ಕೃಷ್ಣಾ ಉಪಕಾಲುವೆ 25, 26, 27ಕ್ಕೆ ತಕ್ಷಣ ನೀರು ಹರಿಸಿ: ರೈತರ ಆಗ್ರಹ
ಲೋಕದರ್ಶನ ವರದಿ
ಇಂಡಿ 15: ತೀವ್ರ ಬರಗಾಲದಿಂದ ತತ್ತರಿಸಿರುವ ರೈತರ ಹಿತದೃಷ್ಟಿಯಿಂದ ಕೃಷ್ಣಾ ಮುಖ್ಯ ಕಾಲುವೆಯ ಉಪಕಾಲುವೆಗಳಾದ 25, 26 ಮತ್ತು 27ನೇ ಕಾಲುವೆಗಳಿಗೆ ಕೂಡಲೇ ನೀರು ಹರಿಸಬೇಕು ಎಂದು ಲಚ್ಚ್ಯಾಣ, ಅಹಿರಸಂಗ, ಲೋಣಿ, ಪಡನೂರ ಹಾಗೂ ಭೈರುಣಗಿ ಗ್ರಾಮದ ರೈತರು ಆಗ್ರಹಿಸಿದ್ದಾರೆ.ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಅವರ ನೇತೃತ್ವದಲ್ಲಿ ರೈತರು ಇಂಡಿ ರೈಲ್ವೆ ನಿಲ್ದಾಣದಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿಗೆ ತೆರಳಿ, ಸಂಬಂಧಪಟ್ಟ ಅಧಿಕಾರಿ ನಾಗನಗೌಡ ಕಟ್ಟೆ ಅವರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಉಪಕಾಲುವೆಗಳಿಗೆ ನೀರು ಹರಿಸುವುದು ಅತ್ಯಗತ್ಯವಾಗಿದೆ. ಕಾಲುವೆಗಳಿಗೆ ನೀರು ಹರಿಸಿದರೆ ಹಳ್ಳ-ಕೊಳ್ಳಗಳು ತುಂಬಲಿದ್ದು, ಕೊಳವೆಬಾವಿಗಳ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಇದರಿಂದ ಕೃಷಿಗೆ ಅನುಕೂಲವಾಗುವುದರ ಜತೆಗೆ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆಯಾಗಲಿದೆ ಎಂದು ರೈತರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಆದ್ದರಿಂದ ಅಧಿಕಾರಿಗಳು ರೈತರ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಯಾವುದೇ ವಿಳಂಬವಿಲ್ಲದೆ 25, 26 ಮತ್ತು 27ನೇ ಉಪಕಾಲುವೆಗಳಿಗೆ ನೀರು ಹರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ರೈತರ ಈ ನ್ಯಾಯಯುತ ಬೇಡಿಕೆಯನ್ನು ನಿರ್ಲಕ್ಷಿಸಿದರೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಬಿ.ಡಿ. ಪಾಟೀಲ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಈರಣ್ಣ ಮುಜಗೊಂಡ, ಭೀಮು ಏಳಮೇಲಿ, ಯಶವಂತ ಕಾಡೆಗೋಳ, ಎಂ.ಜೆ. ಪಾಟೀಲ, ಬಸು ಕರಾಳೆ, ಕಲ್ಲನಗೌಡ ಬಿರಾದಾರ, ರವಿಕುಮಾರ ನಾವಿ,ಸಿದ್ದರಾಮ ವಾಲಿಕಾರ, ಬಸವರಾಜ ಲಾಳಸೇರಿ, ಎಸ್.ಬಿ. ಆಶಾಪೂರ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.