ಸೃಜನಶೀಲ ಆಲೋಚನೆಗಳ ಕಾರ್ಯರೂಪಕ್ಕೆ ಎಐ ಬಳಸಿರಿ
ಲೋಕದರ್ಶನ ವರದಿ
ಬಳ್ಳಾರಿ 15: ಎಐ ಯುಗದಲ್ಲಿ ಕೃತಕ ಬುದ್ಧಿಮತ್ತೆ ಕುರಿತು ಕೇವಲ ತಿಳಿದುಕೊಂಡರೆ ಸಾಲದು ಅದನ್ನು ನಮ್ಮ ಸ್ವಜ್ಞಾನಕ್ಕೆ ಅನುಗುಣವಾಗಿ ಬಳಸಿಕೊಳ್ಳುವ ಚಾಕಚಕ್ಯತೆ ಹೊಂದಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಹೇಳಿದರು.
ವಿಶ್ರೀಕೃ ವಿಶ್ವವಿದ್ಯಾಲಯದ ಗಣಕ ವಿಜ್ಞಾನ ವಿಭಾಗ ಹಾಗೂ ವಿಶನ್ ಡಿಜಿಟಲ್ ಇಂಡಿಯಾ, ಗ್ಲೋಬಲ್ ಡಿಜಿಟಲ್ ಯುನಿವರ್ಸಿಟಿ ಹಾಗೂ ಗ್ಲೋಬಲ್ ಎಐ ಸೊಸೈಟಿ ಜಂಟಿ ಸಹಭಾಗಿತ್ವದಲ್ಲಿ ಆರಂಭವಾಗಿರುವ ‘ಶೈಕ್ಷಣಿಕ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ; ಬಹುಶೀಸ್ತೀಯ ಶಿಕ್ಷಣ, ಸಂಶೋಧನೆ ಮತ್ತು ನಾವಿನ್ಯತೆ’ ಎಂಬ ಎರಡು ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಎಐ ಎನ್ನುವುದು ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಹರಡಿಕೊಂಡಿದೆ. ಎಐ ಕುರಿತು ಸಮರ್ಕವಾಗಿ ಅರಿತುಕೊಂಡು ಅದನ್ನು ನಮ್ಮ ಅಗತ್ಯತೆಗೆ ತಕ್ಕಂತೆ ಬಳಸಿಕೊಂಡಲ್ಲಿ ಅನುಕೂಲತೆಗಳು ಹೆಚ್ಚು ಎಂದು ಅಭಿಪ್ರಾಯಪಟ್ಟರು.
ವಿಜಯನಗರ ಸಂಸ್ಥಾನದ ದೊರೆ ಕೃಷ್ಣದೇವರಾಯರು ತಮ್ಮ ಆಸ್ಥಾನದಲ್ಲಿ ಅಷ್ಟ ದಿಗ್ಗಜ ಜ್ಞಾನಗಣವನ್ನು ಹೊಂದಿದ್ದರು. ಅದರಂತೆಯೇ ಇಂದು ಹಲವಾರು ಎಐ ಸಾಧನಗಳು ನಮ್ಮ ದೈನಂದಿನ ಜೀವನದಲ್ಲಿ ಅಷ್ಟ ದಿಕ್ಕುಗಳಂತೆ ಕೆಲಸ ಮಾಡುತ್ತಿವೆ ಎಂದರು.