ವಿಜಯಪುರ

ವಿಕಲಚೇತನರು, ಹಿರಿಯ ನಾಗರಿಕರ ಬೇಡಿಕೆ ಈಡೇರಿಸಲು ಆಗ್ರಹ

ವಿಕಲಚೇತನರು, ಹಿರಿಯ ನಾಗರಿಕರ ಬೇಡಿಕೆ ಈಡೇರಿಸಲು ಆಗ್ರಹ


 ಕೊಲ್ಹಾರ 15:  ವಿಕಲಚೇತನರು ಹಾಗೂ ಹಿರಿಯ ನಾಗರಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ತಾಲ್ಲೂಕು ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘ (ರಿ.) ಕೊಲ್ಹಾರ ವತಿಯಿಂದ ಬುಧವಾರ ತಾಲ್ಲೂಕು ದಂಡಾಧಿಕಾರಿ ಸಂತೋಷ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು.ಸಂಘದ ಸದಸ್ಯ ಎಸ್‌.ಬಿ. ದಿಂದಾರ ಮಾತನಾಡಿ, ಕೊಲ್ಹಾರ ತಾಲ್ಲೂಕು ವ್ಯಾಪ್ತಿಯಲ್ಲಿ ಸಾವಿರಾರು ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಗ್ರಾಮ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಅವರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಇದರಿಂದ ಅರ್ಹ ಫಲಾನುಭವಿಗಳು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಪರದಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುತ್ತಿದ್ದ ಪಿಂಚಣಿ ಕಳೆದ ಏಳು ತಿಂಗಳಿಂದ ಸ್ಥಗಿತಗೊಂಡಿದ್ದು, ಪಿಂಚಣಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೀಗಾಗಿ ಬಾಕಿ ಇರುವ ಪಿಂಚಣಿ ಬಿಡುಗಡೆ ಮಾಡಿ, ಪಿಂಚಣಿ ಸೌಲಭ್ಯವನ್ನು ತಕ್ಷಣ ಮರುಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ಪ್ರಮುಖ ಬೇಡಿಕೆಗಳೇನು?ತಾಲ್ಲೂಕು ಮಟ್ಟದಲ್ಲಿ ವಿಕಲಚೇತನರ ಕುಂದುಕೊರತೆ ಸಭೆ ತಕ್ಷಣ ನಡೆಸಬೇಕು. ತಾಲ್ಲೂಕಿನ ಎಲ್ಲ ಸರ್ಕಾರಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳಲ್ಲಿ ವಿಕಲಚೇತನರ ಅನುಕೂಲಕ್ಕಾಗಿ ರ್ಯಾಂಪ್ಗಳನ್ನು ನಿರ್ಮಿಸಬೇಕು. ವಿವಿಧ ಯೋಜನೆಗಳಡಿ ಮಾಶಾಸನ ಪಡೆಯುತ್ತಿರುವ 65 ವರ್ಷ ದಾಟಿದ ಅರ್ಹ ಫಲಾನುಭವಿಗಳಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ?1,200 ಪಿಂಚಣಿ ಮಂಜೂರು ಮಾಡಬೇಕು.

ಹಿರಿಯ ನಾಗರಿಕರ ಸಮಸ್ಯೆಗಳನ್ನು ಆಲಿಸಲು ಪ್ರತ್ಯೇಕ ಕುಂದುಕೊರತೆ ಸಭೆ ನಡೆಸಿ, ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನಿಯಾಜ ಮಕಾನದಾರ, ಕಾರ್ಯದರ್ಶಿ ಗುಲಾಬ ಶಿರೂರ, ಸುಲೇಮಾನ ದಿಂದಾರ, ದಾದಾಪೀರ ಖಾಟಿಕ, ಶಿವಲೀಲಾ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ, ಸಮೀರ ಗಿರಗಾಂವಿ, ಅಯೂಬ ದಿಂದಾರ, ಲಾಲಸಾಬ ಅತ್ತಾರ, ಮಹಮ್ಮದ್ ಕಮತಗಿ ಹಾಗೂ ರಫೀಕ್ ಹವಾಲದಾರ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