ವಿಜಯಪುರ

ಎಲ್ಲ ಧರ್ಮಗಳೂ ಮಾನವನ ಏಳಿಗೆಯನ್ನೇ ಬಯಸುತ್ತವೆ ಸ್ವಾಮಿ ನರೇಶಾನಂದ

ಎಲ್ಲ ಧರ್ಮಗಳೂ ಮಾನವನ ಏಳಿಗೆಯನ್ನೇ ಬಯಸುತ್ತವೆ ಸ್ವಾಮಿ ನರೇಶಾನಂದ


ವಿಜಯಪುರ 15: ಜೀವನದಲ್ಲಿ ಸಾಧನೆ ಮಾಡಲು ಮೇಲು ಕೀಳು ಎಂಬ ಭೇದಭಾವಗಳನ್ನು ತೊರೆದು ಏಕತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಬೇಕು. ಸ್ವಾಮಿ ವಿವೇಕಾನಂದರ ಚಿಂತನೆ ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ವಿಜಯಪುರದ ಸ್ವಾಮಿ ವಿವೇಕಾನಂದ ಆಶ್ರಮದ ಸ್ವಾಮಿ ನರೇಶಾನಂದ ಹೇಳಿದರು.

ನಗರದ ಸಿಕ್ಯಾಬ್ ಎ.ಆರ್‌.ಎಸ್‌. ಇನಾಮದಾರ ಮಹಿಳಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲ ಧರ್ಮಗಳ ಉದ್ದೇಶವೂ ಮಾನವನ ಏಳಿಗೆ ಮತ್ತು ಒಳಿತನ್ನು ಬಯಸುವುದಾಗಿದೆ ಎಂಬ ಸಂದೇಶವನ್ನು ಸ್ವಾಮಿ ವಿವೇಕಾನಂದರು ಸಾರಿದ್ದಾರೆ.

ಧರ್ಮದ ಹೆಸರಿನಲ್ಲಿ ಭೇದಭಾವ ಬೆಳೆಸುವ ಬದಲು ಪರಸ್ಪರ ಗೌರವ, ಏಕತೆ ಹಾಗೂ ಸಹಬಾಳ್ವೆಯ ಮನೋಭಾವದಿಂದ ಬದುಕಬೇಕು. ವಿದ್ಯಾರ್ಥಿನಿಯರು ವಿವೇಕಾನಂದರ ಆದರ್ಶಗಳಿಂದ ಪ್ರೇರಣೆ ಪಡೆದು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರೊಂದಿಗೆ ಸಮಾಜದ ಅಭಿವೃದ್ಧಿಗೂ ಕೊಡುಗೆ ನೀಡಬೇಕು ಎಂದು ಅವರು ಹೇಳಿದರು.

ದೇಶದ ಸ್ವಾತಂತ್ರ್ಯವನ್ನು ಉಳಿಸಿ, ಮತ್ತಷ್ಟು ಬಲಪಡಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ದೇಶದ ಏಕತೆ, ಸಾಮಾಜಿಕ ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳನ್ನು ಕಾಪಾಡುವ ಮೂಲಕ ಎಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ಬದುಕಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರಾದ ನುಮತುಲೈನ್ ಇನಾಮದಾರ್ ಹಾಗೂ ಹುದಾ ಇನಾಮದಾರ್ ಅವರು ಕುರಾನ್ ಪಠಣ ಮಾಡಿದರು. ಪೃಥ್ವಿ ಸೊರಡಿ ಹಾಗೂ ವಿದ್ಯಾ ಕೊಕಟ್ನೂರು ಭಗವದ್ಗೀತೆ ಪಠಣ ಮಾಡಿದರು. ಲಕ್ಷ್ಮೀ ಬಿರಾದಾರ್ ಹಾಗೂ ಅಭಿನಯ ತೊಲೆ ಅವರು ಬಸವೇಶ್ವರರ ವಚನಗಳನ್ನು ವಾಚಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಮೇತ್ರಿ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಪ್ರೊ. ಶಬಿನಾ ಪಟೇಲ್ ಕಾರ್ಯಕ್ರಮ ನಿರೂಪಿಸಿದರು. ಡಾ. ಸಮೀಯುದ್ದೀನ್ ವಂದನಾರೆ​‍್ಣ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ  ಎಸ್‌.ಎಸ್‌. ಪುಣೇಕರ್ ಅವರು ಸ್ವಾಮಿ ನರೇಶಾನಂದ ಅವರನ್ನು ಫಲಪುಷ್ಪ ನೀಡಿ ಗೌರವಿಸಿದರು.

ಡಾ. ಎಚ್‌.ಕೆ. ಯಡಹಳ್ಳಿ, ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ. ಸೈಯದ್ ಅಬ್ಬಾಸ್ ಅಲಿ, ಮಹಿಳಾ ಮಹಾವಿದ್ಯಾಲಯದ ಉಪಪ್ರಾಚಾರ್ಯೆ ಡಾ. ಹಾಜಿರಾ ಫರವಿನ್, ವಿವಿಧ ಶಾಲಾ ಕಾಲೇಜುಗಳ ಪ್ರಾಚಾರ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. 


ಸುದ್ದಿ ಓದಿ