ಇಂಡಿ ಜಿಲ್ಲೆ ಮಾಡಲು 371ಜೆ ಗಾಗಿ ಯಶವಂತರಾಯಗೌಡರು ರಾಜೀನಾಮೆ ಏಕೆ ಕೊಟ್ಟಿಲ್ಲ : ಅನಿಲ ಇಕ್ಕಡೆ
ಲೋಕದರ್ಶನ ವರದಿ
ವಿಜಯಪುರ 04 : ಸಚಿವ ಸ್ಥಾನ ಸಿಗದೆ ಇರುವುದಕ್ಕೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ರಾಜೀನಾಮೆ ಕೊಟ್ಟಿರುವುದು ಅವರ ವಯಕ್ತಿಕ ರಾಜಕೀಯ ಪ್ರತಿಷ್ಠೆಗಾಗಿ ಹೊರತು ಅಭಿವೃದ್ಧಿ ವಿಷಯಕ್ಕಾಗಿ ಅಲ್ಲ ಎಂದು ರೈತ ಭಾರತ ಪಕ್ಷದ ಜಿಲ್ಲಾಧ್ಯಕ್ಷ ಅನಿಲ ಇಕ್ಕಡೆ ಲೇವಡಿ ಮಾಡಿದ್ದಾರೆ. ಇಂಡಿ ಉಪ ವಿಭಾಗವನ್ನು ಜಿಲ್ಲೆ ಮಾಡುತ್ತೇನೆ ಹಾಗೂ 371 ಜೆ ಮೀಸಲಾತಿ ಕೊಡಿಸುತ್ತೇನೆ ಎಂದು ಹೋದಲ್ಲಿ ಬಂದಲ್ಲಿ ಹೇಳುವ ಶಾಸಕರು ಇಂಡಿ ಜಿಲ್ಲೆ ಮಾಡಲು ಮತ್ತು 371 ಜೆ ಮೀಸಲಾತಿ ಕೊಡಿಸಲು ಏಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಪ್ರಶ್ನೆ ಮಾಡಿರುವ ಅವರು ಅದಕ್ಕಾಗಿ ರಾಜೀನಾಮೆ ಕೊಟ್ಟಿದ್ದರೆ ಜಿಲ್ಲೆಯ ಜನ ತಮ್ಮನ್ನು ಒಪ್ಪಿಕೊಳ್ಳುತ್ತಿದ್ದರು ಎಂದು ಹೇಳಿದ ಅವರು ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುವ ತಂತ್ರ ಬಿಟ್ಟು ಕೂಡಲೇ ಇಂಡಿಯನ್ನು ಜಿಲ್ಲೆ ಮಾಡಿ 371 ಜೆ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲು ಒತ್ತಡ ಹಾಕಬೇಕು ಎಂದು ಆಗ್ರಹಿಸಿದ ಅವರು ಆ ಮೂಲಕ ಜನ ನೀಡಿದ ಅಧಿಕಾರದ ಋಣ ತೀರಿಸಬೇಕು ಎಂದು ಒತ್ತಾಯಿಸಿದ್ದಾರೆ.