ತಂತ್ರಜ್ಞಾನ

ಗ್ರಾಹಕರ ವಿಶ್ವಾಸದ ಕೊರತೆಯ ನಡುವೆಯೂ ಭಾರತದ ಡಿಜಿಟಲ್ ಕ್ರೆಡಿಟ್ ಮಾರುಕಟ್ಟೆಯ ಬೆಳವಣಿಗೆಯತ್ತ ಪೇಮೆಂಟ್ ಆ್ಯಪ್‌ಗಳ ಚಿತ್ತ

ಗ್ರಾಹಕರ ವಿಶ್ವಾಸದ ಕೊರತೆಯ ನಡುವೆಯೂ ಭಾರತದ ಡಿಜಿಟಲ್ ಕ್ರೆಡಿಟ್ ಮಾರುಕಟ್ಟೆಯ ಬೆಳವಣಿಗೆಯತ್ತ ಪೇಮೆಂಟ್ ಆ್ಯಪ್‌ಗಳ ಚಿತ್ತ

ಬೆಂಗಳೂರು, ಅ. 13 (ಯುಎನ್‌ಐ): ಭಾರತದ ಡಿಜಿಟಲ್ ಹಣಕಾಸು ಉದ್ಯಮವು ತನ್ನ ಮುಂದಿನ ಹಂತದ ಬೆಳವಣಿಗೆಗಾಗಿ ಪಾವತಿ ಸೇವೆಗಳನ್ನು ಮೀರಿ ಡಿಜಿಟಲ್ ಸಾಲ ಕ್ಷೇತ್ರದತ್ತ ಗಮನ ಹರಿಸುತ್ತಿದೆ. ಆದರೆ, ಗ್ರಾಹಕರಲ್ಲಿ ವಿಶ್ವಾಸದ ಕೊರತೆ ಮುಂದುವರಿದಿರುವುದರಿಂದ ಡಿಜಿಟಲ್ ಸಾಲದ ಬಳಕೆಯನ್ನು ಹೆಚ್ಚಿಸುವುದು ಸವಾಲಾಗಿ ಪರಿಣಮಿಸಿದೆ ಎಂದು ಪಹ್ಲೆ ಇಂಡಿಯಾ ಫೌಂಡೇಶನ್ ಮತ್ತು ಅಮೆಜಾನ್ ಪೇ ಸಹಯೋಗದಲ್ಲಿ ಸಿದ್ಧಪಡಿಸಿರುವ ವರದಿ ತಿಳಿಸಿದೆ.

ಹೌ ಅರ್ಬನ್ ಇಂಡಿಯಾ ಪೇಸ್ 2026 (How Urban India Pays 2026) ವರದಿಯ ಪ್ರಕಾರ, ನಗರ ಪ್ರದೇಶಗಳ ಶೇ. 88ರಷ್ಟು ಗ್ರಾಹಕರಿಗೆ ಡಿಜಿಟಲ್ ಸಾಲದ ಬಗ್ಗೆ ಅರಿವಿದ್ದರೂ, ಕೇವಲ ಶೇ. 31ರಷ್ಟು ಮಂದಿ ಮಾತ್ರ ಅದನ್ನು ಬಳಸಿದ್ದಾರೆ. ಇದೇ ವೇಳೆ, ಶೇ. 75ರಷ್ಟು ಗ್ರಾಹಕರು ತಾವು ಹೆಚ್ಚಾಗಿ ಬಳಸುವ ಪಾವತಿ ಆ್ಯಪ್‌ಗಳ ಮೂಲಕ ಕನಿಷ್ಠ ಒಂದು ಹಣಕಾಸು ಉತ್ಪನ್ನವನ್ನು ಪಡೆದುಕೊಂಡಿದ್ದಾರೆ. ಇದು ಡಿಜಿಟಲ್ ವೇದಿಕೆಗಳ ಮೂಲಕ ವಿವಿಧ ಹಣಕಾಸು ಸೇವೆಗಳನ್ನು ವಿಸ್ತರಿಸಲು ಇರುವ ಅವಕಾಶವನ್ನು ಸೂಚಿಸುತ್ತದೆ.

