ಒಗ್ಗಟ್ಟಾಗಿ ಶ್ರಮಿಸಿದಲ್ಲಿ ಶಿಕ್ಷಕ, ಪದವಿಧರ ಕ್ಷೇತ್ರಗಳಲ್ಲಿ ಗೆಲುವು ಸಾಧ್ಯ
ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅಭಿಮತ: ವಿಧಾನ ಪರಿಷತ್ ಚುನಾವಣೆಯ ಮತದಾರರ, ಕಾರ್ಯಕರ್ತರ ಸಭೆ
ಅಥಣಿ 27: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಮಂತ್ರಿಗಳು, ಪಕ್ಷದ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಿದಲ್ಲಿ ಮಾತ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಶಿಕ್ಷಕ ಹಾಗೂ ಪದವಿಧರ ಕ್ಷೇತ್ರಗಳ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಾಧ್ಯ ಎಂದು ಮಾಜಿ ಉಪ ಮುಖ್ಮಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.
ಅವರು ಸ್ಥಳೀಯ ಡಾ.ಆರ್.ಎಚ್.ಕುಲಕರ್ಣಿ ಸಭಾ ಭವನದಲ್ಲಿ ವಿಧಾನ ಪರಿಷತ್ ಚುನಾವಣೆ ನಿಮಿತ್ಯ ಆಯೋಜಿಸಿದ್ದ ಮತದಾರರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು. ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಇವರನ್ನು ಸೋಲಿಸಿದ್ದು ಯಾರು ಎಂದು ಖಾರವಾಗಿ ಪ್ರಶ್ನಿಸಿದರು. ನಮ್ಮ ನಮ್ಮಲ್ಲಿ ಕೆಲ ಸಮಸ್ಯೆಗಳು ಇದ್ದಿರಬಹುದು ಆದರೆ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಸೋಲಿಸುವ ಮಟ್ಟಿಗೆ ಹೋಗಬಾರದು ಇದರಿಂದ ಪಕ್ಷಕ್ಕೆ ಮುಜುಗರ ತಂದಿದೆ ಎಂದರು.
ಈ ಚುನಾವಣೆಯಲ್ಲಿ ನಾವೆಲ್ಲ ಒಂದಾಗಿ ಸಂಘಟಿತರಾಗಿ ಈಗಿನಿಂದಲೇ ಕಾರ್ಯ ಪ್ರಾರಂಭಿಸಬೇಕಿದೆ. ಶಿಕ್ಷಕ ಹಾಗೂ ಪದವಿಧರ ಮತದಾರರು ಇರುವ ಮನೆಗಳನ್ನು ಗುರುತಿಸಿ ನಮ್ಮ ಕಾರ್ಯಕರ್ತರು, ಮುಖಂಡರು, ಚುನಾಯಿತ ಪ್ರತಿನಿಧಿಗಳು ಭೇಟಿ ಮಾಡಿ ಮತದಾರರನ್ನು ಮನ ಒಲಿಸುವ ಕಾರ್ಯ ಮಾಡಬೇಕಿದೆ ಆಗ ಮಾತ್ರ ನಮ್ಮ ಪಕ್ಷದ ಅಭ್ಯರ್ಥಿಗಳ ನಿಶ್ಚಿತವಾಗಿಯೂ ಅಭೂತಪೂರ್ವವಾಗಿ ಗೆಲುವು ಸಾಧ್ಯ ಎಂದ ಅವರು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಅರುಣ ಶಹಾಪೂರ ಪಕ್ಷದ ಕಾರ್ಯಕರ್ತರು ಅಷ್ಟೆ ಅಲ್ಲ ಸಿಂದಗಿಯಲ್ಲಿ ಒಂದು ಚಿಕ್ಕ ಹಳೆಯ ಮನೆಯಲ್ಲಿಯೇ ವಾಸ ಮಾಡುತ್ತಿರುವ ಇವರು ಶಿಕ್ಷಕರಿಗಾಗಿ ಶ್ರಮಿಸುವ ಮನಸ್ಸಿದೆ ಹೀಗಾಗಿಯೇ ಇಂತಹ ವ್ಯಕ್ತಿಯನ್ನು ನಾವು ಆಯ್ಕೆ ಮಾಡೋಣ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಮಾತನಾಡಿ, ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಇಂದಿನವರೆಗೂ ಶಿಕ್ಷಣ ಕ್ಷೇತ್ರಕ್ಕೆ ಯಾವುದೇ ಕೊಡುಗೆಯನ್ನು ನೀಡಿಲ್ಲ ಹೀಗಾಗಿ ಅವರಿಗೆ ಶಿಕ್ಷಕ ಕ್ಷೇತ್ರದಿಂದ ಮತ ಕೇಳುವ ಹಕ್ಕು ಇಲ್ಲ ಎಂದರು. ಸ್ವಾತಂತ್ರ್ಯದ ನಂತರದಿಂದ ಸಿಂಹ ಪಾಲು ಆಡಳಿತ ನಡೆಸಿದ ಕಾಂಗ್ರೆಸ್ನಿಂದ ನಿರುದ್ಯೋಗ ಸಮಸ್ಯೆ ನೀಗಿಸಲು ಸಾಧ್ಯವಾಗಲಿಲ್ಲ ಎಂದ ಅವರು ಗುಲಾಮಿ ತನ ಶಿಕ್ಷಣ ಕೈ ಬಿಟ್ಟು ಸ್ವಾಭಿಮಾನಿ ಶಿಕ್ಷಣ ತರುವಲ್ಲಿ ಬಿಜೆಪಿ ಪಠ್ಯಪುಸ್ತಕ ಪರಿಷ್ಕರಣೆ ಮಾಡುವಲ್ಲಿ ತೊಡಗಿದರೆ ಕಾಂಗ್ರೆಸ್ ಇದನ್ನು ವಿರೋಧಿಸುತ್ತಿದೆ ಇಂತಹ ಪಕ್ಷದ ಅಭ್ಯರ್ಥಿಗೆ ನಾವು ಮತ ಹಾಕಲು ಅವಕಾಶ ಕೊಡಬಾರದು ಇದಕ್ಕಾಗಿಯೇ ಬಿಜೆಪಿಯ ಕಾರ್ಯಕರ್ತರು ಒಂದಾಗಿ ಚುನಾವಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಭಿವೃದ್ಧಿ ಹಾಗೂ ಜನಪರ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುವ ಮೂಲಕ ದೇಶ ಹಾಗೂ ರಾಜ್ಯ ಅಭಿವೃದ್ಧಿಯತ್ತ ಸಾಗಿದೆ ಎಂದ ಅವರು ಇಂತಹ ಪಕ್ಷದ ಅಭ್ಯರ್ಥಿಗಳ ಗೆಲುವು ಅಭಿವೃದ್ಧಿಗೆ ಮತ್ತಷ್ಟು ಬಲ ಕೊಡಲಿದೆ ಎಂದರು.
