ನಾಗಾಲ್ಯಾಂಡ್ನಲ್ಲಿ ಕಲಬೆರಕೆ ಮದ್ಯ ದುರಂತ: ಮೊಕೊಕ್ಚುಂಗ್ನಲ್ಲಿ ಮತ್ತೆ ಮೂವರ ಸಾವು, ಮೃತರ ಸಂಖ್ಯೆ 11ಕ್ಕೆ ಏರಿಕೆ
ದಿಮಾಪುರ್, ಅ. 17 : ನಾಗಾಲ್ಯಾಂಡ್ನ ಮೊಕೊಕ್ಚುಂಗ್ ಜಿಲ್ಲೆಯ ಲಾಂಗ್ಪಾಯಿಮ್ಸೆನ್ ಗ್ರಾಮದಲ್ಲಿ ಕಲಬೆರಕೆ ಮದ್ಯ ಸೇವಿಸಿದ ಶಂಕೆಯಿಂದ ಮತ್ತೆ ಮೂವರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸಂಭವಿಸಿರುವ ಮದ್ಯ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಕಳೆದ ತಿಂಗಳು ಇದೇ ಜಿಲ್ಲೆಯ ಮಾಂಗ್ಕೊಲೆಂಬಾ ಮತ್ತು ಪೊಲೀಸ್ ಠಾಣೆ-II ವ್ಯಾಪ್ತಿಯಲ್ಲಿ ಶಂಕಿತ ಕಲಬೆರಕೆ ಮದ್ಯ ಸೇವನೆಯಿಂದ ಎಂಟು ಮಂದಿ ಮೃತಪಟ್ಟಿದ್ದರು.
ಅಕ್ಟೋಬರ್ 16ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಅಕ್ಟೋಬರ್ 15ರ ರಾತ್ರಿ ಮೂವರು ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಮೊಕೊಕ್ಚುಂಗ್ ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಅಸ್ಸಾಂ ಮೂಲದ ಚುಂಗ್ಕೈ (50), ಸ್ಯಾಮ್ಯುಯೆಲ್ (24) ಮತ್ತು ಬುಬಾಯಿ ಉರಾಂಗ್ (36) ಎಂದು ಗುರುತಿಸಲಾಗಿದೆ.
ಈ ಮೂವರು ಲಾಂಗ್ಪಾಯಿಮ್ಸೆನ್ ಗ್ರಾಮದಲ್ಲಿ ಕೃಷಿ ಕೆಲಸ ಮಾಡುತ್ತಿದ್ದು, ತಾತ್ಕಾಲಿಕವಾಗಿ ಅಲ್ಲಿಯೇ ವಾಸಿಸುತ್ತಿದ್ದರು.
ಪ್ರಾಥಮಿಕ ತನಿಖೆಯ ಪ್ರಕಾರ, ಅಕ್ಟೋಬರ್ 14ರ ರಾತ್ರಿ ಈ ಮೂವರು ರಮ್ ಸೇವಿಸಿದ್ದರು ಎನ್ನಲಾಗಿದೆ. ಬಳಿಕ ಅವರಿಗೆ ತಲೆಸುತ್ತು, ವಾಕರಿಕೆ ಮತ್ತು ದೃಷ್ಟಿ ಮಂಜಾಗುವಂತಹ ಲಕ್ಷಣಗಳು ಕಾಣಿಸಿಕೊಂಡಿದ್ದವು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಮೃತರ ಸಾವಿಗೆ ನಿಖರವಾದ ಕಾರಣ ವೈದ್ಯಕೀಯ ಮತ್ತು ವಿಧಿವಿಜ್ಞಾನ ಪರೀಕ್ಷೆಗಳ ಬಳಿಕವಷ್ಟೇ ದೃಢಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸಾವಿನ ಸುತ್ತಲಿನ ಪರಿಸ್ಥಿತಿಗಳು ಹಾಗೂ ಶಂಕಿತ ಕಲಬೆರಕೆ ಮದ್ಯದ ಮೂಲದ ಕುರಿತು ತನಿಖೆ ನಡೆಯುತ್ತಿದೆ.
ಮದ್ಯದ ಮಾದರಿಗಳು ಹಾಗೂ ಸಂಬಂಧಿತ ಸಾಕ್ಷ್ಯಗಳನ್ನು ರಾಸಾಯನಿಕ ವಿಶ್ಲೇಷಣೆಗಾಗಿ ಕೋಲ್ಕತ್ತಾದ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (CFSL) ಕಳುಹಿಸಲಾಗುವುದು. ಸಾವಿನ ಕಾರಣವನ್ನು ಪತ್ತೆಹಚ್ಚುವುದರ ಜೊತೆಗೆ, ಶಂಕಿತ ಕಲಬೆರಕೆ ಮದ್ಯದ ಮೂಲ ಮತ್ತು ಪೂರೈಕೆ ಸರಪಳಿಯನ್ನು ಗುರುತಿಸಲು ಈ ಪರೀಕ್ಷೆಗಳು ನೆರವಾಗಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.