ವಿಜ್ಞಾನ ಮತ್ತು ಪಾರಂಪರಿಕ ಜ್ಞಾನ ಕೈಜೋಡಿಸಿದಾಗಲೇ ಆಹಾರ ಭದ್ರತೆ ಸಾಧ್ಯ- ಡಾ. ಭೀಮನಗೌಡ ಪಾಟೀಲ್
ವಿಜಯಪುರ 17: ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಸಹಯೋಗದಲ್ಲಿ, ಈ ವರ್ಷದ ವಿಶ್ವ ಆಹಾರ ದಿನದ “ಋಟಿಠಚಿಣಜ ಖಿಠಚಿಥಿ. ಓಠಡಿ ಖಿಠಠಡಿಠ”ಎಂಬ ಆಶಯಕ್ಕೆ ಅನುಗುಣವಾಗಿ ಅಕ್ಟೋಬರ್ 16ರಂದು ವಿಶ್ವ ಆಹಾರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಭವಿಷ್ಯದ ಆಹಾರ ಭದ್ರತೆಗೆ ತಾವು ಹೇಗೆ ಕೊಡುಗೆ ನೀಡಬಹುದು ಎಂಬ ಕುರಿತು ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಪರಿಸರ ಸಂರಕ್ಷಣೆ ಹಾಗೂ ಆಹಾರ ಭದ್ರತೆಯ ಮಹತ್ವವನ್ನು ಸಾರುವ ಸಂಕೇತವಾಗಿ ಮರ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬಳ್ಳಾರಿಯ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ಡಾ. ಭೀಮನಗೌಡ ಎನ್. ಪಾಟೀಲ್ ಅವರು ಆಹಾರ ಭದ್ರತೆಯ ಮಹತ್ವವನ್ನು ವಿವರಿಸಿ, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಪಾರಂಪರಿಕ ಜ್ಞಾನವೂ ಕೈಜೋಡಿಸಬೇಕು ಎಂದು ತಿಳಿಸಿದರು.
ಕೃತಕ ಬುದ್ಧಿಮತ್ತೆ, ಬೀಜರಾಜದಂತಹ ಸಂಸ್ಥೆಗಳು ಹಾಗೂ ಇ-ಕೃಷಿ ಮತ್ತು ಮುಂತಾದ ತಂತ್ರಜ್ಞಾನಾಧಾರಿತ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು. ಸುಧಾರಿತ ಹಾಗೂ ರೋಗನಿರೋಧಕ ತಳಿಗಳ ಅಭಿವೃದ್ಧಿ ಕುರಿತು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಎಸ್. ರಾಜಮಾನ್ಯ ಅವರು ತಮ್ಮ ಭಾಷಣದಲ್ಲಿ ಪ್ರತಿಯೊಬ್ಬರಿಗೂ ಸುರಕ್ಷಿತ, ಪೌಷ್ಟಿಕ ಹಾಗೂ ಸಾಕಷ್ಟು ಆಹಾರ ದೊರೆಯುವಂತಾಗುವುದು ಆಹಾರ ಭದ್ರತೆಯ ಮೂಲ ಉದ್ದೇಶವಾಗಿದೆ.
ಆಹಾರ ಭದ್ರತೆ ಎಂದರೆ ಕೇವಲ ಆಹಾರ ಉತ್ಪಾದಿಸುವುದಲ್ಲ; ಲಭ್ಯವಿರುವ ಆಹಾರವನ್ನು ಸಮರ್ಕವಾಗಿ ಬಳಸುವುದು ಮತ್ತು ಭವಿಷ್ಯದ ಪೀಳಿಗೆಗೂ ಆಹಾರ ಲಭ್ಯವಾಗುವಂತೆ ನೋಡಿಕೊಳ್ಳುವುದಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಆಯೋಜಕರಾದ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಭಾರತಿ ಹಾಲು ಅವರು ಮಾತನಾಡಿ, “ಭವಿಷ್ಯದ ಪೀಳಿಗೆಗೆ ಆಹಾರ ಭದ್ರತೆಯನ್ನು ಖಚಿತಪಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ವಿಶೇಷವಾಗಿ ವಿಜ್ಞಾನ ವಿದ್ಯಾರ್ಥಿಗಳಾಗಿ, ಆಹಾರ ಉತ್ಪಾದನೆ, ಸಂರಕ್ಷಣೆ, ಪೌಷ್ಟಿಕತೆ ಮತ್ತು ಸುಸ್ಥಿರ ಕೃಷಿ ಕ್ಷೇತ್ರಗಳಲ್ಲಿ ಹೊಸ ಆಲೋಚನೆಗಳು ಹಾಗೂ ನವೀನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ” ಎಂದು ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಸಂಯೋಜಕರಾದ ಡಾ. ಅನಂತ ಸರವಂದಿ, ಡಾ. ಎಂ. ಆರ್. ಕೆಂಭಾವಿ, ಅಸಾದುಲ್ಲಾ, ರಶ್ಮಿ ರೊಟ್ಟಿ, ಆಸಿಫ್ ರೋಜಿಂದರ್, ಮಂಜುನಾಥ ಗಾಣಿಗೇರ್, ಶ್ವೇತಾ ಕಾಂತ, ಶಬಾನಾ ಅತ್ತಾರ್, ಪ್ರಿಯಾಂಕಾ ಜಮದೆ, ದೀಪಾ ಪಾಟೀಲ್, ಅರವಿಂದ ಪಾಟೀಲ್, ಲಕ್ಷ್ಮಿ ಹವಾಲ್ದಾರ್ ಉಪಸ್ಥಿತರಿದ್ದರು.