ಧಾರವಾಡ - ಹುಬ್ಬಳ್ಳಿ

ತ್ವರೀತವಾಗಿ ಸುರಕ್ಷಿತ ಕಟ್ಟಡಕ್ಕೆ ಮಹಿಳಾ ಕಾಲೇಜ ಬೋಧನಾ ವರ್ಗಗಳು ಸ್ಥಳಾಂತರ

ತ್ವರೀತವಾಗಿ ಸುರಕ್ಷಿತ ಕಟ್ಟಡಕ್ಕೆ ಮಹಿಳಾ ಕಾಲೇಜ ಬೋಧನಾ ವರ್ಗಗಳು ಸ್ಥಳಾಂತರ

ಜಿಲ್ಲಾಧಿಕಾರಿಗೆ ವಿದ್ಯಾರ್ಥಿನೀಯರಿಂದ ಗೌರವ ಅರ್ಪಣೆ

ಧಾರವಾಡ 23:  ಕಳೆದ ಮೂರನಾಲ್ಕು ವರ್ಷದಿಂದ ವರ್ಗಗಳ ಕೋಣೆಗಳು ಸೋರಿಕೆಯಿಂದ ಸಮಸ್ಯೆ ಆಗಿದ್ದ ನಗರದ ಸರಕಾರಿ ಮಹಿಳಾ ಕಾಲೇಜಿಗೆ ಪರ್ಯಾಯ ವ್ಯವಸ್ಥೆ ಮಾಡಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಬೆಳಿಗ್ಗೆ ಭೇಟಿ ನೀಡಿ, ಪರೀಶೀಲಿಸಿದರು. 

ನಗರದ ಆರ್‌.ಎನ್‌.ಶೆಟ್ಟಿ ಕ್ರೀಡಾಂಗಣದ ಹತ್ತಿರವಿರುವ ಸರಕಾರಿ ಮಹಿಳಾ ಪದವಿ ಕಾಲೇಜು ಕಟ್ಟಡ ಶತಮಾನದಷ್ಟು ಹಳೆಯದಾಗಿರುವದರಿಂದ ಬೋಧನಾ ಕೊಠಡಿಗಳು ಸೋರಿಕೆ ಆಗುತ್ತಿವೆ. ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಜುಲೈ 19 ರಂದು ಕಾಲೇಜು ಕಟ್ಟಡಕ್ಕೆ ಕಳೆದ ಜುಲೈ 19 ರಂದು ಭೇಟಿ ನೀಡಿ, ಎಲ್ಲ ಕ್ಲಾಸ್ ರೂಮ್‌ಗಳಿಗೆ ಸ್ವತಃ ಭೇಟಿ ನೀಡಿ, ಪರೀಶೀಲಿಸಿದರು. 

ಕಟ್ಟಡದಲ್ಲಿನ ಕ್ಲಾಸ್ ರೂಮ್‌ಗಳು ಅಪಾಯ ಸ್ಥಿತಿಯಲ್ಲಿ ಇರುವುದನ್ನು ಮನಗಂಡು, ಜಿಲ್ಲಾಧಿಕಾರಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ನಂತರ ಜಿಲ್ಲಾಧಿಕಾರಿಗಳು, ಅಂದೇ ಡೈಯಟ್ ಕಟ್ಟಡ, ಟಿಸಿಡಬ್ಲ್ಯೂ ಕಾಲೇಜ ಕಟ್ಟಡ ಮತ್ತು ಕವಿವಿ ಯುಪಿಎಸ್ ಶಾಲಾ ಕಟ್ಟಡಗಳನ್ನು ಪರೀಶೀಲಿಸಿದರು. ನಂತರ ಕವಿವಿ ಯುಪಿ ಶಾಲಾ ಕಟ್ಟಡಕ್ಕೆ ಹಾಗೂ ಡೈಯಟ್ ಆವರಣದ ಕಟ್ಟಡಗಳಿಗೆ ಹಾಗೂ ಆಲೂರು ಸರ್ಕಲದಲ್ಲಿರುವ ಟಿಸಿಡಬ್ಲ್ಯೂ ಕಟ್ಟಡಗಳಿಗೆ ಭೇಟಿ ನೀಡಿ, ಅಲ್ಲಿನ ಮುಖ್ಯಸ್ಥರೊಂದಿಗೆ ಚರ್ಚಿಸಿ, ಕೊಠಡಿ ಲಭ್ಯತೆ ಬಗ್ಗೆ ಮಾಹಿತಿ ಪಡೆದರು. 

ನಂತರ ಕವಿವಿ ಕುಲಪತಿ, ಕುಲಸಚಿವರೊಂದಿಗೆ ಚರ್ಚಿಸಿ, ಯುಪಿಎಸ್ ಶಾಲೆ ಆವರಣದ ಕೊಠಡಿಗಳಿಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಯಿತು. ಅದರಂತೆ ಆರ್‌.ಎನ್‌.ಶೆಟ್ಟಿ ಕ್ರೀಡಾಂಗಣದ ಹತ್ತಿರದ ಕಟ್ಟಡದಲ್ಲಿ ಸೋರಿಕೆಯಿಂದ ಸಮಸ್ಯೆ ಆಗುತ್ತಿದ್ದ ಎಲ್ಲ ಭೋದನಾ ವರ್ಗಗಳನ್ನು ಇಂದು ಯುಪಿಎಸ್ ಶಾಲೆ ಕಟ್ಟಡದಲ್ಲಿ ಆರಂಭಿಸಲಾಯಿತು. 