ಡಿಜಿಟಲ್ ಪಾವತಿಗಳ ಬಗ್ಗೆ ಗ್ರಾಹಕರಿಗಿರುವ ವಿಶ್ವಾಸಕ್ಕೂ ಆ್ಯಪ್‌ಗಳ ಮೂಲಕ ಸಾಲ ಪಡೆಯುವ ವಿಚಾರದಲ್ಲಿರುವ ವಿಶ್ವಾಸಕ್ಕೂ ಗಮನಾರ್ಹ ಅಂತರವಿದೆ ಎಂದು ವರದಿ ತಿಳಿಸಿದೆ. ಪಾವತಿಗಳಿಗಾಗಿ ಗ್ರಾಹಕರು ಪೇಮೆಂಟ್ ಆ್ಯಪ್‌ಗಳಿಗೆ ಐದರಲ್ಲಿ 3.98 ಅಂಕಗಳನ್ನು ಹಾಗೂ ಭದ್ರತೆಗೆ 4.10 ಅಂಕಗಳನ್ನು ನೀಡಿದ್ದಾರೆ. ಆದರೆ, ಇದೇ ಆ್ಯಪ್‌ಗಳು ಸಾಲ ಸೌಲಭ್ಯ ನೀಡುವಾಗ ವಿಶ್ವಾಸದ ಮಟ್ಟ 3.10 ಅಂಕಗಳಿಗೆ ಇಳಿದಿದೆ.

ಅನಧಿಕೃತ ವಹಿವಾಟುಗಳಿಂದ ರಕ್ಷಣೆ ಖಚಿತಪಡಿಸಿದರೆ ಆ್ಯಪ್‌ಗಳ ಮೂಲಕ ಸಾಲ ಪಡೆಯಲು ಸಿದ್ಧರಿರುವುದಾಗಿ ಶೇ. 51.5ರಷ್ಟು ಮಂದಿ ಹೇಳಿದ್ದಾರೆ. ಆದರೆ, ಶೇ. 16.7ರಷ್ಟು ಮಂದಿ ಭದ್ರತೆಯ ಭರವಸೆ ನೀಡಿದರೂ ಸಾಲ ಪಡೆಯಲು ನಿರಾಕರಿಸುವುದಾಗಿ ತಿಳಿಸಿದ್ದಾರೆ. ಇದರಿಂದ ಕೇವಲ ಭದ್ರತೆಯ ಭರವಸೆಯೊಂದೇ ಡಿಜಿಟಲ್ ಸಾಲದ ಬಳಕೆಯನ್ನು ಹೆಚ್ಚಿಸಲು ಸಾಕಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

ಡಿಜಿಟಲ್ ಕ್ರೆಡಿಟ್ ಇನ್‌ಕ್ಲೂಷನ್ ಇಂಡೆಕ್ಸ್ 100ರಲ್ಲಿ 55.85 ಅಂಕಗಳನ್ನು ದಾಖಲಿಸಿದ್ದು, ಭಾರತವು 'ಉದಯೋನ್ಮುಖ ಮತ್ತು ಸೇವೆ ಪಡೆಯುತ್ತಿರುವ' (Emerging and Served) ವಿಭಾಗದಲ್ಲಿದೆ. ಸಾಲದ ಲಭ್ಯತೆ 61.24 ಅಂಕಗಳನ್ನು ಹಾಗೂ ಬಳಕೆ 57.17 ಅಂಕಗಳನ್ನು ಪಡೆದಿದ್ದರೆ, ಸಾಲದ ಪರಿಣಾಮದ ಸೂಚ್ಯಂಕ ಕೇವಲ 49.16 ಅಂಕಗಳನ್ನು ದಾಖಲಿಸಿದೆ. ಡಿಜಿಟಲ್ ಸಾಲದ ಲಭ್ಯತೆ ಹೆಚ್ಚಿದ್ದರೂ, ಅದರ ಪ್ರಯೋಜನಗಳು ಗ್ರಾಹಕರಿಗೆ ಸಂಪೂರ್ಣವಾಗಿ ತಲುಪಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.

