ಕಾನೂನು ಬಾಹಿರ ಸಮಿತಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು : ಕೆ. ಮೋಹನ್ ಎಚ್ಚರಿಕೆ
ಬಳ್ಳಾರಿ, ಅ.15: ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಪದಾಧಿಕಾರಿಗಳ ಆಯ್ಕೆ ಹಾಗೂ ಸಂಘದ ಆಡಳಿತ ಮಂಡಳಿಯ ಅಧಿಕಾರಕ್ಕೆ ಸಂಬಂಧಿಸಿದ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಕಾನೂನುಬದ್ಧವಾಗಿ ಆಯ್ಕೆಯಾದ ಸಮಿತಿಯ ಹೊರತಾಗಿ ಸ್ವಯಂ ಘೋಷಿಸಿಕೊಂಡಿರುವ ಮತ್ತೊಂದು ಸಮಿತಿಯ ಕಾರ್ಯಚಟುವಟಿಕೆಗಳ ವಿರುದ್ಧ ಸೂಕ್ತ ಸಿವಿಲ್ ಮತ್ತು ಕ್ರಿಮಿನಲ್ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಮೋಹನ್ ಎಚ್ಚರಿಸಿದ್ದಾರೆ.
ನಗರದ ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಬೈಲಾ ನಿಯಮಗಳ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ಆಡಳಿತ ಮಂಡಳಿಯ 31 ನಿರ್ದೇಶಕರನ್ನು ಚುನಾಯಿಸಬೇಕು. ಬಳಿಕ ಚುನಾಯಿತ ನಿರ್ದೇಶಕರ ಮೂಲಕ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕು.
ಈ ನಿಯಮಗಳ ಅನ್ವಯ 2023ರ ಅ.29ರಂದು ನಿರ್ದೇಶಕರ ಚುನಾವಣೆ ನಡೆದಿದ್ದು, ನ.8ರಂದು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿತ್ತು ಎಂದು ತಿಳಿಸಿದರು. ಅಂದು ನಡೆದ ಚುನಾವಣೆಯಲ್ಲಿ ಡಾ. ಪಿ.ಎಲ್. ಗಾದಿಲಿಂಗನಗೌಡ ಅಧ್ಯಕ್ಷರಾಗಿ, ಕೆ. ಮೋಹನ್ ಪ್ರಧಾನ ಕಾರ್ಯದರ್ಶಿಯಾಗಿ, ಕೆ.ಎಚ್. ಕಾಮರಾಜ ಖಜಾಂಚಿಯಾಗಿ, ಕೆ. ನಾಗರಾಜ ಉಪಾಧ್ಯಕ್ಷರಾಗಿ, ಕೆ.ಬಿ. ಅಂಜಿನಿ ಸಂಘಟನಾ ಕಾರ್ಯದರ್ಶಿಯಾಗಿ ಹಾಗೂ ಕೆ.ಆರ್. ಪಂಪಾಪತಿ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು.
ಆದರೆ, ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಬೈಲಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿತ್ತು ಎಂದು ವಿವರಿಸಿದರು.
2023ರ ಚುನಾವಣೆಯಲ್ಲಿ ಸೋಲನುಭವಿಸಿದ ಕೆಲವು ಅಭ್ಯರ್ಥಿಗಳು ಹಾಗೂ ನಿರ್ದೇಶಕರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಶಾಮೀಲಾಗಿ, 2025ರ ಮಾ.3ರಂದು ಕಾನೂನುಬದ್ಧವಾಗಿ ಆಯ್ಕೆಯಾಗಿದ್ದ ಪದಾಧಿಕಾರಿಗಳ ಸಮಿತಿಯನ್ನು ವಜಾಗೊಳಿಸುವ ಆದೇಶ ಹೊರಡಿಸುವಂತೆ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಕೆ. ಮೋಹನ್ ಮಾಡಿದರು.
ಅಲ್ಲದೆ, ಈ ಹಿಂದೆ ಚುನಾವಣೆಯಲ್ಲಿ ಸೋತಿದ್ದವರನ್ನು ಪದಾಧಿಕಾರಿಗಳಾಗಿ ನೇಮಕ ಮಾಡಿರುವುದು ಕಾನೂನುಬಾಹಿರವಾಗಿದೆ ಎಂದು ದೂರಿದರು.ಈ ಆದೇಶವನ್ನು ಪ್ರಶ್ನಿಸಿ ಅಧ್ಯಕ್ಷ ಡಾ. ಪಿ.ಎಲ್. ಗಾದಿಲಿಂಗನಗೌಡ ಅವರ ಹೆಸರಿನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠದಲ್ಲಿ ರಿಟ್ ಅರ್ಜಿ ಸಂಖ್ಯೆ 102803/2025 ಸಲ್ಲಿಸಲಾಗಿತ್ತು. ನ್ಯಾಯಾಲಯವು ವಿವಾದಿತ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು.
ಆದರೆ, 2026ರ ಅ.7ರಂದು ಅರ್ಜಿಯ ವಿಚಾರಣೆ ನಡೆದ ಸಂದರ್ಭದಲ್ಲಿ ಅಧ್ಯಕ್ಷರು ಉಳಿದ ಪದಾಧಿಕಾರಿಗಳೊಂದಿಗೆ ಚರ್ಚಿಸದೆ, ಅ.3ರಂದು ಉಪನಿಬಂಧಕರಿಗೆ ರಾಜೀನಾಮೆ ಸಲ್ಲಿಸಿ ಬಳಿಕ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಹಿಂಪಡೆದಿದ್ದಾರೆ ಎಂದು ಕೆ. ಮೋಹನ್ ಆರೋಪಿಸಿದರು.
ಅಧ್ಯಕ್ಷರ ರಾಜೀನಾಮೆಯನ್ನು ಅಂಗೀಕರಿಸುವ ಅಧಿಕಾರ ಉಪನಿಬಂಧಕರಿಗೆ ಇರುವುದಿಲ್ಲ. ಸಂಘದ ಬೈಲಾ ನಿಯಮಗಳ ಪ್ರಕಾರ ರಾಜೀನಾಮೆ ಸ್ವೀಕರಿಸುವ ಹಾಗೂ ಅಂಗೀಕರಿಸುವ ಅಧಿಕಾರ ಕಾರ್ಯಕಾರಿ ಸಮಿತಿಗೆ ಮಾತ್ರ ಇರುತ್ತದೆ ಎಂಬುದು ತಮ್ಮ ವಾದವಾಗಿದೆ ಎಂದು ತಿಳಿಸಿದರು.