ದೆಹಲಿ ಪೊಲೀಸರಿಂದ ಜಂತರ್ ಮಂತರನಲ್ಲಿ ಪ್ರತಿಭಟನೆಗೆ ನಿರ್ಬಂಧ: ಎಐಡಿಎಸ್‌ಓ ತೀವ್ರ ಖಂಡನೆ
ವಿಜಯನಗರ 13: ದೆಹಲಿ ಪೊಲೀಸರು ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ದೆಹಲಿ ಪೊಲೀಸರನ್ನು ಬಳಸಿಕೊಂಡು ಕೇಂದ್ರ ಮೋದಿ ಹಾಗೂ ಅಮಿತ್ ಶಾ ನೇತೃತ್ವದ ಬಿಜೆಪಿ ಸರ್ಕಾರವು ತಮ್ಮ ಮನಸೋಇಚ್ಛೆ ಪ್ರಜಾತಾಂತ್ರಿಕ ಹಕ್ಕುಗಳ ಹರಣ ನಡೆಸುತ್ತಿದೆ.
ಈಗಾಗಲೇ ಎಸ್‌ಐಆರ್ ವಿರುದ್ಧದ ಹೋರಾಟವನ್ನು ತಡೆಯಲು ರಾಷ್ಟ್ರದ ರಾಜಧಾನಿ ದೆಹಲಿಯನ್ನೇ ತೆರೆದ ಸೆರೆಮನೆಯಾಗಿ ಮಾಡಲಾಗಿದೆ. ಅಕ್ಟೋಬರ್ 10ರಿಂದಲೂ, ಜಂತರ್ ಮಂತರ್ ಗೆ ಬರಲು ಯತ್ನಿಸುತ್ತಿರುವ ಹೋರಾಟಗಾರರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಈಗಾಗಲೇ ಪ್ರಜಾತಂತ್ರದ ಹಕ್ಕುಗಳ ಕಗ್ಗೊಲೆ ಮಾಡುತ್ತಿರುವ ಸರ್ಕಾರವು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜಂತರ್ ಮಂತರ್ ನಲ್ಲಿ ಪ್ರತಿಭಟಿಸುವುದಕ್ಕೆ ನಿಬಂಧ ಹೇರಿದೆ. ಜನ ಚಳುವಳಿಗಳಿಗೆ ಹೆದರಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರ ಈ ಅಪ್ರಜಾತಂತ್ರಿಕ ಹಾಗೂ ಸರ್ವಾಧಿಕಾರಿ ನಡೆಯನ್ನು ಎಐಡಿಎಸ್‌ಓ ತೀವ್ರವಾಗಿ ಖಂಡಿಸುತ್ತದೆ. ರಾಷ್ಟ್ರದ ಜನತೆ ಹಾಗೂ ವಿದ್ಯಾರ್ಥಿಗಳು ಹೋರಾಟದ ಹಕ್ಕಿನ ಮೇಲಿನ ಈ ದಾಳಿಯ ವಿರುದ್ಧ ಪ್ರಬಲ ಹೋರಾಟವನ್ನು ನಡೆಸಲು ಎಐಡಿಎಸ್‌ಓ ಕರೆ ನೀಡುತ್ತದೆ.