ಮಹಿಳೆಯರು ಸಂಕುಚಿತ ಮನೋಭಾವನೆಯಿಂದ ಹೊರಬರಬೇಕು : ಲಾಡಖಾನ
ರಾಣೇಬೆನ್ನೂರು 26 :ಸಮಾಜದಲ್ಲಿ ಒಳ್ಳೆಯವರು ಕೆಟ್ಟವರು ಎಲ್ಲರೂ ಇದ್ದಾರೆ. ಯಾರೇ ಏನೇ ತಪ್ಪು ಮಾಡಿದರೂ ಸಹ, ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಬಾರದು ಅದಕ್ಕಾಗಿ ಯಾವುದೇ ಮಡಿವಂತಿಕೆ , ಸಂಕೋಚವಿಲ್ಲದೆ ಉದ್ಯೋಗಸ್ಥ ಮಹಿಳೆಯರು ತಮ್ಮ ಮೇಲಾಧಿಕಾರಿಗಳಿಗೆ ದೂರು ನೀಡಬೇಕು ಮತ್ತು ಜಾಗೃತರಾಗಬೇಕಾಗಿದೆ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ವಾಯ್.ಎಲ್.ಲಾಡಖಾನ ಹೇಳಿದರು.
ಶನಿವಾರ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ,ಕರ್ನಾಟಕ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕ ನ್ಯಾಯವಾದಿಗಳ ಸಂಘವು ಆಯೋಜಿಸಿದ್ದ, ಮಹಿಳಾ ಲೈಂಗಿಕ ಕಿರುಕುಳ, ದೌರ್ಜನ್ಯ ಅರಿವು ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇಂತಹ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳ ಕೆಲವು ವಿಕೃತ ಮನಸುಗಳಿಂದ ಎಲ್ಲಾ ಕಡೆಯೂ ನಡೆಯುತ್ತಿವೆ. ಇದರ ತಡೆಗೆ ಮಹಿಳೆ ಪರಿಪೂರ್ಣ ಜಾಗ್ರತಳಾಗಬೇಕು, ಮಾನ ಮರ್ಯಾದೆಗೆ ಅಂಜಿ ಸುಮ್ಮನಾದರೆ ಅವರಿಗೆ ಮತ್ತಷ್ಟು ಕಿರುಕುಳಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದರು.
ಸಮಾಜದಲ್ಲಿರುವ ಪ್ರತಿಯೊಬ್ಬ ನಾಗರಿಕನು ಕಾನೂನನ್ನು ಗೌರವಿಸಬೇಕು ಹಾಗೆಯೇ ಕಾನೂನು ಸಹ ಅವರನ್ನು ಗೌರವಿಸುತ್ತದೆ. ಹೆಣ್ಣಿನಿಂದಲೇ ಹೆಣ್ಣಿನ ಶೋಷಣೆ ನಡೆಯುತ್ತಿರುವುದು ಬಹುತೇಕ ಸ್ಥಳಗಳಲ್ಲಿ ಕಂಡುಬರುವ ಸಾಮಾನ್ಯ ಮಾತಾಗಿದೆ. ಅದಕ್ಕಾಗಿ ಉದ್ಯೋಗ ಮಹಿಳಾ ಮುಖ್ಯಸ್ಥರು ಈ ವಿಚಾರವಾಗಿ ಜಾಗೃತರಾಗಬೇಕು ಮತ್ತು ಸಹೋದ್ಯೋಗಿಗಳಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.
