ರಾಣೆಬೆನ್ನೂರ

ಸೋಲು ಗೆಲುವು ಆಟಗಳಲ್ಲಿ ಮುಖ್ಯವಲ್ಲ: ಪ್ರಕಾಶ ಕೋಳಿವಾಡ

ಸೋಲು ಗೆಲುವು ಆಟಗಳಲ್ಲಿ ಮುಖ್ಯವಲ್ಲ: ಪ್ರಕಾಶ ಕೋಳಿವಾಡ

ರಾಣಿಬೆನ್ನೂರ,20: ಸೋಲು ಗೆಲುವು ಆಟಗಳಲ್ಲಿ ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯವಾಗಿದೆ. ಕ್ರೀಡೆ ಗೆಲ್ಲಬೇಕು, ಸೋಲನ್ನು ಸವಾಲಾಗಿ ಸ್ವೀಕರಿಸಿದಾಗ ಗೆಲುವು ಸಾಧನೆಯಾಗಿ ಬರುತ್ತದೆ. ಎಲ್ಲರೂ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.   

ಇಲ್ಲಿನ ಆರ್‌ಟಿಇಎಸ್ ಕಾಲೇಜು ಮೈದಾನದಲ್ಲಿ ನಡೆದ  ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಕ್ರೀಡೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ. ನಿತ್ಯದ ಪಾಠದ ಜೊತೆಗೂ ಆಟಕ್ಕೂ ಸಹ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದರು. 

ತಾಲೂಕಿನಲ್ಲಿ  3000ಕ್ಕೂ ಅಧಿಕ ದೇವಾಲಯಗಳಿವೆ. 200 ಶಾಲೆಗಳಿವೆ . ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್ ಜೊತೆಗೆ ಇದೀಗ ಡಿಜಿಟಲ್ ಲೈಬ್ರರಿಗಳನ್ನು ತಿಂಗಳೊಳಗಾಗಿ ತೆರೆಯಲಾಗುವುದು.  ದೇವಾಲಯಗಳಿಗೆ ಮುಜರಾಯಿ ಇಲಾಖೆಯಿಂದ ಅನುದಾನ ನೀಡಲಾಗುವುದು.  ಶಿಕ್ಷಣಕ್ಕೆ ನನ್ನ ಅನುದಾನ ಬಳಕೆ ಮಾಡುತ್ತಿದ್ದೇನೆ ಎಂದರು.  

ಕ್ಷೇತ್ರ  ಶಿಕ್ಷಣಾಧಿಕಾರಿ ಶ್ಯಾಮಸುಂದರ್ ಅಡಿಗ, ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ನಾಯ್ಕ, ದೈಹಿಕ ಶಿಕ್ಷಣಾಧಿಕಾರಿ ಪ್ರಭಾಕರ ಚಿಂದಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸಿ.ವಿ. ಅಡಿವೇರ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್‌.ವಿ ದೊಡ್ಡಮನಿ, ಪ್ರಕಾಶ ಕೊಕ್ಕನವರ, ಎಂ.ಡಿ. ದ್ಯಾಮಣ್ಣನವರ, ಎಸ್‌.ಕೆ. ಹೇಮಂತ, ರವಿ ಗೋಣೆಪ್ಪನವರ, ಮಾರುತಿ ಲಮಾಣಿ, ರಮೇಶ್ ಕೆಂಚರೆಡ್ಡಿ, ವಿಮಲಾ ಶಿಡಗನಹಾಳ ಸೇರಿದಂತೆ ಶಿಕ್ಷಕರು ಮತ್ತಿತರರು ಇದ್ದರು. 

ತಾಲೂಕಿನ 6 ವಲಯ ಶಾಲೆಯ 350 ಕ್ಕೂ ಅಧಿಕ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವೈಯಕ್ತಿಕ ಆಟ ಸೇರಿ  ಕಬಡ್ಡಿ, ವಾಲಿಬಾಲ್, ಖೋ..ಖೋ ಮತ್ತಿತರ ಗುಂಪು ಆಟಗಳನ್ನು ಆಯೋಜಿಸಲಾಗಿತ್ತು. 


ಸುದ್ದಿ ಓದಿ