ವಿದ್ಯಾರ್ಥಿಗಳ ಆಹ್ವಾನದ ಮೇರೆಗೆ ಜಿಲ್ಲಾಧಿಕಾರಿಗಳು ಇಂದು ಬೆಳಿಗ್ಗೆ ಭೇಟಿ ನೀಡಿದರು. ವಿದ್ಯಾರ್ಥಿನೀಯರು ಸಂತಸ ವ್ಯಕ್ತಪಡಿಸಿದರು. ಪ್ರತಿ ಭೋದನಾ ಕೊಠಡಿಗೆ ತೆರಳಿ ವಿದ್ಯಾರ್ಥಿನೀಯರನ್ನು ಮಾತನಾಡಿಸಿ, ಉತ್ತಮವಾಗಿ ಓದಲು ತಿಳಿಸಿದರು.  

ಹೇಳಿದಂತೆ ಕಾಲಮಿತಿಯಲ್ಲಿ ಕಾರ್ಯ ಮಾಡಿದ ಡಿಸಿ ಅವರನ್ನು ವಿದ್ಯಾರ್ಥಿನೀಯರು ಸನ್ಮಾನಿಸಿ, ಗೌರವಿಸಿದರು. ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ವಿದ್ಯಾರ್ಥಿಗಳು ತಮ್ಮ ಪ್ರತಿಭೆಗೆ ತಕ್ಕಂತೆ ಶ್ರಮ ಹಾಕಬೇಕು. ಓದುವ ಸ್ಥಳದಲ್ಲಿ ಬೆಳಕು, ಗಾಳಿ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮವಹಿಸಲಾಗುತ್ತಿದೆ ಎಂದರು. 

ಕಾಲೇಜು ಜೀವನವೆಂದರೆ, ವಿದ್ಯಾರ್ಥಿಗಳಲ್ಲಿ ಕನಸು ಕಾಣುವ ಕಾಲ. ಇದರೊಂದಿಗೆ ಸಾಧನೆ ಮಾಡುವ ಛಲ ಹೊಂದುವ ವಯಸ್ಸು. ಆದ್ದರಿಂದ ಮೊಬೈಲ್, ಗೆಜೆಟಗಳ ಮೋರೆ ಹೋಗದೆ, ಶ್ರಮಪಟ್ಟು ಓದಬೇಕು ಎಂದರು. 

ಸರಕಾರಿ ಮಹಿಳಾ ಕಾಲೇಜು ನೂತನ ಕಟ್ಟಡ ಕಾಮಗಾರಿ ಶೀಘ್ರ ಆರಂಭಿಸಲು ಕ್ರಮವಹಿಸಲಾಗಿದೆ. ಉಸ್ತುವಾರಿ ಸಚಿವರ ಮತ್ತು ಸ್ಥಳೀಯ ಶಾಸಕರ ಮುತುವರ್ಜಿಯಿಂದ ಕಟ್ಟಡಕ್ಕೆ ಅನುದಾನ ಮಂಜೂರು ಆಗಿದ್ದು, ಕೆಎಚ್‌ಬಿ ಅವರಿಗೂ ಬೇಗ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ ನೀಡಿದ್ದಾರೆ. ತ್ವರಿತವಾಗಿ ಕಾಮಗಾರಿ ಆರಂಭವಾಗುವಂತೆ ಸರಿಯಾಗಿ ಸಮನ್ವಯ ಸಾಧಿಸಲು, ಫಾಲೋ ಅಪ್ ಮಾಡಲು ಕಾಲೇಜು ಪ್ರಾಚಾರ್ಯರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಕಾಲೇಜು ವಿದ್ಯಾರ್ಥಿನೀಯರು, ಯಾರೂ ಕ್ಲಾಸ್ ಮಿಸ್ ಮಾಡಬಾರದು. ಓದಿನ ಬಗ್ಗೆ ಹೆಚ್ಚು ಗಮನ ಹರಿಸಬೇಕು. ನಿರಂತರ ಓದು ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ ಎಂದು ಅವರು ಹೇಳಿದರು. ಕಾಲೇಜು ವಿದ್ಯಾರ್ಥಿನೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಲೇಜು ಪ್ರಾಚಾರ್ಯ ಡಾ.ಎಸ್‌.ಎಸ್‌.ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಡಾ.ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಯುಪಿಎಸ್ ಶಾಲೆಯ ಮುಖ್ಯಾಧ್ಯಾಪಕಿ ನಾಯಕ, ಮಹಿಳಾ ಕಾಲೇಜು ಅಧ್ಯಾಪಕರು, ಕಲಾ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