ಸ್ತ್ರೀ ಸದೃಢ ಸಮಾಜ ನಿರ್ಮಾಣಕ್ಕೆ ಕಾರಣವಾದವಳು : ಜಿ. ಸುರೇಖಾ ಸುರೇಶ
ಧಾರವಾಡ 19: ಸ್ತ್ರೀ ಒಂದು ವ್ಯಕ್ತಿಯಾಗಿರದೇ ಕುಟುಂಬದ ಶಕ್ತಿಯಾಗಿ ಕುಟುಂಬ ಮುನ್ನಡೆಸುತ್ತ ಮಗುವಿಗೆ ಜನ್ಮ ನೀಡಿದ್ದಲ್ಲದೇ, ಲಾಲನೆ ಪಾಲನೆಯೊಂದಿಗೆ ಸಂಸ್ಕಾರವನ್ನು ದಾರೆ ಎರೆಯುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಕಾರಣವಾದವಳು ಎಂದು ಆಕಾಶವಾಣಿಯ ಉದ್ಘೋಷಕಿ ಜಿ. ಸುರೇಖಾ ಸುರೇಶ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪ ಆಯೋಜಿಸಿದ್ದ ‘ಮಹಿಳೆ ಮತ್ತು ಕಲೆ’ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡುತ್ತಾ, ಮಹಿಳೆಯ ಶಕ್ತಿ ಬರೀ ಕುಟುಂಬ ನಿರ್ವಹಣೆಗೆ ಸೀಮಿತವಾಗದೇ ತನ್ನೊಳಗಿರುವ ಪ್ರತಿಭೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ನಿಜವಾದ ಜನಪದ ಕಲೆ ಮಹಿಳೆಯರಲ್ಲಿ ಅಡಗಿದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಕರ್ನಾಟಕ ವಿದ್ಯಾವರ್ಧಕ ಸಂಘದಂತೆ ಉಳಿದ ಸಂಘ-ಸಂಸ್ಥೆಗಳೂ ವೇದಿಕೆಯನ್ನು ಕಲ್ಪಿಸಿಕೊಡುವಂತಾಗಬೇಕು ಎಂದರು. ಮಹಿಳೆಯರಿಗಾಗಿ ಕಿರುನಾಟಕ ಸ್ಪರ್ಧೆಯನ್ನು ಏರಿ್ಡಸಲಾಗಿತ್ತು ಸ್ಪರ್ಧೆಯ ನಿರ್ಣಾಯಕರಾಗಿ ಶ್ರೀಮತಿ ಸೀತಾ ಛಪ್ಪರ, ಆರತಿ ದೇವಶಿಖಾಮಣಿ ಮತ್ತು ಡಾ. ಪ್ರಕಾಶ ಮಲ್ಲಿಗವಾಡ ಆಗಮಿಸಿದ್ದರು. ಶ್ರೀಮತಿ ಪ್ರಮೀಳಾ ಜಕ್ಕಣ್ಣವರ ಭಕ್ತಿಗೀತೆ, ಡಾ. ನಿರ್ಮಲಾ ಮತ್ತು ಮಂಗಲಾ ಚಿಗಟೇರಿ ಭಾವಗೀತೆ, ಮುತ್ತು ಹಿರೇಮಠ ಚಲನಚಿತ್ರಗೀತೆ ಹಾಗೂ ಕಸ್ತೂರಿ ಮತ್ತು ಸಂಗಡಿಗರು ಜನಪದ ಗೀತೆ ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಬೆಲ್ಲದ ವಹಿಸಿ, ಕಿರು ನಾಟಕ ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಎಲ್ಲಾ ನಾಟಕ ತಂಡಗಳಿಗೆ ಹಾಗೂ ಸಂಗೀತ ಪ್ರಸ್ತುತ ಪಡಿಸಿದವರಿಗೆ ಬಹುಮಾನ ನೀಡಿ ಶುಭ ಹಾರೈಸಿದರು. ಮಹಿಳಾ ಮಂಟಪದ ಸಂಚಾಲಕಿ ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ ಸುಧಾ ಹುಲಗೂರ ಪ್ರಾರ್ಥಿಸಿದರು. ಶಾರದಾ ಕೌದಿ ಅತಿಥಿಗಳನ್ನು ಪರಿಚಯಿಸಿದರು. ಡಾ. ವಿ. ಶಾರದಾ ನಿರೂಪಿಸಿದರು. ಜ್ಯೋತಿ ಭಾವಿಕಟ್ಟಿ ವಂದಿಸಿದರು.