ಸಣ್ಣ ನಗರಗಳು ಡಿಜಿಟಲ್ ಸಾಲ ಮಾರುಕಟ್ಟೆಯ ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ. ಎರಡನೇ ಹಂತದ ನಗರಗಳು (ಟೈರ್-2) 58.64 ಅಂಕಗಳನ್ನು ದಾಖಲಿಸಿದ್ದು, ಮೂರನೇ ಹಂತದ ನಗರಗಳ (ಟೈರ್-3) 55.77 ಅಂಕಗಳು ಮತ್ತು ಮಹಾನಗರಗಳ 53.10 ಅಂಕಗಳಿಗಿಂತ ಮುಂದಿವೆ. ಟೈರ್-2 ನಗರಗಳಲ್ಲಿ ಈಗ ಖರೀದಿಸಿ, ನಂತರ ಪಾವತಿಸುವ (Buy Now, Pay Later- BNPL) ಸೌಲಭ್ಯದ ಬಳಕೆ ಶೇ. 60ರಷ್ಟಿದೆ. ಅಲ್ಲದೆ, ಶೇ. 41ರಷ್ಟು ಪ್ರತಿಕ್ರಿಯಿಸಿದವರು ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ವಿವಿಧ ಉದ್ಯೋಗ ವಲಯಗಳ ನಡುವೆ ಡಿಜಿಟಲ್ ಸಾಲದ ಲಭ್ಯತೆಯಲ್ಲಿ ಅಸಮಾನತೆ ಇರುವುದನ್ನೂ ವರದಿ ಗುರುತಿಸಿದೆ. ಗಿಗ್ ಕಾರ್ಮಿಕರು, ದಿನಗೂಲಿ ನೌಕರರು, ಗೃಹಿಣಿಯರು, ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳು ಸೇರಿದಂತೆ ಅನೌಪಚಾರಿಕ ಆದಾಯ ಹೊಂದಿರುವವರು, ವೇತನ ಪಡೆಯುವ ಉದ್ಯೋಗಿಗಳು ಹಾಗೂ ಉದ್ಯಮಿಗಳಿಗೆ ಹೋಲಿಸಿದರೆ ಸೂಚ್ಯಂಕದಲ್ಲಿ ಸುಮಾರು 11 ಅಂಕಗಳಷ್ಟು ಹಿಂದುಳಿದಿದ್ದಾರೆ.

ಗಿಗ್ ಕಾರ್ಮಿಕರಲ್ಲಿ ಶೇ. 67.5ರಷ್ಟು ಮಂದಿ ಯುಪಿಐ ಲೈಟ್ ಅನ್ನು ನಿಯಮಿತವಾಗಿ ಬಳಸುತ್ತಿದ್ದಾರೆ. ಹಣದ ತುರ್ತು ಅಗತ್ಯ ಎದುರಾದಾಗ ಮೊದಲು ಡಿಜಿಟಲ್ ಸಾಲದ ಆ್ಯಪ್‌ಗಳ ಮೊರೆ ಹೋಗುವುದಾಗಿ ಶೇ. 23ರಷ್ಟು ಮಂದಿ ಹೇಳಿದ್ದಾರೆ. ಡಿಜಿಟಲ್ ಸಾಲದಿಂದ ತಮ್ಮ ಆರ್ಥಿಕ ಸ್ವಾವಲಂಬನೆ ಹೆಚ್ಚಾಗಿದೆ ಎಂದು ಶೇ. 43ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.

"ಒಂದು ದಶಕಕ್ಕಿಂತಲೂ ಕಡಿಮೆ ಅವಧಿಯಲ್ಲಿ ಡಿಜಿಟಲ್ ಪಾವತಿಗಳು ಹೊಸತನದ ಹಂತದಿಂದ ಜನರ ದೈನಂದಿನ ಅಭ್ಯಾಸವಾಗಿ ಬದಲಾಗಿವೆ," ಎಂದು ಪಹ್ಲೆ ಇಂಡಿಯಾ ಫೌಂಡೇಶನ್ ಅಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ. ಮುಂದಿನ ಹಂತದ ಬೆಳವಣಿಗೆಗೆ ಹೆಚ್ಚಿನ ಪಾರದರ್ಶಕತೆ, ಬಲಿಷ್ಠ ಸೈಬರ್ ಭದ್ರತೆ ಮತ್ತು ಅನೌಪಚಾರಿಕ ಆದಾಯವನ್ನೂ ಪರಿಗಣಿಸುವ ಸಾಲ ವ್ಯವಸ್ಥೆಗಳು ಅಗತ್ಯವಿವೆ ಎಂದು ಅವರು ತಿಳಿಸಿದ್ದಾರೆ.