ಅರಣ್ಯ ಸಚಿವ ಉಮೇಶ ಕತ್ತಿ ಮಾತನಾಡಿ, ಬಿಜೆಪಿಗೆ ಯಾರೂ ಅನಿವಾರ್ಯ ಅಲ್ಲ ಹೀಗಾಗಿ ಈ ಚುನಾವಣೆಯಲ್ಲಿ ನಿಷ್ಠೆಯಿಂದ ಕೆಲಸ ಮಾಡುವವರಿಗೆ ಸ್ವಾಗತ ಇದೆ. ಇದು ರಾಷ್ಟ್ರೀಯ ಪಕ್ಷ. ಇಲ್ಲಿ ಕೆಲಸ ಮಾಡುವ ಕಾರ್ಯಕರ್ತರ ಕೊರತೆ ಇಲ್ಲವೇ ಇಲ್ಲ ಎಂದ ಅವರು ಈ ಚುನಾವಣೆಯಲ್ಲಿ ಬಿಜೆಪಿ ಹೊರತು ಪಡಿಸಿ ಬೇರೆ ಯಾರಾದರು ಸಹಕಾರ ನೀಡುವವರಿದ್ದರೆ ನೀಡಲಿ ನಮ್ಮದೆನೂ ಅಭ್ಯಂತರ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಅಥಣಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಶಿಕ್ಷಕ ಹಾಗೂ ಪದವಿಧರ ಮತದಾರರನ್ನು ಗುರುತಿಸಿ ವೈಯಕ್ತಿಕವಾಗಿ ಭೇಟಿ ಮಾಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಧನೆ ಹೇಳಿ ಅವರ ಮನ ಒಲಿಸಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮಾಡುವ ಜವಾಬ್ದಾರಿ ಸಭೆಗೆ ಆಗಮಿಸಿದ ಎಲ್ಲ ಬಿಜೆಪಿ ಕಾರ್ಯಕರ್ತರ, ಪದಾಧಿಕಾರಿಗಳ, ಚುನಾಯಿತ ಪ್ರತಿನಿಧಿಗಳ ಹಾಗೂ ಮುಖಂಡರ ಮೇಲೆ ಇದೆ ಎಂದ ಅವರು ಬಿಜೆಪಿ ನೇತೃತ್ವದಲ್ಲಿಯೇ ದೇಶ ಹಾಗೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳ ಪ್ರಗತಿ ಸಾಧ್ಯ ಎಂದರು.
ಕೊಳ್ಳೆಗಾಲ ಶಾಸಕ ಮಹೇಶ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ, ಕುಡಚಿ ಶಾಸಕ ಪಿ.ರಾಜು, ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಡಾ.ರಾಜೇಶ್ ನೇರ್ಲಿ, ಶಿಕ್ಷಕ ಮತಕ್ಷೇತ್ರದ ಅಭ್ಯರ್ಥಿ ಅರುಣ ಶಹಾಪೂರ, ಪದವಿಧರ ಮತಕ್ಷೇತ್ರದ ಅಭ್ಯರ್ಥಿ ಹಣಮಂತ ನಿರಾಣಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಖೋಕಲೆ ಸ್ವಾಗತಿಸಿದರು, ಪುಟ್ಟು ಹಿರೇಮಠ ನಿರೂಪಿಸಿದರು, ಅಶೋಕ ದಾನಗೌಡರ ವಂದಿಸಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ರಾಜ್ಯ ಕಾರ್ಯದರ್ಶಿ ಉಜ್ವಲಾ ಬಡವಣಾಚೆ, ಮಂಡಲ ಅಧ್ಯಕ್ಷ ಅಣ್ಣಸಾಹೇಬ ನಾಯಿಕ, ಪುರಸಭಾ ಸದಸ್ಯ ರಾಜು ಗುಡೊಡಗಿ, ಪಿ.ಎಲ್.ಡಿ ಬ್ಯಾಂಕ ಅಧ್ಯಕ್ಷ ಶೀತಲ್ ಪಾಟೀಲ, ಶ್ರೀಶೈಲ ನಾಯಿಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.