ಮಹಿಳಾ ನಾಟಕೋತ್ಸವ ಸಮಾರೋಪ
ರಂಗಭೂಮಿ ಜೀವಂತಿಕೆಗೆ ಮಹಿಳೆಯರ ಕೊಡುಗೆ ಅಪಾರ: ನಂಜಯ್ಯನಮಠ
ಗುಳೇದಗುಡ್ಡ 09: ಈ ನಾಡಿನ ರಂಗಭೂಮಿ ಕಲೆ, ನಾಟಕ ಪರಂಪರೆಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಪುರುಷ ಪಾತ್ರವನ್ನು ಕೂಡಾ ಅತ್ಯಂತ ಲೀಲಾಜಾಲವಾಗಿ ಮಾಡಿ ಪ್ರೇಕ್ಷಕರ ಗಮನ ಸೆಳೆದ ಈ ಮಹಿಳೆಯರ ಕಲಾ ಸೇವೆ ಮೆಚ್ಚುವಂತದ್ದು ಎಂದು ಮಾಜಿ ಶಾಸಕ, ಕಲಾವಿದ ಎಸ್.ಜಿ.ನಂಜಯ್ಯನಮಠ ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ ಹಮ್ಮಿಕೊಂಡ ಮೂರು ದಿನಗಳ ಮಹಿಳಾ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿ, ಉತ್ತರ ಕರ್ನಾಟಕದ ಗುಳೇದಗುಡ್ಡ ಸೇರಿದಂತೆ ಸುತ್ತಲಿನ ಅನೇಕ ಹಳ್ಳಿಗಳಲ್ಲಿನ ಕಲಾವಿದರು ತಮ್ಮ ಜೀವನವನ್ನೆ ಕಲೆಗಾಗಿ ಮುಡುಪಾಗಿಟ್ಟಿದ್ದಾರೆ. ಮಹಿಳೆಯರು ತಮ್ಮ ಉತ್ತಮ ಅಭಿನಯದ ಮೂಲಕ ಕಲಾ ಸೇವೆ ಎಂದೆಂದಿಗೂ ಅಜರಾಮರಾಗಿ ಉಳಿಸಿಕೊಂಡಿದ್ದಾರೆ ಎಂದು ಹೇಳಿದರು.
ರಂಗ ಸಮಾಜದ ಸದಸ್ಯ ಡಾ.ಹೆಲನ್ ಮೈಸೂರು, ರಾಷ್ಟ್ರೀಯ ನಾಟಕ ಶಾಲೆಯ ರಂಗ ನಿರ್ದೇಶಕಿ ವೀಣಾ ಶರ್ಮಾ, ರಂಗ ಸಂಘಟಕ ಎ.ಬಿ.ಬರಗುಂಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಾಗಲಕೋಟದ ಶ್ರೀಮತಿ ಪರಿಮಳಾ ಗಿರಿಯಾಚಾರ, ಶ್ರೀಮತಿ ಸುಮಿತ್ರಾ ಪತ್ತಾರ ಅವರಿಂದ ರಂಗ ಸಂಗೀತ ನಡೆಯಿತು. ಇಳಕಲ್ಲದ ಸುಗುಣಾದೇವಿ ಸಪ್ಪಂಡಿ ಹಾಗೂ ಶಾಂತಮ್ಮ ಜಮಖಂಡಿ ಅವರಿಗೆ ಸಮಾರಂಭದಲ್ಲಿ `ರಂಗಗೌರವ' ನೀಡಿ ಸನ್ಮಾನಿಸಲಾಯಿತು.
ನಾಟಕ ಅಕಾಡೆಮಿ ಸದಸ್ಯರಾದ ವಿನೋದ ಅಂಬೇಕರ, ರಾಚಪ್ಪ ಬಡಿಗೇರ, ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಶೇಖಮಾಸ್ತರ್, ಭಾರತಿ ಉತ್ತರೇಶ್ವರ, ಸ್ವಾತಿ ಉತ್ತರೇಶ್ವರ, ಶ್ರೀವತ್ಸ, ಕಲಾವಿದರಾದ ಶಂಕರ ರೂಢಗಿ, ಶ್ರೀಕಾಂತ ಹುನಗುಂದ, ಯಲ್ಲಪ್ಪ ಮನ್ನಿಕಟ್ಟಿ, ಡಾ.ಭೀಮನಗೌಡ ಪಾಟೀಲ ಮತ್ತಿತರರು ಇದ್ದರು. ನಂತರ ವಿಜಯಪುರದ ರಂಗಸೇವಾ ಕಲಾ ಸಂಘದಿಂದ ಸತ್ಯ ಹರಿಶ್ಚಂದ್ರ ನಾಟಕ ಪ್ರದರ್ಶನ ನಡೆಯಿತು.