ಅಮೆಜಾನ್ ಪೇ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಬನ್ಸಾಲ್ ಮಾತನಾಡಿ, ಗ್ರಾಹಕರು ತಮ್ಮ ಖರ್ಚುಗಳನ್ನು ನಿರ್ವಹಿಸಲು ಮತ್ತು ತಮ್ಮ ಆಶಯಗಳಿಗೆ ಅನುಗುಣವಾದ ಖರೀದಿಗಳನ್ನು ಮಾಡಲು ಈಗ 'ಈಗ ಖರೀದಿಸಿ, ನಂತರ ಪಾವತಿಸಿ' (BNPL) ಹಾಗೂ ಸಮಾನ ಮಾಸಿಕ ಕಂತುಗಳ (EMI) ಆಯ್ಕೆಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಪಾವತಿ, ಹೂಡಿಕೆ, ವಿಮೆ ಮತ್ತು ಸಾಲ ಸೌಲಭ್ಯಗಳನ್ನು ಒಂದೇ ಆ್ಯಪ್‌ನಲ್ಲಿ ಪಡೆಯಲು ಶೇ. 52ರಷ್ಟು ಗ್ರಾಹಕರು ಆದ್ಯತೆ ನೀಡಿರುವುದಾಗಿ ವರದಿ ತಿಳಿಸಿದೆ. ಮತ್ತೊಂದು ಶೇ. 33ರಷ್ಟು ಮಂದಿ, ಇಂತಹ ಸಮಗ್ರ ಆ್ಯಪ್‌ಗಳು ಪ್ರತ್ಯೇಕ ಸೇವೆಗಳನ್ನು ಒದಗಿಸುವ ವೇದಿಕೆಗಳಿಗೆ ಸಮಾನವಾದ ಸೇವೆಗಳನ್ನು ನೀಡಿದರೆ ಅವುಗಳನ್ನು ಬಳಸಲು ಪರಿಗಣಿಸುವುದಾಗಿ ಹೇಳಿದ್ದಾರೆ.

ಹಬ್ಬದ ಋತುವಿನಲ್ಲಿಯೂ ಗ್ರಾಹಕರ ಖರ್ಚು ಹೆಚ್ಚಾಗಿರುವುದು ವರದಿಯಲ್ಲಿ ಕಂಡುಬಂದಿದೆ. ಶೇ. 77ರಷ್ಟು ಮಂದಿ ಹಬ್ಬದ ಸಂದರ್ಭದಲ್ಲಿ ತಮ್ಮ ಖರ್ಚು ಕನಿಷ್ಠ ಶೇ. 50ರಷ್ಟು ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.

ವ್ಯಾಪಾರಿಗಳ ಪೈಕಿ ಶೇ. 79.5ರಷ್ಟು ಮಂದಿ ಡಿಜಿಟಲ್ ಪಾವತಿಗಳಿಂದ ಕಾರ್ಯಕ್ಷಮತೆ ಅಥವಾ ಮಾರಾಟದಲ್ಲಿ ಸುಧಾರಣೆ ಕಂಡಿರುವುದಾಗಿ ಹೇಳಿದ್ದಾರೆ. ಆದಾಗ್ಯೂ, ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಹಿಂಜರಿಯುತ್ತಿರುವ ವ್ಯಾಪಾರಿಗಳಿಗೆ ಹಣದ ಪಾವತಿ ವಿಲೇವಾರಿಯಲ್ಲಿನ ವಿಳಂಬ ಪ್ರಮುಖ ಕಳವಳವಾಗಿ ಉಳಿದಿದೆ.

ಒಟ್ಟಾರೆಯಾಗಿ, ಡಿಜಿಟಲ್ ಪಾವತಿ ವೇದಿಕೆಗಳಿಗೆ ಸಾಲ ಸೇವೆಗಳನ್ನು ವಿಸ್ತರಿಸಲು ಉತ್ತಮ ಅವಕಾಶಗಳಿವೆ ಎಂಬುದನ್ನು ವರದಿ ಎತ್ತಿ ತೋರಿಸಿದೆ. ಆದರೆ, ಈ ಬೆಳವಣಿಗೆಯನ್ನು ಸಾಕಾರಗೊಳಿಸಲು ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುವುದು, ಸಾಲದ ಲಭ್ಯತೆಯನ್ನು ಸುಧಾರಿಸುವುದು ಮತ್ತು ಡಿಜಿಟಲ್ ಸಾಲದಿಂದ ಜನರಿಗೆ ನೈಜ ಆರ್ಥಿಕ ಪ್ರಯೋಜನಗಳು ದೊರೆಯುವಂತೆ ಮಾಡುವುದು ಅತ್ಯಗತ್ಯವಾಗಿದೆ.

ಸುದ್ದಿ ಓದಿ