೈ ಹಾಟ್ಸ್ಪಾಟ್ ಮುಂತಾದ ಅನೇಕ ಸಾಧನಗಳು ಕೂಡ ರೇಡಿಯೋ ತರಂಗಗಳನ್ನೇ ಬಳಸುತ್ತವೆ ಎನ್ನುವುದು ವಿಶೇಷ. ಈ ಎಲ್ಲ ಉಪಯೋಗಗಳಲ್ಲೂ ಬೇರೆಬೇರೆ ತರಂಗಾಂತರ, ಅಂದರೆ ಫ್ರೀಕ್ವೆನ್ಸಿಯ ರೇಡಿಯೋ ತರಂಗಗಳು ಬಳಕೆಯಾಗುತ್ತವೆ ಅಷ್ಟೇ.
ರೇಡಿಯೋ ಕಂಡುಹಿಡಿದದ್ದು ಮಾರ್ಕೋನಿ ಎನ್ನುವ ವಿಷಯವನ್ನು ನಾವು ಚಿಕ್ಕಂದಿನಿಂದ ಓದಿಕೊಂಡು, ಕೇಳಿಕೊಂಡು ಬಂದಿದ್ದೇವೆ. ಆದರೆ ಈ ವ್ಯವಸ್ಥೆ ರೂಪುಗೊಳ್ಳುವುದರ ಹಿಂದೆ ಅನೇಕ ವಿಜ್ಞಾನಿಗಳು ಕೆಲಸಮಾಡಿದ್ದಾರೆ. ರೇಡಿಯೋ ಪ್ರಸಾರದಲ್ಲಿ ನಿಸ್ತಂತು ಸಂವಹನದ ಪರಿಕಲ್ಪನೆ, ಅಂದರೆ ವೈರ್ಲೆಸ್ ಕಮ್ಯೂನಿಕೇಶನ್ ಬಳಕೆಯಾಗುತ್ತದಲ್ಲ, ಅದನ್ನು ಮೊತ್ತಮೊದಲ ಬಾರಿಗೆ ಸಾಧಿಸಿ ತೋರಿಸಿದ್ದು ನಮ್ಮ ದೇಶದ ವಿಜ್ಞಾನಿ ಜಗದೀಶಚಂದ್ರ ಬೋಸ್ ಅವರು. ಹಾಗೆಯೇ ಅಮೆರಿಕಾದ ನಿಕೋಲಾ ಟೆಸ್ಲಾ ಹಾಗೂ ರಷ್ಯಾದ ಅಲೆಗ್ಸಾಂಡರ್ ಪೋಪೋವ್ ಕೂಡ ರೇಡಿಯೋ ತರಂಗಗಳನ್ನು ಬಳಸಿ ಪ್ರಯೋಗಗಳನ್ನು ಮಾಡಿದ್ದರು. ಇಂತಹ ಹಲವಾರು ಸಂಶೋಧನೆಗಳ ಆಧಾರದ ಮೇಲೆ ಇನ್ನಷ್ಟು ಸುಧಾರಿತ ವ್ಯವಸ್ಥೆಯನ್ನು ರೂಪಿಸಿದ್ದು ಇಟಲಿ ದೇಶದ ಮಾರ್ಕೋನಿ ಎಂದರು.
ಶಾಲಾ ಶಿಕ್ಷಕಿ ಎಸ್.ಎಚ್. ಮೈದರಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಫೆಬ್ರುವರಿ 13ರಂದು ವಿಶ್ವ ರೇಡಿಯೋ ದಿನ ಎಂದು ಘೋಷಿಸಿರುವುದು ಕೂಡ ವಿಶ್ವಸಂಸ್ಥೆಯೇ. 2012ರಿಂದ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯ ರೇಡಿಯೋ ವಾಹಿನಿ-ಯುಎನ್ ರೇಡಿಯೋ 1946ರಲ್ಲಿ ಇದೇ ದಿನ ಪ್ರಾರಂಭವಾಗಿತ್ತು. ಆ ದಿನದ ನೆನಪಿಗೋಸ್ಕರ ಫೆಬ್ರುವರಿ 13ನ್ನು ವಿಶ್ವ ರೇಡಿಯೋ ದಿನ ಎಂದು ಆಚರಿಸಲಾಗುತ್ತಿದೆ ಎಂದರು. ಶಿಕ್ಷಕರಾದ ಎನ್.ಬಿ. ಚೌಧರಿ, ಎಸ್.ಪಿ. ಪೂಜಾರಿ, ಡಿಎಡ್ ವಿದ್ಯಾರ್ಥಿನಿ ತೈಸಿನ್ ನದಾಫ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.