ಕಾರ್ಮಿಕರಿಗೆ ಮತದಾನ ಮಾಡಲು ಬಿಡದೆ ಬಂಧಿಯಾಗಿಸಿ ದುಡಿಸಿಕೊಳ್ಳುತ್ತಿದ್ದ ಕಾರ್ಖಾನೆಗೆ ನುಗ್ಗಿ ಕಾರ್ಮಿಕರನ್ನು ಹೊರತಂದ ರೈತ ಮುಖಂಡರು
ರಾಣೇಬೆನ್ನೂರು 8: 1951 ರ ಪ್ರಜಾನೀತಿ ಕಾಯ್ದೆ ಸೆಕ್ಷನ್ 135 (ಬಿ) ದರ ಅಡಿಯಲ್ಲಿ ಹಾಗೂ ಕೈಗಾರಿಕಾ ಸಂಸ್ಥೆಗಳು ರಾಷ್ಟ್ರೀಯ ಹಬ್ಬ ಮತ್ತು ಹಬ್ಬದ ರಜೆ ಕಾಯ್ದೆ 1963 ರ ಕಲಂ 3 (ಎ) ದ ಅನ್ವಯ ಕಾರ್ಮಿಕರಿಗೆ ವೇತನ ಸಹಿತ ರಜೆ ಮಂಜೂರು ಮಾಡಿ ಸಂವಿದನಾತ್ಮಕ ಹಕ್ಕಾದ ಕಡ್ಡಾಯವಾಗಿ ಮತ ಚಲಾಯಿಸಲು ರಜೆ ನೀಡಬೇಕು ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯ ಕಾರ್ಖಾನೆಗಳು ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲಿಕರು ಮತದಾನದ ದಿನದಂದು ಕಾಯ್ದೆಯನ್ವಯ ಅರ್ಹ ಕಾರ್ಮಿಕರು ಮತದಾನದ ಹಕ್ಕು ಚಲಾಯಿಸಲು ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡಬೇಕು ತಪ್ಪಿದಲ್ಲಿ ಸಂಬಂಧಪಟ್ಟ ಸಂಸ್ಥೆಯ ಮಾಲಿಕರ ಮತ್ತು ನಿಯೋಜಕರ ವಿರುದ್ಧ ನಿಯಮಾನುಸಾರ ಕಠಿಣಕ್ರಮ ಜರುಗಿಸಬೇಕೆಂಬ ಕಟ್ಟುನಿಟ್ಟಿನ ಆದೇಶವಿದ್ದರೂ ಕೂಡ ಗೋಲ್ಡನ್ ಹ್ಯಾಚರೀಸ್ ಪ್ರೈ ಲಿ. ಮತ್ತು ಗ್ರೀನ್ ಎನರ್ಜಿ, ಬಯೋ ರಿಪೈನರಿಸ್ ಪ್ರೈ ಲಿ., ಹನುಮನಹಳ್ಳಿ ಈ ಕಾರ್ಖಾನೆಯ ಆಡಳಿತ ಮಂಡಳಿ ಇಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಕಾರ್ಮಿಕರಿಗೆ ರಜೆ ನೀಡದೆ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವುದು ನಮ್ಮ ಸಂವಿಧಾನಕ್ಕೆ ಮಾಡಿದ ಅಪಮಾನ ಅಷ್ಟೇ ಅಲ್ಲಾ ಬಡ ನಿರುದ್ಯೋಗಿ ಕಾರ್ಮಿಕರ ಮತ್ತು ಕಾರ್ಮಿಕ ಮಹಿಳೆಯರ ಮೇಲೆ ಮಾಡಿದ ದೌರ್ಜನ್ಯವಾಗಿದೆ ಎಂದು ರೈತ ಮುಖಂಡ, ಕಾರ್ಮಿಕರ ಹಿತ ಚಿಂತಕ ರವೀಂದ್ರಗೌಡ ಎಫ್. ಪಾಟೀಲ ದೂರಿದ್ದಾರೆ.