ಮಹಿಳೆ ಎಂದಿಗೂ ಅಭಲೆಯಲ್ಲ, ಅವಳು ಎಂದೆಂದಿಗೂ ಸಭಲೇ, ದೂರು ನೀಡಿದರೆ ಮುಂದೇನಾಗಬಹುದು ಎನ್ನುವ ಭಯ, ಆತಂಕ ಮತ್ತು ಸಂಕುಚಿತ ಮನೋಭಾವನೆ ಪರಿಣಾಮದಿಂದ ಅವಕಾಶವಾದಿಗಳಿಗೆ ಮತ್ತೆ ಕಿರುಕುಳಕ್ಕೆ ಅವಕಾಶ ಕಲ್ಪಿಸಿ ಕೊಟ್ಟಂತಾಗುತ್ತದೆ ಎಂದ ಅವರು, ಭಾರತದ ಕಾನೂನು ಭದ್ರವಾಗಿದೆ. ಅಪರಾಧಿಗಳು ಎಂದಿಗೂ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವ ವಾಸ್ತವಿಕತೆಯನ್ನು ಅರಿತುಕೊಂಡಾಗ ಮಾತ್ರ ಗಾಂಧಿಜಿ ಅವರು ಕಂಡ ಕನಸು ( ಮಧ್ಯರಾತ್ರಿಯಲ್ಲಿ ಮಹಿಳೆ ಏಕಾಂಗಿ ಒಂಟಿ ಸಂಚರಿಸಬೇಕು ದೇಶ ಸ್ವತಂತ್ರವಾದಂತೆ ) ನನಸಾಗಲು ಸಾಧ್ಯವಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ದಿವಾಣಿ ನ್ಯಾಯಾಧೀಶ ಮತ್ತು ತಾಲೂಕ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಅನಿತಾ ಓ. ಎ. ಅವರು, ಮಾತನಾಡಿ, ಯಾರು ಕಾನೂನಿನಿಂದ ವಂಚಿತರಾಗಬಾರದು. ಎನ್ನುವ ಉದ್ದೇಶದಿಂದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು, ನೀರ್ಗತಿಕರಿಗೆ, ಬಡವರಿಗೆ, ಜನಸಾಮಾನ್ಯರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ,ಉಚಿತವಾಗಿ ಯಾವುದೇ ವೆಚ್ಚವಿಲ್ಲದೆ, ನ್ಯಾಯ ದಾನ ನೀಡುತ್ತದೆ. ಅದಕ್ಕಾಗಿ, ರಾಜ್ಯದಾದ್ಯಂತ ಪ್ರತಿ ಜಿಲ್ಲಾ ಮತ್ತು ತಾಲೂಕ ಕೇಂದ್ರ ಸ್ಥಳಗಳಲ್ಲಿ ಕಾನೂನು ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಂದರು.
ನಗರ ಮತ್ತು ತಾಲೂಕ ಗ್ರಾಮಾಂತರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಸಹಕಾರಿಯಾಗಿ ಅರೇನ್ಯಾಯಿಕ( PLO) ಸ್ವಯಂ ಸೇವಕರು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಸಾರ್ವಜನಿಕರು ಇವರ ಕಡೆ ಭೇಟಿ ನೀಡಿ ಪ್ರಯೋಜನ ಪಡೆಯಲು ಮುಂದಾಗಬೇಕು ಎಂದರು.
ವೇದಿಕೆಯಲ್ಲಿ, ಆಫರ್ ಸರ್ಕಾರಿ ವಕೀಲರಾದ ಟಿ.ಎಸ್. ಜಂಗರೆಡ್ಡಿ, ವಕೀಲರ ಸಂಘದ ಉಪಾಧ್ಯಕ್ಷ ಲಕ್ಷ್ಮಣ್ ಕೆಂಗೊಂಡ, ಮತ್ತಿತರರು ಉಪಸ್ಥಿತರಿದ್ದರು. ನಂತರ ನಡೆದ ಅರೆನ್ಯಾಯಿಕ ಸ್ವಯಂ ಸೇವಕರ ಒಂದು ದಿವಸದ ಕಾರ್ಯಗಾರದಲ್ಲಿ ಕಾನೂನು ಉಪನ್ಯಾಸಕರಾಗಿ ಪಾಲ್ಗೊಂಡಿದ್ದ, ನ್ಯಾಯವಾದಿಗಳಾದ ನಂದಿನಿ ಎಸ್.ಜೋಶಿ ( ರಾಜ್ಯ ನೀತಿಯ ನಿರ್ದೇಶನಾತ್ಮಕ ನಿಯಮಗಳು ) ಶ್ರೀಮತಿ ಸುಭಾಂಗಿ ದೇಶಪಾಂಡೆ (ಸಂವಿಧಾನ ಮೂಲಭೂತ ಹಕ್ಕುಗಳು ) ಹಾಗೂ ಸಿ. ಯು.ಕರೇಗೌಡ್ರು ಅವರುಗಳು ಸಂವಿಧಾನದ ಮೂಲಭೂತ ಕರ್ತವ್ಯಗಳು ವಿಷಯವಾಗಿ, ಮಾಹಿತಿ ಮತ್ತು ಕಾನೂನು ಮಾರ್ಗದರ್ಶನ ನೀಡಿದರು. ಸಂಜೆಯವರೆಗೂ ನಡೆದ ಒಂದು ದಿವಸದ ಪಿ ಎಲ್ ಓ ಕಾರ್ಯಗಾರದಲ್ಲಿ 35 ಕ್ಕೂ ಹೆಚ್ಚು ಸ್ವಯಂಸೇವಕರು ಪಾಲ್ಗೊಂಡಿದ್ದರು