ಸಂಕೇಶ್ವರದಲ್ಲಿ ವಿಶ್ವ ತಂಬಾಕು ನಿಷೇಧ ದಿನ ಆಚರಣೆ
ಲೋಕದರ್ಶನ ವರದಿ
ಸಂಕೇಶ್ವರ 03: ತಂಬಾಕು ಸೇವನೆಯಿಂದ ಬಾಯಿ ಕ್ಯಾನ್ಸರ ಮತ್ತು ಶ್ವಾಸಕೋಶದ ರೋಗಗಳು ಬರುವದರಿಂದ ಮನುಷ್ಯನ ಆರೋಗ್ಯ ಹಾಳಾಗಿ ಹೋಗುತಿದ್ದು ರೈತರು ತಂಬಾಕು ಬೆಳೆಯುವ ಬದಲು ಪರ್ಯಾಯ ಬೆಳೆಯನ್ನು ಬೆಳೆಯಲೂ ಆಲೋಚನೆ ಮಾಡಬೇಕೆಂದು ಸಂಕೇಶ್ವರದ ಪ್ರಧಾನ ಸಿವಿಲ್ ನ್ಯಾಯಾಧೀಶೆ ನಾಗಜ್ಯೋತಿ ಎಂ.ಎಲ್ ಕರೆ ನೀಡಿದರು.
ಅವರು ಸಂಕೇಶ್ವರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ,ಶಿಶು ಅಭಿವೃದ್ದಿ ಇಲಾಖೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ವಿಶ್ವ ತಂಬಾಕು ನಿಷೇಧ ದಿನ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಬಿ.ಎಸ್.ಪೋಳ ಅವರು ಮಾತನಾಡಿ, ತಂಬಾಕು ಸೇವನೆಯ ಅನಾಹುತಗಳ ಕುರಿತು ಜನರು ಆತ್ಮಾವಲೋಕನ ಮಾಡಿಕೊಂಡು ಅದರ ಸೇವನೆಯನ್ನು ತ್ಯಜಿಸಬೇಕೆಂದರು.
ವಿಶೇಷ ಉಪನ್ಯಾಸ ನೀಡಿದ ಸಂಕೇಶ್ವರ ಸಮುದಾಯ ಆರೋಗ್ಯ ಕೇಂದ್ರ ಡಾ.ಪೂರ್ಣಿಮಾ ತಲ್ಲೂರ ಅವರು, ಬೀಡಿ, ಸಿಗರೇಟು ಹಾಗೂ ಗುಟ್ಕಾ ರೂಪದಲ್ಲಿ ತಂಬಾಕನ್ನು ಮೌಲ್ಯವರ್ದನೆ ಮಾಡಿ ಮಾರಲಾಗುತ್ತಿದೆ. ಇದಕ್ಕೆ ಚಿಕ್ಕ ಹುಡುಗರು, ಯುವಕರು ಹಾಗೂ ಮಧ್ಯ ವಯಸ್ಕರು ಬಲಿಯಾಗುತಿದ್ದಾರೆ. ಬಾಯಿ, ಶ್ವಾಸಕೋಶ, ಲಿವರ್ಗಳಿಗೆ ಈ ತಂಬಾಕು ವಿಷವನ್ನಿಯುತ್ತಿದೆ. ರೈತರು ತಂಬಾಕು ಬದಲಾಗಿ ಆಹಾರ ಧಾನ್ಯಗಳನ್ನು ಬೆಳೆದರೆ ಮಾರುಕಟ್ಟೆಗೆ ತಂಬಾಕು ಬರುವುದಿಲ್ಲ. ಇದರಿಂದ ತಂಬಾಕು ಸೇವನೆಯು ನಿಂತು ಹೋಗುತ್ತದೆ ಎಂದರು.
ನ್ಯಾಯವಾದಿ ಪಿ.ಕೆ.ಕರಜಗಿ ಅವರು ಮಾತನಾಡಿ, ಶಾಲಾ-ಕಾಲೇಜು, ದೇವಸ್ಥಾನ, ಆಸ್ಪತ್ರೆಗಳಿಂದ 100 ಮೀಟರ ಒಳಗಡೆ ತಂಬಾಕು ವಸ್ತುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ತಂಬಾಕಿನ ವಸ್ತುಗಳನ್ನು ಮಾರಾಟ ಮಾಡಿದರೆ ದಂಡ ಮತ್ತು ಶಿಕ್ಷೆ ಇರುತ್ತದೆ ಎಂದರು.
ದಂತ ವೈದ್ಯೆ ಶಾರದಾ ಕೆ.ವೈ.ಮಾತನಾಡಿ, ತಂಬಾಕಿನಲ್ಲಿ ವಿಷಕಾರಿ ರಾಸಾಯನಗಳಿದ್ದು ನಾಲಿಗೆ, ಹಲ್ಲು, ಲಿವರಗಳ ಮೇಲೆ ಭಯಂಕರ ದುಷ್ಪರಿಣಾಮವಾಗುತ್ತದೆ ಎಂದರು.
ಡಾ.ಎಸ್.ಬಿ.ಓಂಕಾರ ಅವರು ಮಾತನಾಡಿ ದೇಶದಲ್ಲಿ ಪ್ರತಿ ವರ್ಷ ತಂಬಾಕು ಸೇವನೆಯಿಂದ 3.50 ಲಕ್ಷ ಜನರು ಸಾವಿಗಿಡಾಗುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯಸ್ಥ ಡಾ.ದತ್ತಾತ್ರೆಯ ದೊಡಮನಿ ಅವರು ಮಾತನಾಡಿ ತಂಬಾಕು ಸೇವನೆಯಿಂದ ಕಾಲಿನಿಂದ ತಲೆಯವರೆಗೂ ರೋಗಗಳು ಬಂದು ಜೀವವನ್ನೆ ತೆಗೆದುಕೊಳ್ಳುತಿದ್ದು ಜನರು ಇದರ ಸೇವನೆಯ ಕುರಿತು ಎಚ್ಚರಿಕೆ ವಹಿಸಬೇಕು ಎಂದರು.
ಸಮಾರಂಭದಲ್ಲಿ ತಾಲೂಕಾ ಶಿಶು ಅಭಿವೃದ್ದಿ ಅಧಿಕಾರಿ ಹೊಳೆಪ್ಪಾ ಎಚ್, ಸರ್ಕಾರಿ ಅಭಿಯೋಜಕ ಎ.ಎ.ಕಾಮತ, ಸಂತೋಷ ಹಿರೇಮಠ, ವಕೀಲರಾದ ಎಸ್.ಬಿ.ಮಗದುಂ, ಎಸ್.ಬಿ.ಮಾನೆ, ವಿಕ್ರಂ ಕರನಿಂಗ, ಆರ್.ಎಸ್.ಚೌಗಲಾ ಮುಂತಾದವರು ಉಪಸ್ಥಿತರಿದ್ದರು. ದುಂಡಪ್ಪಾ ಬಿರಗೌಡರ ಸ್ವಾಗತಿಸಿದರು. ಭಾರತಿ ವಂದಿಸಿದರು