ಅವರು ಹನುಮನಹಳ್ಳಿಯ ಹತ್ತಿರ ನಿರ್ಮಾಣವಾಗಿರುವ ಗೋಲ್ಡನ್ ಹ್ಯಾಚರೀಸ್ ಪ್ರೈ ಲಿ. ಮತ್ತು ಗ್ರೀನ್ ಎನರ್ಜಿ, ಬಯೋ ರಿಪೈನರಿಸ್ ಪ್ರೈ ಲಿ., ಹನುಮನಹಳ್ಳಿ ಫ್ಯಾಕ್ಟರಿಗೆ ಅನೇಕ ರೈತ ಮುಖಂಡರೊಂದಿಗೆ ತೆರಳಿ ಕಾರ್ಖಾನೆಯವರ ಈ ಕಾರ್ಮಿಕ ವಿರೋಧಿ ನೀತಿ ಸರ್ಕಾರ ಮತ್ತು ಚುನಾವಣಾ ಆಯೋಗದ ಆದೇಶ ಉಲ್ಲಂಘಿಸಿ ಕಾರ್ಮಿಕರನ್ನು ಮತದಾನಕ್ಕೆ ಬಿಡದೆ ನಡೆಯುತ್ತಿದ್ದ ದುರ್ವರ್ತನೆಯನ್ನು ಖಂಡಿಸಿ ಆಡಳಿತ ಮಂಡಳಿಯ ಮ್ಯಾನೇಜಿಂಗ್ ಡೈರಕ್ಟರ್ ಸೈಯದ್ ಪಹಾದರವರೊಂದಿಗೆ ಚರ್ಚಿಸಿ ಜಿ.ಎಂ. ಎನ್. ಲೋಕೇಶ ಮತ್ತು ಹೆಚ್.ಆರ್. ಭೀಮಪ್ಪ ಇವರೊಂದಿಗೆ ಸುಮಾರು 1 ತಾಸು ವಾಗ್ವಾದ ನಡೆಸಿ ಬಂಧಿಯಾಗಿಸಿದ್ದ ಸುಮಾರು 400 ಕ್ಕೂ ಹೆಚ್ಚು ಕಾರ್ಮಿಕರನ್ನು ಕಂಪನಿಯಿಂದ ಹೊರತಂದು ಮತದಾನಕ್ಕೆ ಇದ್ದ ಕೊನೆಗಳಿಗೆಯಲ್ಲಿ ಅವಕಾಶ ಮಾಡಿಸಿಕೊಟ್ಟಿದ್ದು ಮತದಾನದಿಂದ ವಂಚಿತರಾಗುತ್ತಿದ್ದವರಿಗೆ ಅಮೋಘ ಅವಕಾಶ ಮಾಡಿಕೊಟ್ಟ ಪ್ರಸಂಗ ನಡೆದಿರುವುದು ಜಿಲ್ಲಾಡಳಿತ, ಜಿಲ್ಲಾ ಚುನಾವಣಾ ಅಧಿಕಾರಿಗಳ, ಕಾರ್ಮಿಕ ಇಲಾಖೆಯ ಜಿಲ್ಲಾ ಸ್ಪಿಪ್ ಸಮಿತಿಯ ಆಡಳಿತವನ್ನೇ ಅಣಕಿಸಿದಂತ ಘಟನೆ ಜರುಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿ ಪೆಟ್ಟು ನೀಡಲಾಗಿದೆ.
ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಕೇಂದ್ರ ಕಾರ್ಮಿಕ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಸಾಕ್ಷಿಪುರಾವೆಗಳೊಂದಿಗೆ ಸುದೀರ್ಘ ದೂರು ನೀಡಿರುವ ಪಾಟೀಲರು ಈ ಬಗ್ಗೆ ಕೇಂದ್ರ ಮತ್ತು ರಾಜ್ಯಕ್ಕೆ ಸ್ಪಷ್ಟೀಕರಣ ಕೇಳಿದ್ದಾರೆ.
ಈ ಸಂದರ್ಭದಲ್ಲಿ ಮುರುಡಪ್ಪ ದೊಡ್ಮನಿ, ಅರುಣ ಯಲ್ಲಕ್ಕನವರ, ಹರಿಹರಗೌಡ ಪಾಟೀಲ, ಪ್ರಶಾಂತರಡ್ಡಿ ಯರೇಕುಪ್ಪಿ, ಜಮಾಲಸಾಬ್ ಶೇತಸನದಿ, ಹನುಮಂತಗೌಡ ಪೊಲೀಸಗೌಡ್ರ, ಮನ್ಮಥ ಕೆ.ಎಸ್. ಮುಂತಾದವರು ಭಾಗಿಯಾಗಿದ್ದರು.