ವಿಜಯಪುರ

ಅಂಬಾಭವಾನಿ ದೇವಸ್ಥಾನದಲ್ಲಿ ಕಾತ್ಯಾಯನಿ ದೇವಿಯ ವಿಶೇಷ ಪೂಜಾಲಂಕಾರ

ಅಂಬಾಭವಾನಿ ದೇವಸ್ಥಾನದಲ್ಲಿ ಕಾತ್ಯಾಯನಿ ದೇವಿಯ ವಿಶೇಷ ಪೂಜಾಲಂಕಾರ

ಲೋಕದರ್ಶನ ವರದಿ 

ಕಲಕೇರಿ 16: ಗ್ರಾಮದ ಭವಾನಿ ದೇವಸ್ಥಾನದಲ್ಲಿ ಶರನ್‌ನವರಾತ್ರಿಯ ಪ್ರಯುಕ್ತ ದೇವಿಯ ಮೂರ್ತಿಗೆ ವಿಶೇಷ ಅಲಂಕಾರ ಮತ್ತು ಪೂಜೆಯನ್ನು ಹಮ್ಮಿಕೊಳ್ಳಲಾಯಿತು. ಈ ವೇಳೆ ಮಾತನಾಡಿದ ದೇವಿ ಉಪಾಸಕರಾದ ಮೋತಿಲಾಲ ಕುಲಕರ್ಣಿ ಅವರು ನವರಾತ್ರಿಯ ಆರನೇ ದಿನ ಕಾತ್ಯಾಯನಿ ದೇವಿಯನ್ನು ಪೂಜಿಸಲಾಗುತ್ತದೆ. ನಾಲ್ಕು ಕೈಗಳನ್ನು ಹೊಂದಿರುವ ದೇವಿಯು ಎರಡು ಕೈಗಳಲ್ಲಿ ಉದ್ದವಾದ ಖಡ್ಗ ಮತ್ತು ಕಮಲವನ್ನು ಹಿಡಿದಿರುತ್ತಾಳೆ.

ಮತ್ತೊಂದು ಕೈಯಿಂದ ಆಶೀರ್ವದಿಸಿ, ಇನ್ನೊಂದು ಕೈಯಿಂದ ಭಕ್ತರನ್ನು ರಕ್ಷಿಸುತ್ತಾಳೆ. ಪುರಾಣಗಳ ಪ್ರಕಾರ, ‘ಕಟ್‌’ ಎಂಬ ಋಷಿಗೆ ‘ಕಾತ್ಯ’ ಎಂಬ ಪುತ್ರನಿದ್ದನು. ಅವರ ವಂಶದಲ್ಲಿ ಬಳಿಕ ಕಾತ್ಯಾಯನ ಎಂಬ ಋಷಿ ಜನಿಸಿದನು. ಸಂತಾನವಿಲ್ಲದ ಕಾತ್ಯಾಯನ ಋಷಿಯು ಮಗುವನ್ನು ಪಡೆಯುವ ಬಯಕೆಯಿಂದ ಕಠಿಣ ತಪಸ್ಸು ಮಾಡಿ ದೇವತೆಗಳನ್ನು ಪ್ರಾರ್ಥಿಸಿದನು. 

ಇದೇ ವೇಳೆ ಮಹಿಷಾಸುರನು ದೇವತೆಗಳಿಗೆ ತೀವ್ರ ತೊಂದರೆ ನೀಡುತ್ತಿದ್ದನು. ಆತನನ್ನು ಸಂಹರಿಸುವ ಮಾರ್ಗವನ್ನು ಕಂಡುಕೊಳ್ಳಲು ದೇವತೆಗಳು ವಿಷ್ಣುವಿನ ಮೊರೆ ಹೋದರು. ವಿಷ್ಣುವಿನ ಸೂಚನೆಯಂತೆ ಶಿವ ಮತ್ತು ಬ್ರಹ್ಮನೂ ಈ ಪ್ರಯತ್ನಕ್ಕೆ ಕೈಜೋಡಿಸಿದರು. ಮೂವರಿಂದ ಹೊರಹೊಮ್ಮಿದ ಅಗ್ನಿಜ್ವಾಲೆಗಳು ಕಾತ್ಯಾಯನಿ ದೇವಿಯ ರೂಪವನ್ನು ಪಡೆದವು. ದುರ್ಗಾದೇವಿಯ ಅವತಾರವಾದ ಆಕೆ ಕಾತ್ಯಾಯನ ಋಷಿಯ ಪುತ್ರಿಯಾಗಿ ಜನಿಸಿದ ಕಾರಣ ಕಾತ್ಯಾಯನಿ ಎಂಬ ಹೆಸರು ಪಡೆದಳು ಎನ್ನುವ ವಿಚಾರಗಳನ್ನು ಪುರಾಣಗಳಿಂದ ತಿಳಿಯುತ್ತೇವೆ ಎಂದು ಅವರು ಹೇಳಿದರು. 


ಸುದ್ದಿ ಓದಿ